POSTMAN NEWS

ನೈಜ ಸುದ್ದಿ ನೇರ ಬಿತ್ತರ..

ಹೊಂಬುಜದಲ್ಲಿ ಪ್ರೊ. ಶಾಂತಿನಾಥ ದಿಬ್ಬದರಿಗೆ ‘ಸಿದ್ಧಾಂತಕೀರ್ತಿ’ ಪ್ರಶಸ್ತಿ ಪ್ರದಾನ

IMG 20260312 WA0001

Prof. Shantinath Dibbada was honored with the Siddhantakeerthi Award at Hombuja Sri Kshetra. Religious leaders and dignitaries praised his contributions to Jain literature and research.

ಹೊಂಬುಜ : ಜೈನ ಧರ್ಮವು ಜೈನ ಸಾಹಿತ್ಯದ ಮೂಲಕ ಜಗತ್ತಿಗೆ ಅಮೂಲ್ಯ ವೃತ್ತಾಂತಗಳನ್ನು ನೀಡಿದ್ದು, ಆದಿಕವಿ ಪಂಪನ ಕೃತಿಗಳು ಇಂದಿನ ಕಾಲದಲ್ಲಿಯೂ ಪ್ರಸ್ತುತತೆಯನ್ನು ಹೊಂದಿವೆ ಎಂದು ಸಂಶೋಧಕ ಹಾಗೂ ವಿಶ್ರಾಂತ ಕುಲಸಚಿವರಾದ ಪ್ರೊ. ಶಾಂತಿನಾಥ ದಿಬ್ಬದರವರು ಅಭಿಪ್ರಾಯಪಟ್ಟರು.

ಹೊಂಬುಜ ಶ್ರೀಕ್ಷೇತ್ರದ ವತಿಯಿಂದ ಪ್ರದಾನವಾಗುವ ‘ಸಿದ್ಧಾಂತಕೀರ್ತಿ’ ಪ್ರಶಸ್ತಿಯನ್ನು ಪರಮಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳವರಿಂದ ಸ್ವೀಕರಿಸಿದ ನಂತರ ಮಾತನಾಡಿದ ಅವರು, ಪಂಪ ರಚಿತ ಆದಿಪುರಾಣದ ವಿವಿಧ ಸನ್ನಿವೇಶಗಳನ್ನು ಅವಲೋಕಿಸಿ ಜೈನ ತತ್ವದ ಮಹತ್ವವನ್ನು ವಿವರಿಸಿದರು. ಸ್ಯಾದ್ವಾದ ತತ್ವದ ಮೂಲಕ ಜೀವಜಗತ್ತಿನ ಹಾಗೂ ಪ್ರಕೃತಿಯ ರಕ್ಷಣೆಯ ಜೊತೆಗೆ ಮಾನವ ಕಲ್ಯಾಣದ ಸಂದೇಶವನ್ನು ಅರಿಯಬಹುದೆಂದು ಹೇಳಿದರು.

ಸಾಹಿತ್ಯ ಪ್ರಭೆಯನ್ನು ಬೆಳಗಿಸಲು ಹೊಂಬುಜ ಶ್ರೀಕ್ಷೇತ್ರವು ಸಾಹಿತ್ಯಾರಾಧನೆಯ ಮಹತ್ವವನ್ನು ಸಾರುತ್ತಿರುವುದು ಅಭಿನಂದನೀಯ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಪ್ರವಚನ ನೀಡಿದ ಪರಮಪೂಜ್ಯ ಸ್ವಸ್ತಿಶ್ರೀಗಳು, ಯುವಪೀಳಿಗೆಯ ವಿದ್ಯಾವಂತರಿಗೆ ಹಳೆಗನ್ನಡ ಸಾಹಿತ್ಯದ ಅಭಿರುಚಿ ಬೆಳೆಸಿ ಜೀವನದಲ್ಲಿ ಆದರ್ಶವಾಗುವಂತೆ ಆಶಿಸಿದರು. ಪ್ರೊ. ಶಾಂತಿನಾಥ ದಿಬ್ಬದರವರು ಜೈನ ಸಾಹಿತ್ಯದ ಐತಿಹ್ಯ ಹಾಗೂ ಸಾರವನ್ನು ಸರಳವಾಗಿ ಜನರಿಗೆ ಪರಿಚಯಪಡಿಸಿ, ಅನೇಕ ಸಂಶೋಧನಾ ಕೃತಿಗಳನ್ನು ಪ್ರಕಟಿಸಿರುವುದು ಸಾಹಿತ್ಯಾಭಿಮಾನಿಗಳಿಗೆ ಪ್ರೇರಣೆಯಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಪ್ರೊ. ದಿಬ್ಬದರವರನ್ನು ಅಭಿನಂದಿಸಿ, ಅಹಿಂಸಾಧರ್ಮದ ಮೂಲಕ ರಾಷ್ಟ್ರೀಯ ಭಾವೈಕ್ಯತೆ, ಶಾಂತಿ ಮತ್ತು ನೆಮ್ಮದಿಯ ಸಂದೇಶವನ್ನು ಜೈನ ಧರ್ಮ ನೀಡುತ್ತಿರುವುದನ್ನು ವಿವರಿಸಿದರು.

ಶ್ರೀಕ್ಷೇತ್ರದ ಭಕ್ತರಾದ ವಿಜಯ ಪಾಟ್ನಿಯವರು ಅತಿಶಯ ಕ್ಷೇತ್ರದ ಮಹಿಮೆ ಸರ್ವರಿಗೂ ಪ್ರೇರಣೆಯಾಗಲಿ ಎಂದು ಶುಭಾಶಯ ಕೋರಿದರು.

ಕಾರ್ಯಕ್ರಮದಲ್ಲಿ ಶ್ರೀಮಠದ ಆಡಳಿತಾಧಿಕಾರಿ ಸಿ.ಡಿ. ಅಶೋಕ ಕುಮಾರ್ ಸ್ವಾಗತಿಸಿ ಪ್ರಶಸ್ತಿ ಪುರಸ್ಕೃತರ ಪರಿಚಯ ಮಾಡಿದರು. ಯಶೋಧರ ಇಂದ್ರರು ಪ್ರಶಸ್ತಿ ಪತ್ರ ವಾಚನ ಮಾಡಿದರು. ಹೆಚ್.ಬಿ. ಸಂತೋಷಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ಇದೇ ಸಂದರ್ಭದಲ್ಲಿ ರಥೋತ್ಸವ ದಾನಿಗಳನ್ನೂ ಪೂಜ್ಯ ಶ್ರೀಗಳು ಅಭಿನಂದಿಸಿ ಆಶೀರ್ವದಿಸಿದರು.

ಕಾರ್ಯಕ್ರಮದಲ್ಲಿ ಪ್ರೊ. ಶಾಂತಿನಾಥ ದಿಬ್ಬದರವರ ಧರ್ಮಪತ್ನಿ ರತ್ನ ಶಾಂತಿನಾಥ ದಿಬ್ಬದರವರು ಸೇರಿದಂತೆ ಅನೇಕ ಭಕ್ತರು ಉಪಸ್ಥಿತರಿದ್ದರು.

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.