RIPPONPETE | ವಿನಾಯಕ ವೃತ್ತ ಶೀಘ್ರ ಅಗಲೀಕರಣ – ನೀಲನಕ್ಷೆ ಬಿಡುಗಡೆಗೊಳಿಸಿದ ಶಾಸಕ ಬೇಳೂರು ಗೋಪಾಲಕೃಷ್ಣ
ರಿಪ್ಪನ್‌ಪೇಟೆ : ನಾಲ್ಕು ಜಿಲ್ಲೆಗಳನ್ನು ಸಂಪರ್ಕಿಸುವ ಹೃದಯಭಾಗವಾಗಿರುವ ರಿಪ್ಪನ್‌ಪೇಟೆ ವಿನಾಯಕ ಸರ್ಕಲ್ ಶೀಘ್ರದಲ್ಲೇ ಅಗಲೀಕರಣಗೊಂಡು, ಅತ್ಯಾಧುನಿಕ ಸೌಲಭ್ಯಗಳೊಂದಿಗೆ “ಮಾದರಿ ಸರ್ಕಲ್” ಆಗಿ ರೂಪಾಂತರಗೊಳ್ಳಲಿದೆ. ಈ ಸಂಬಂಧ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಲೋಕೋಪಯೋಗಿ ಮತ್ತು ಮೆಸ್ಕಾಂ ಇಲಾಖೆಯ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ, ತಯಾರಾಗಿರುವ ನೀಲನಕ್ಷೆ (ಬ್ಲೂಪ್ರಿಂಟ್) ಅನ್ನು ಬಿಡುಗಡೆಗೊಳಿಸಿದರು.
ನಂತರ ಮಾದ್ಯಮದವರೊಂದಿಗೆ ಶಾಸಕ ಬೇಳೂರು ಗೋಪಾಲಕೃಷ್ಣ ಮಾತನಾಡಿ,“ಸರ್ಕಲ್ ವಿಸ್ತರಣೆ, ಬಸ್ ಶೆಲ್ಟರ್ ನಿರ್ಮಾಣ, ಬಾಕ್ಸ್ ಡ್ರೈನೇಜ್ ವ್ಯವಸ್ಥೆ, ಹೈಮಾಸ್ಟ್ ದೀಪ, ನಾಮಫಲಕ ಮತ್ತು ವಿದ್ಯುತ್ ಕಂಬಗಳ ಸ್ಥಳಾಂತರ ಸೇರಿದಂತೆ ಒಟ್ಟು ₹2 ಕೋಟಿ ರೂ. ವೆಚ್ಚದ ಕಾಮಗಾರಿಗೆ ಈಗಾಗಲೇ ಅನುಮೋದನೆ ದೊರೆತಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಮಳೆ ಕಡಿಮೆಯಾಗುತ್ತಿದ್ದಂತೆ ಕಾಮಗಾರಿ ಪ್ರಾರಂಭಗೊಳ್ಳಲಿದೆ,” ಎಂದು ತಿಳಿಸಿದರು.

ಮಳೆಯಿಂದ ಹದಗೆಟ್ಟಿರುವ ಸೂಡೂರು – ರಿಪ್ಪನ್‌ಪೇಟೆ ರಸ್ತೆಯನ್ನು ಮರು ಡಾಂಬರೀಕರಣ ಮಾಡಲು ಈಗಾಗಲೇ ಹಣ ಬಿಡುಗಡೆ ಮಾಡಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದೆ ಮಳೆ ಕಡಿಮೆಯಾಗುತಿದ್ದಂತೆ ಕಾಮಗಾರಿ ಪ್ರಾರಂಭಿಸುತ್ತೇವೆ ಎಂದರು.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೆ.ಪಿ.ಎಸ್. ಶಾಲೆ ಆರಂಭವಾಗಲಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ರಸ್ತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಜಾಗದಲ್ಲಿ ಸುಸಜ್ಜಿತ ಬಸ್ ನಿಲ್ದಾಣ ನಿರ್ಮಿಸುವ ಉದ್ದೇಶವಿದೆ ಎಂದರು.ವಿನಾಯಕ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ಶಿಥಿಲಗೊಂಡ ಸಭಾಭವನ ಕೆಡವಿ, ಹೊಸ ಸಭಾಭವನ ನಿರ್ಮಾಣಕ್ಕೆ ₹25 ಲಕ್ಷ ರೂ. ಅನುದಾನ ,ದೇವಸ್ಥಾನ ಅಭಿವೃದ್ಧಿಗೂ ಶೀಘ್ರದಲ್ಲೇ ಹೆಚ್ಚಿನ ಅನುದಾನ ಬಿಡುಗಡೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಹೊಸನಗರ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಮೌಳಿ, ಉಪಾಧ್ಯಕ್ಷ ಉಬೇದುಲ್ಲಾ ಷರೀಫ್, ಹೋಬಳಿ ಘಟಕದ ಅಧ್ಯಕ್ಷ ಗಣಪತಿ ಗವಟೂರು, ಎ.ಪಿ.ಎಂ.ಸಿ. ಅಧ್ಯಕ್ಷ ಈಶ್ವರಪ್ಪಗೌಡ ಹಾರೋಹಿತ್ತಲು, ಡಿ.ಈ. ಮಧುಸೂಧನ್, ಆಶೀಫ್‌ಭಾಷಾ, ನಿರೂಪ್ ಕುಮಾರ್, ರವೀಂದ್ರ ಕೆರೆಹಳ್ಳಿ, ಪ್ರಕಾಶ್ ಪಾಲೇಕರ್, ಧನಲಕ್ಷ್ಮಿ, ವಿನೋಧ, ಅನುಪಮ ಹಾಗೂ ಸಂಬಂಧಿತ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.



