ನವದೆಹಲಿ: ಒಂದು ನೇರಾನೇರ ಸಂವಾದದ ತಿರುಳು ಇದು. ಇಂದು (೧೩ಜುಲೈ) ರಾತ್ರಿ ‘ಇಂಡಿಯಾ ಟುಡೇʼ ಎಂಬ ಇಂಗ್ಲಿಷ್ ಚಾನೆಲ್ಲಿನಲ್ಲಿ ರಾಜದೀಪ್ ಸರ್ದೇಸಾಯಿ ಮತ್ತು ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ನಡುವೆ ನಡೆದ ಸಂವಾದ ಇಲ್ಲಿದೆ. ನಮ್ಮ ಕನ್ನಡ ಚಾನೆಲ್‌ಗಳಲ್ಲಾಗಲೀ ಪತ್ರಿಕೆಗಳಲ್ಲಾಗಲೀ ಕಾಣಸಿಗದ ಸ್ಪಷ್ಟ ಚಿತ್ರಣವನ್ನು ಇಲ್ಲಿ ಕಾಣಬಹುದು. ನಾವು ಮಧ್ಯಮವರ್ಗದವರು ಎಂಥ ಇಕ್ಕಟ್ಟಿನಲ್ಲಿ ಸಿಲುಕಿದ್ದೇವೆ!
ರಾಜದೀಪ್ ಸರ್ದೇಸಾಯಿ: ಅಲ್ಲಾರೀ, ಕೇಂದ್ರ ಸರಕಾರ ಹೇಳುತ್ತೆ, ಪೆಟ್ರೋಲ್ ಬೆಲೆ ಏರಿಕೆಗೆ ತಾನೊಬ್ಬನೇ ಕಾರಣ ಅಲ್ಲ; ರಾಜ್ಯ ಸರಕಾರಗಳೂ ತೆರಿಗೆ ಹಾಕುತ್ತಿವೆ. ಕಾಂಗ್ರೆಸ್ ಆಳ್ವಿಕೆ ಇರುವ ರಾಜ್ಯ ಸರಕಾರಗಳೂ ಈ ಏರಿಕೆಗೆ ಕಾರಣ ಎಂದು ಅವರು ಹೇಳ್ತಾ ಇದ್ದಾರೆ ಇದಕ್ಕೆ ಏನಂತೀರಿ?”
ಪಿ. ಚಿದಂಬರಂ: “ಹೌದು, ರಾಜ್ಯಗಳೂ ತೆರಿಗೆ ಹಾಕುತ್ತವೆ, ಕೇಂದ್ರ ಕೂಡ (ತುಸು ಜಾಸ್ತಿ) ತೆರಿಗೆ ಹಾಕುತ್ತಿದೆ. ಅದಲ್ಲ ವಿವಾದ. ಕೇಂದ್ರ ಸರಕಾರ ಈ ತೆರಿಗೆಯ ಮೇಲೆ ಸೆಸ್ ಹಾಕುತ್ತಿದೆಯಲ್ಲ! ಅದನ್ನು ಕೇಂದ್ರ ಸರಕಾರ ಮಾತ್ರ ಹಾಕೋದು. ಅದು ಪೆಟ್ರೋಲ್ ಮೇಲೆ ಪ್ರತಿ ಲೀಟರಿಗೆ ೩೩ ರೂಪಾಯಿ ಸೆಸ್ ಹಾಕುತ್ತಿದೆ. ಡೀಸೆಲ್ ಮೇಲೆ ೩೨ ರೂಪಾಯಿ. ಈ ಹಣವೆಲ್ಲ ಕೇಂದ್ರಕ್ಕೇ ಹೋಗುತ್ತದೆ. ಅದರ ತುಸು ಪಾಲೂ ರಾಜ್ಯಕ್ಕೆ ಸಿಗೋದಿಲ್ಲ. ಈ ಬಾಬ್ತಿನಲ್ಲಿ ಕೇಂದ್ರ ಪ್ರತಿವರ್ಷ ೪.೨೧ ಲಕ್ಷ ಕೋಟಿ ರೂಪಾಯಿಗಳನ್ನು ಸಂಗ್ರಹಿಸುತ್ತಿದೆ. ಅದರ ಬಗ್ಗೆ ಮಾತಾಡಿ.
