Headlines

ಏಪ್ರಿಲ್ 24 ಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿವಮೊಗ್ಗಕ್ಕೆ ಭೇಟಿ !!!! : ಯಾಕೆ ಗೊತ್ತಾ ????

ಈ ವರ್ಷದ ಪಂಚಾಯತ್​ರಾಜ್ ದಿವಸ್ ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದಲ್ಲಿ ಆಚರಣೆ ಮಾಡಲಿದ್ದು, ಏಪ್ರಿಲ್ 24ರಂದು ಶಿವಮೊಗ್ಗ ಜಿಲ್ಲೆಗೆ ಆಗಮಿಸುವ ಸಾಧ್ಯತೆ ಇದೆ. ಪ್ರಧಾನ ಮಂತ್ರಿ ಕಾರ್ಯಾಲಯ ಈ ಕುರಿತು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದು, ಜಿಲ್ಲೆಯ ಒಂದು ಗ್ರಾಮ ಪಂಚಾಯಿತಿ ಆಯ್ಕೆ ಮಾಡಲಿದ್ದಾರೆ.

ಈಗಾಗಲೆ ಶಿವಮೊಗ್ಗ ತಾಲೂಕಿನ ಎರಡು ಗ್ರಾಪಂಗಳನ್ನು ಕೇಂದ್ರೀಕರಿಸಿ ಹಲವು ಸುತ್ತಿನ ಸಭೆ ನಡೆಸಿದ್ದು, ಪ್ರಧಾನಿ ಭದ್ರತೆ, ಸಮಯದ ಹೊಂದಾಣಿಕೆ, ರಸ್ತೆ ಮಾರ್ಗದ ವಾಹನ ದಟ್ಟಣೆ ಎಲ್ಲವನ್ನೂ ಗಮನಿಸಿ ಯಾವುದಾದರೂ ಒಂದು ಗ್ರಾಪಂಗೆ ಪ್ರಧಾನಿ ಭೇಟಿ ಅಂತಿಮಗೊಳಿಸಿ ಅವರ ಕಚೇರಿಗೆ ಮಾಹಿತಿ ನೀಡಲಿದ್ದಾರೆ. ಬಳಿಕ ಪ್ರಧಾನಿ ಪ್ರವಾಸದ ಅಂತಿಮ ಮಾಹಿತಿ ಜಿಲ್ಲಾಡಳಿತದ ಕೈ ಸೇರಲಿದೆ.

ಮೊದಲಿಗೆ ಕೊಮ್ಮನಾಳ್ ಗ್ರಾಪಂ ಆಯ್ಕೆ ಮಾಡಲಾಗಿತ್ತಾದರೂ ಇದೀಗ ಹೊಳಲೂರು ಗ್ರಾಪಂ ಸೂಕ್ತ ಎಂಬ ಅಭಿಪ್ರಾಯಕ್ಕೆ ಬರಲಾಗಿದೆ. ಶಿವಮೊಗ್ಗ-ಸವಳಂಗ ಮುಖ್ಯ ರಸ್ತೆಯಿಂದ ಒಂದು ಕಿಮೀ ಕ್ರಮಿಸಿದರೆ ಕೊಮ್ಮನಾಳ್ ಗ್ರಾಪಂ ಸಿಗುತ್ತದೆ. ಇದು ಮಾದರಿ ಗ್ರಾಪಂ ಎಂಬುದು ನಿಜ. ಆದರೆ ಇಲ್ಲಿಗೆ ತಲುಪಲು ಪ್ರಧಾನಿ ಅವರಿಗೆ ರಸ್ತೆ ಮಾರ್ಗದ ತೊಡಕು ಎದುರಾಗಲಿದೆ. ಶಿವಮೊಗ್ಗ ಹೆಲಿಪ್ಯಾಡ್​ಗೆ ಆಗಮಿಸುವ ಪ್ರಧಾನಿ ಸವಳಂಗ ರಸ್ತೆಯಲ್ಲಿ ಸಾಗಲು ರೈಲ್ವೆ ಮೇಲ್ಸೇತುವೆ ಕಾಮಗಾರಿ ಅಡ್ಡಿಯಾಗಿದೆ. ಈ ಕಾರಣದಿಂದ ಕೊಮ್ಮನಾಳ್ ಗ್ರಾಪಂ ಭೇಟಿ ಕಷ್ಟ ಸಾಧ್ಯ.

