ಖಾಸಗಿ ಫೋಟೋ-ವೀಡಿಯೋ ವೈರಲ್ ಮಾಡಿ ₹2 ಲಕ್ಷಕ್ಕೆ ಬೇಡಿಕೆ – ಶಿವಮೊಗ್ಗದಲ್ಲಿ ಬ್ಲ್ಯಾಕ್‌ಮೇಲ್ ಕೇಸ್




ಶಿವಮೊಗ್ಗ ಜಿಲ್ಲೆಯ ತಾಲೂಕಿನೊಂದರಲ್ಲಿ ಮಹಿಳೆಯೊಬ್ಬರ ಖಾಸಗಿ ಫೋಟೋ ಹಾಗೂ ವೀಡಿಯೋಗಳನ್ನು ಕದ್ದುಕೊಂಡು, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡಲು ಯತ್ನಿಸಿ, ಹಣಕ್ಕೆ ಬೇಡಿಕೆ ಇಟ್ಟಿರುವ ಗಂಭೀರ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗ ಸಿಇಎನ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರಿನ ಪ್ರಕಾರ, ಅಪರಿಚಿತ ಮೊಬೈಲ್ ನಂಬರ್‌ನಿಂದ ಮಹಿಳೆಯ ವಾಟ್ಸಾಪ್‌ಗೆ ಆಕೆಯ ಖಾಸಗಿ ಫೋಟೋ ಹಾಗೂ ವೀಡಿಯೋಗಳನ್ನು ಕಳುಹಿಸಿ, ಅವುಗಳನ್ನು ಡಿಲೀಟ್ ಮಾಡಬೇಕಾದರೆ ₹2 ಲಕ್ಷ ಹಣ ನೀಡಬೇಕು, ಇಲ್ಲದಿದ್ದರೆ ಜಾಲತಾಣಗಳಲ್ಲಿ ವೈರಲ್ ಮಾಡಿ ಮಾನಹಾನಿ ಮಾಡುತ್ತೇವೆ ಎಂದು ಬೆದರಿಸಲಾಗಿದೆ. ಆತಂಕಗೊಂಡ ಮಹಿಳೆ ಹಣ ನೀಡದೆ ಆ ನಂಬರ್‌ನ್ನು ಬ್ಲಾಕ್ ಮಾಡಿದ್ದರು.
ಆದರೆ ಎರಡು ದಿನಗಳ ಹಿಂದೆ, ದೂರುದಾರರ ಪತಿಯ ವಾಟ್ಸಾಪ್ ಸಂಖ್ಯೆಗೆ ಸಹ ಅದೇ ಫೋಟೋ ಮತ್ತು ವೀಡಿಯೋಗಳನ್ನು ಕಳುಹಿಸಲಾಗಿದೆ. ಈಗಾಗಲೇ ಅವು ತಾಲೂಕಿನಲ್ಲಿ ಹಲವರ ವಾಟ್ಸಾಪ್ ಗುಂಪುಗಳ ಮೂಲಕ ವೈರಲ್ ಆಗಿರುವ ಮಾಹಿತಿ ಪತಿಯ ಪರಿಚಿತರ ಮೂಲಕ ತಿಳಿದುಬಂದಿದೆ. ಇದರಿಂದ ಭಯಗೊಂಡ ದೂರುದಾರರು ತಕ್ಷಣ ಪೊಲೀಸರಿಗೆ ದೂರು ನೀಡಲು ಮುಂದಾಗಿದ್ದಾರೆ.
ಯಾವುದೋ ಮೂಲದಿಂದ ಖಾಸಗಿ ಫೋಟೋ-ವೀಡಿಯೋಗಳನ್ನು ಕದಿದು, ಅನುಮತಿ ಇಲ್ಲದೇ ಪ್ರಸಾರ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮಹಿಳೆ ಮನವಿ ಮಾಡಿಕೊಂಡಿದ್ದಾರೆ. ಸಿಇಎನ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.