ರಾಜದೀಪ್: “ಕೇಂದ್ರಕ್ಕೆ ಬೇರೆ ಆದಾಯವಿಲ್ಲ. ಆದಾಯದ ಇತರೆಲ್ಲ ಬಾಗಿಲುಗಳೂ ಮುಚ್ಚಿವೆ. ಹೀಗಿರುವಾಗ ಇದನ್ನೂ ಕೈಬಿಡಿ ಎಂದು ನೀವು ಹೇಳುತ್ತೀರಾ?”
ಚಿದಂಬರಂ: “ಸೆಸ್ ಪೂರ್ತಿ ತೆಗೀರಿ ಅಂತ ನಾನು ಹೇಳೋದಿಲ್ಲ. ಒಂದೈದು ರೂಪಾಯಿಗಳಷ್ಟಾದರೂ ಕಮ್ಮಿ ಮಾಡಿ. ಅದರಿಂದ ಬಳಕೆದಾರರಿಗೆ ತುಸ ಭಾರ ಕಮ್ಮಿಯಾಗಿ, ವ್ಯಾಪಾರ-ವಹಿವಾಟು ಹೆಚ್ಚುತ್ತಿದ್ದ ಹಾಗೆ, ಕೇಂದ್ರಕ್ಕೂ ಇತರ ಮೂಲಗಳಿಂದ ಆದಾಯ ಹೆಚ್ಚುತ್ತ ಹೋಗುತ್ತದೆ. ಸೆಸ್ ಅಂದರೆ ಕೇಡು ತೆರಿಗೆ. ತೀರ ಸಂಕಟಕಾಲದಲ್ಲಿ, ಸೀಮಿತ ಅವಧಿಗೆ ಹೇರುವಂಥದ್ದು. ಅದನ್ನೇ ಶಾಶ್ವತ ಮಾಡಿದರೆ ಹೇಗೆ?”
ರಾಜದೀಪ್: “ಪೆಟ್ರೋಲ್ ಡೀಸೆಲ್ಲನ್ನೂ ಜಿಎಸ್‌ಟಿ ವ್ಯಾಪ್ತಿಗೆ ತಂದರೆ ಒಳ್ಳೆಯದೆಂದು ತಜ್ಞರು ಹೇಳುತ್ತಿದ್ದಾರೆ. ಹಾಗೆ ಮಾಡಲು ನಿಮ್ಮ ಆಕ್ಷೇಪಣೆ ಏನು?”
ಚಿದಂಬರಂ: “ಆಕ್ಷೇಪಣೆ ಏನೂ ಇಲ್ಲ. (ಜಿಎಸ್‌ಟಿ ಲಾಗೂ ಆದರೆ ಪೆಟ್ರೋಲಿನ ಎಲ್ಲ ತೆರಿಗೆಯೂ ಕೇಂದ್ರಕ್ಕೆ ಸೇರಬೇಕು. ಅಲ್ಲಿಂದ ರಾಜ್ಯಗಳಿಗೆ ಪಾಲು ಸಿಗಬೇಕು) ಆದರೆ ಈಗ ಸರಿಯಾದ ಸಮಯ ಇಲ್ಲ. ಏಕೆಂದರೆ ರಾಜ್ಯಗಳಿಗೆ ಕೇಂದ್ರದ ಮೇಲೆ ವಿಶ್ವಾಸ ಉಳಿದಿಲ್ಲ. ಬಿಜೆಪಿ ಆಳ್ವಿಕೆಯ ರಾಜ್ಯಗಳಿಗೂ ಕೇಂದ್ರದ ಮೇಲೆ ವಿಶ್ವಾಸವಿಲ್ಲ. ಆದರೆ ಅವು ಬಾಯಿ ಬಿಡುತ್ತಿಲ್ಲ. ಬಿಜೆಪಿಯೇತರ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಷ್ಟೇ ಬಹಿರಂಗವಾಗಿ ಕೇಂದ್ರದ ವಿರುದ್ಧ ದೂರುತ್ತಿವೆ.”