ಹೊನ್ನಾಳಿ ರಸ್ತೆಯಲ್ಲಿರುವ ಹೊಳಲೂರು ಗ್ರಾಪಂ ಮಾದರಿಯಾಗಿ ಗುರುತಿಸಿಕೊಂಡಿದೆ. ಸುಮಾರು ಎರಡು ವರ್ಷಗಳ ಹಿಂದೆಯೇ ಇಲ್ಲಿ ಘನತ್ಯಾಜ್ಯ ವಿಲೇವಾರಿ ಘಟಕ ಆರಂಭವಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಜಿಲ್ಲೆಯ ದೊಡ್ಡ ಗ್ರಾಪಂಗಳಲ್ಲಿ ಇದೂ ಒಂದು. ಮುಖ್ಯ ರಸ್ತೆಗೆ 100 ಮೀಟರ್ ಸಮೀಪದಲ್ಲಿ ಗ್ರಾಪಂ ಕಚೇರಿಯೂ ಇದೆ. ಭದ್ರತೆ ಸೇರಿ ಪ್ರಧಾನಿ ಭೇಟಿಗೆ ಯಾವುದೇ ತೊಡಕು ಎದುರಾಗುವುದಿಲ್ಲ. ಹೀಗಾಗಿ ಅಂತಿಮ ಹಂತದಲ್ಲಿ ಪ್ರಧಾನಿ ಭೇಟಿಗೆ ಹೊಳಲೂರು ಆಯ್ಕೆಯಾಗುವ ಸಂಭವವೇ ಹೆಚ್ಚು.

 ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 24ರಂದು ಶಿವಮೊಗ್ಗಕ್ಕೆ ಭೇಟಿ ನೀಡುತ್ತಿರುವುದು ಅವರ ಮೊದಲ ಸರ್ಕಾರಿ ಕಾರ್ಯಕ್ರಮವಾಗಿದೆ. 2018ರಲ್ಲಿ ವಿಧಾನಸಭೆ ಚುನಾವಣೆ ಪ್ರಚಾರಕ್ಕೆ ಮೋದಿ ಶಿವಮೊಗ್ಗಕ್ಕೆ ಆಗಮಿಸಿದ್ದರು. ಅದಕ್ಕೂ ಮುನ್ನ ಅವರು ಗುಜರಾತ್ ಸಿಎಂ ಆಗಿದ್ದ ಸಂದರ್ಭದಲ್ಲಿ ತೀರ್ಥಹಳ್ಳಿಗೆ ಆಗಮಿಸಿ ಆರಗ ಜ್ಞಾನೇಂದ್ರ ಪರ ವಿಧಾನಸಭೆ ಚುನಾವಣೆ ಪ್ರಚಾರ ಮಾಡಿದ್ದರು.

ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 2010ರಲ್ಲಿ ರಾಷ್ಟ್ರೀಯ ಪಂಚಾಯತ್​ರಾಜ್ ದಿವಸ್ ಆಚರಣೆಗೆ ಬಂದಿತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಈ ದಿವಸಕ್ಕೆ ಇನ್ನಷ್ಟು ಮಹತ್ವ ದೊರೆಯಿತು. ಆಡಳಿತ ವಿಕೇಂದ್ರೀಕರಣ ವ್ಯವಸ್ಥೆ ಹಾಗೂ ಸ್ಥಳೀಯ ಆಡಳಿತವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಸಾಧನೆಗೈದ ಗ್ರಾಪಂಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಈ ಕಾರ್ಯಕ್ರಮ ಪ್ರಮುಖ ಆಶಯ.

Leave a Reply

Your email address will not be published. Required fields are marked *