ರಿಪ್ಪನ್ ಪೇಟೆ : ಪಟ್ಟಣ ಹಾಗೂ ಅರಸಾಳು ಗ್ರಾಮದಲ್ಲಿ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮ, ಖುಷಿ, ಉಲ್ಲಾಸಗಳಿಂದ ಆಚರಿಸಿದರು .
ಶುಕ್ರವಾರ ರಾತ್ರಿ ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಮತ್ತು ಬಲಿ ಪೂಜೆಗಳೊಂದಿಗೆ ಸಂಭ್ರಮದ ಕ್ರಿಸ್ಮಸ್ ಆಚರಣೆ ನಡೆಯಿತು. ಸಾಮೂಹಿಕ ಪ್ರಾರ್ಥನೆ, ದಿವ್ಯಬಲಿ ಪೂಜೆ ನಡೆಯುವ ಭಕ್ತಿ ಶ್ರದ್ಧೆಯ ಕೇಂದ್ರವಾದ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು . ಚರ್ಚ್‌ಗಳ ವಠಾರದಲ್ಲಿ ಸುಂದರ ಗೋದಲಿಗಳನ್ನು ರಚಿಸಿ, ಏಸುಕ್ರಿಸ್ತರ ಜನನವನ್ನು ಸಂಕೇತಿಸುವ ದೃಶ್ಯಗಳ ಮರುಸೃಷ್ಟಿಯಲ್ಲಿ ಸಂಭ್ರಮಿಸಿದರು . ಗೋದಲಿಗಳ ಮುಂದೆ ಮಕ್ಕಳು. ಹಿರಿಯರು. ಕುಟುಂಬ ವರ್ಗದವರು ಖುಷಿ ಪಡುವ, ಸೆಲ್ಫೀ ಜತೆ ಆನಂದಿಸುವ ದೃಶ್ಯಗಳು ಕಂಡು ಬಂತು.
ರಿಪ್ಪನ್ ಪೇಟೆ ಗುಡ್ ಶೇಫರ್ಡ್ ಚರ್ಚಿನ ಫಾದರ್ ಬಿನೋಯ್ ಚರ್ಚ್‌ನ ಕ್ರಿಸ್ಮಸ್ ಬಲಿಪೂಜೆಯಲ್ಲಿ ಭಾಗವಹಿಸಿ ಹಬ್ಬದ ಸಂದೇಶ ನೀಡಿದರು. ಕಳೆದ ಎರಡು ವರ್ಷಗಳಿಂದ ಕೊರೊನಾ ಮತ್ತಿತರ ಕಾರಣಗಳಿಂದ ಜನರು ಸಂಕಷ್ಟದಲ್ಲಿದ್ದು, ಇಂಥ ಸಂದರ್ಭದಲ್ಲಿ ಏಸು ಕ್ರಿಸ್ತರ ಪ್ರೀತಿ ಮತ್ತು ಸೇವೆಯ ಸಂದೇಶ ಹೆಚ್ಚು ಪ್ರಸ್ತುತವಾಗಬೇಕು. ಏಸು ಕ್ರಿಸ್ತರ ಸಂದೇಶ ಇಡೀ ಜಗತ್ತಿಗೆ ಬೆಳಕು ತೋರಿಸಿದೆ ಎಂದರು.
ರಾತ್ರಿ ಚರ್ಚ್‌ಗಳಲ್ಲಿ ಜರುಗಿದ ವಿಶೇಷ ಪ್ರಾರ್ಥನೆಗಳಲ್ಲಿ ಕ್ರೈಸ್ತ ಬಾಂಧವರು ಶ್ರದ್ಧೆ ಮತ್ತು ಭಕ್ತಿಯಿಂದ ಭಾಗವಹಿಸಿದ್ದರು. ಕ್ರಿಸ್ಮಸ್ ಗೀತೆಗಳು (ಕ್ಯಾರೊಲ್ಸ್) ಆಚರಣೆಗೆ ವಿಶೇಷ ರಂಗು ನೀಡಿದವು. ಬಲಿ ಪೂಜೆ ಬಳಿಕ ಕ್ರೈಸ್ತ ಬಾಂಧವರು ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಕೇಕ್ ಕತ್ತರಿಸಿ, ಏಸು ಕ್ರಿಸ್ತರ ಹುಟ್ಟುಹಬ್ಬದ ಶಾಂತಿಯ ಸಂದೇಶ ಸಾರಲಾಯಿತು. ಕ್ರಿಸ್ಮಸ್ ತಾತಾ ‘ಸಾಂತಾಕ್ಲಾಸ್’ ಆಕರ್ಷಣೆಯಾಗಿತ್ತು. ಪುಟಾಣಿಗಳು ಸಾಂತಾ ಕ್ಲಾಸ್‌ನಿಂದ ಚಾಕಲೇಟ್ ಪಡೆದು ಸಂಭ್ರಮಿಸಿದರು.
ಸರಕಾರದ ಮಾರ್ಗಸೂಚಿಯಂತೆ ಎಲ್ಲ ಚರ್ಚ್‌ಗಳಲ್ಲಿ ಸರಳವಾಗಿ ಕಾರ್ಯಕ್ರಮ ನಡೆಸಲಾಯಿತು.
ರಿಪ್ಪನ್ ಪೇಟೆಯಗುಡ್ ಶೇಫರ್ಡ್ ಹಾಗೂ ಅರಸಾಳು ಗ್ರಾಮದ ಸಂತ ಫಾತಿಮಾ ಚರ್ಚ್‌ಗಳನ್ನು ಹಬ್ಬದ ಸಂಭ್ರಮದಲ್ಲಿ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು . ಚರ್ಚ್ ಆವರಣ, ಕ್ರೈಸ್ತರ ಮನೆಗಳು, ಪ್ರಮುಖ ಉದ್ಯಮ, ಅಂಗಡಿ, ಹೋಟೆಲ್‌ಗಳ ಎದುರು ಆಕರ್ಷಕ ಕ್ರಿಬ್ (ಗೋದಲಿ)ಗಳನ್ನು ನಿರ್ಮಿಸಲಾಗಿತ್ತು . ಕ್ರಿಸ್ಮಸ್ ಟ್ರೀ ಮತ್ತು ಅಲಂಕೃತ ನಕ್ಷತ್ರ ಗಮನ ಸೆಳೆಯುತ್ತಿತ್ತು.