ರಾಜದೀಪ್: “ಕೇಂದ್ರ ಸರಕಾರದ ಪ್ರಕಾರ ಪೆಟ್ರೋಲ್ ಬೆಲೆಯ ಸಂಕಟಗಳೆಲ್ಲ ನಿಮ್ಮ ಯುಪಿಎ ಅವಧಿಯಲ್ಲೇ ಆರಂಭವಾಗಿತ್ತು; ಆ ಸಂಕಷ್ಟದಿಂದ ಪಾರಾಗಲು ನಾವು ಈಗಲೂ ಒದ್ದಾಡುತ್ತಿದ್ದೇವೆ ಎನ್ನುತ್ತಾರಲ್ಲ?”
ಚಿದಂಬರಂ: “ಎಲ್ಲಿದೀರಿ ನೀವು? ಕಚ್ಚಾತೈಲದ ಬೆಲೆ ಪ್ರತಿ ಬ್ಯಾರೆಲ್ಲಿಗೆ ೧೨೫ ಡಾಲರ್ ಇದ್ದಾಗ ನಾವು ಪೆಟ್ರೋಲ್ ಬೆಲೆಯನ್ನು ೬೪ ರೂಪಾಯಿ, ಡೀಸೆಲ್ ಬೆಲೆಯನ್ನು ೪೫ ರೂಪಾಯಿಗಳಿಗೆ ಹಿಡಿದಿಟ್ಟಿದ್ದೆವು. ಈಗ ಕಚ್ಚಾತೈಲದ ಬೆಲೆ ಬ್ಯಾರೆಲ್ಲಿಗೆ ೭೫ ಡಾಲರ್ ಇದೆ. ಪೆಟ್ರೊಲ್/ಡೀಸೆಲ್ ಬೆಲೆಯನ್ನು ಇಷ್ಟೇಕೆ ಏರಿಸಿದ್ದೀರಿ ಎಂದು ಕೇಳಿದರೆ ಕೇಂದ್ರ ಸರಕಾರ ಉತ್ತರಿಸುತ್ತಿಲ್ಲ.”
ರಾಜದೀಪ್: “ಉತ್ತರ ಸ್ಪಷ್ಟವಾಗಿಯೇ ಇದೆಯಲ್ಲ! ನಾವೊಂದು ಮಹಾಸಾಂಕ್ರಾಮಿಕದ ಕಾಲದಲ್ಲಿದ್ದೇವೆ. ತೈಲದ ತೆರಿಗೆ ಬಿಟ್ಟರೆ ಬೇರೇನೂ ಆದಾಯ ಇಲ್ಲ. ಖರ್ಚು ಹೆಚ್ಚುತ್ತಿದೆ. ಅಭಿವೃದ್ಧಿಯ ಗತಿಯನ್ನು ಮೇಲೆತ್ತಬೇಕಿದೆ.”
ಚಿದಂಬರಂ: “ಸರಕಾರದ ಖರ್ಚು ಹೆಚ್ಚುತ್ತಿದೆ ಅನ್ನೋದನ್ನೇ ನಾವು ಪ್ರಶ್ನಿಸಬೇಕಾಗಿದೆ. ಉದಾಹರಣೆಗೆ: ಉದ್ಯೋಗಪತಿಗಳ ಒಂದು ಲಕ್ಷ ೪೫ ಸಾವಿರ ಕೋಟಿ ರೂಪಾಯಿಗಳ ತೆರಿಗೆ ಮನ್ನಾ ಮಾಡಿದ್ದೇಕೆ? ಅದರ ಅಗತ್ಯ ಇತ್ತೆ? ಈ ಈ ಸಂಕಟದ ಅವಧಿಯಲ್ಲಿ ಇದೇ ಕೋಟ್ಯಧೀಶರು ಎಷ್ಟು ಲಾಭ ಮಾಡಿಕೊಂಡಿದ್ದಾರೆ ಗೊತ್ತೆ? ಎಷ್ಟು ಹೊಸಬರು ಶತಕೋಟ್ಯಧೀಶರಾದರು ಗೊತ್ತಲ್ಲ? ಅತಿ ಎತ್ತರದಲ್ಲಿರುವ ಟಾಪ್ ಟೆನ್, ಟ್ವೆಂಟಿ, ಥರ್ಟಿ ಬಿಸಿನೆಸ್ ಕಂಪನಿಗಳ ನಿವ್ವಳ ಮೌಲ್ಯ ಅದೆಷ್ಟು ಹೆಚ್ಚಾಗಿದೆ ನೋಡಿ. ಕಳೆದ ವರ್ಷ ಇದೇ ಉದ್ಯಮಗಳ ಮೇಲಿದ್ದ ೪ ಲಕ್ಷ ೫೦ ಸಾವಿರ ಕೋಟಿ ಬ್ಯಾಂಕ್ ಸಾಲವನ್ನು ಈ ಸರಕಾರ ಮನ್ನಾ ಮಾಡಿದೆ. ಸಾಲದ್ದಕ್ಕೆ ರಿಸರ್ವ್ ಬ್ಯಾಂಕಿನ ಮೇಲೆ ಒತ್ತಡ ಹೇರಿ ೧ಲಕ್ಷ ೭೫ ಸಾವಿರ ಕೋಟಿ ವಿಶೇಷ ಡಿವಿಡೆಂಡ್ ಬಾಚಿಕೊಂಡಿರಿ. ಈ ಹಣವೆಲ್ಲ ಎಲ್ಲಿಗೆ ಹೋಗ್ತಿದೆ? ಅನುಕೂಲಸ್ಥರಿಗೆ ಏನೆಲ್ಲ ಒಳ್ಳೇದು ಮಾಡ್ತಾ ಇದೀರಿ; ಸಾಮಾನ್ಯ ಜನರ ಪೆಟ್ರೋಲ್ ಮೇಲೆ ಸೆಸ್ ಹೇರ್ತಾ ಇದೀರಿ. ಬಡವರ ತಲೆಯ ಮೇಲೆ ಹೊಡೆಯುವ ಬದಲು ಅನುಕೂಲಸ್ಥರ ಮೇಲೆ ಇನ್‌ಕಮ್ ಟ್ಯಾಕ್ಸ್, ಸಂಪತ್ತಿನ ಮೇಲಿನ ತೆರಿಗೆಯಂಥ ಹೊಸ ದಾರಿಗಳ ಶೋಧ ಮಾಡಬೇಕಿತ್ತು. ಹಾಗೆ ಹಣ ಸಂಗ್ರಹಿಸಿ ಬಡ ಮತ್ತು ಮಧ್ಯಮ ವರ್ಗಕ್ಕೆ ತುಸು ರಿಲೀಫ್ ಕೊಡಬೇಕಿತ್ತಲ್ಲವೆ?”
ರಾಜದೀಪ್: “ಸರಕಾರದವರು ಹೇಳುವ ಪ್ರಕಾರ, ಪೆಟ್ರೊಲ್ ಮೇಲಿನ ತೆರಿಗೆಯಿಂದ ಸಿಗುವ ಹಣವನ್ನು ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಯೋಜನಾ, ಕಿಸಾನ್ ಸಮ್ಮಾನ್ ಯೋಜನಾ ಇತ್ಯಾದಿಗಳ ಮೇಲೆ ಖರ್ಚು ಮಾಡುತ್ತಿದೆ.”
ಚಿದಂಬರಂ: “ಅದೆಲ್ಲ ಬಣ್ಣದ ಮಾತು. ಕಳೆದ ವರ್ಷ ೨೦ ಲಕ್ಷ ಕೋಟಿ ರೂಪಾಯಿಗಳ ಭಾರೀ ದೊಡ್ಡ ಮೊತ್ತವನ್ನು ಕಷ್ಟದಲ್ಲಿದ್ದವರಿಗೆ ಹಂಚಿ ದೇಶದ ಆರ್ಥಿಕತೆಯನ್ನು ಮೇಲೆತ್ತುತ್ತೇವೆ ಎಂದು ಘೋಷಣೆ ಮಾಡಿದ್ದರಲ್ಲ? ವಿಶ್ವಬ್ಯಾಂಕ್ ಐಎಮ್‌ಎಫ್ ಮತ್ತಿತರ ಆರ್ಥಿಕ ತಜ್ಞರೆಲ್ಲ ಈ ಪೊಳ್ಳನ್ನು ಬಯಲು ಮಾಡಿವೆ. ಆ ಇಪ್ಪತ್ತು ಲಕ್ಷ ಕೋಟಿ ಎಂದರೆ ಎಷ್ಟು ಗೊತ್ತೆ? ಜಿಡಿಪಿಯ ೧.೪% ಅಷ್ಟೆ! ಅದೇನು ಭಾರೀ ದೊಡ್ಡ ಮೊತ್ತವೆ? ಜನಸಾಮಾನ್ಯರಿಗೆ ನೇರ ಹಣ ವಿತರಣೆ ಮಾಡಿ, ಪಿಂಚಿಣಿ ಹೆಚ್ಚಳ ಮಾಡಿ, ತೆರಿಗೆ ಕಡಿಮೆ ಮಾಡಿದ್ದಿದ್ದರೆ ಅದರ ಮೂಲಕ ಅವರ ಕೈಯಲ್ಲಿ ಒಂದಿಷ್ಟು ಹಣ ಓಡಾಡಬಹುದಿತ್ತು.”
ರಾಜದೀಪ್: “ನೀವು ಹೇಳ್ತೀರಿ ಎಲ್ಲವೂ ಚಿಂದಿ ಆಗಿವೆ ಅಂತ. ಪೆಟ್ರೊಲ್ ಬೆಲೆ ಏರಿಕೆ ಆಗ್ತಾ ಇದೆ ಹೌದು ಉದ್ಯೋಗ ಹರಣ ಆಗ್ತಾ ಇದೆ ಹೌದು ಅನ್ನಿ; ಜನರಿಗೆ ಆದಾಯ ಇಲ್ಲ ಅದೂ ನಿಜ. ಆದರೂ ಮಧ್ಯಮ ವರ್ಗದ ಜನ ಯಾಕೆ ಸಿಡಿದೇಳ್ತಾ ಇಲ್ಲ? ಯಾಕೆ ಬೀದಿಗೆ ಬರ್ತಾ ಇಲ್ಲ? ಎಲ್ಲರೂ ಮೋದಿ ಸರಕಾರದ ಮೇಲೆ ಭರವಸೆ ಇಟ್ಟು ಕೈಕಟ್ಟಿ ಕೂತಿದ್ದಾರೋ ಹೇಗೆ? ಅಥವಾ ಮಧ್ಯಮವರ್ಗದ ಕೋಪವನ್ನು ಬಳಸಿಕೊಂಡು ಸರಕಾರವನ್ನು ಬಗ್ಗು ಬಡಿಯುವಲ್ಲಿ ಪ್ರತಿಪಕ್ಷಗಳು ಸೋತಿವೆಯೊ ಹೇಗೆ?”
ಚಿದಂಬರಂ: “ಮಧ್ಯಮ ವರ್ಗವೇ ಹಿಂದೆಲ್ಲ ಕಾಲದಲ್ಲೂ ಸಮಾಜದ ಧ್ವನಿಯಾಗಿತ್ತು. ಅದು ಸ್ವಾತಂತ್ರ್ಯ ಹೋರಾಟದಲ್ಲಿ, ತುರ್ತು ಸ್ಥಿತಿಯಲ್ಲಿ, ಮನಮೋಹನ್ ಸಿಂಗ್ ಆಡಳಿತದ ಅವಧಿಯಲ್ಲಿ ಆ ಧ್ವನಿ ನಿಜಕ್ಕೂ ಜೋರಾಗಿತ್ತು. ಅದರ ಸದ್ದು ಏಕೆ ಅಡಗಿದೆ ಅನ್ನೋದಕ್ಕೆ ಅದೆಷ್ಟೋ ಕಾರಣಗಳಿರಬಹುದು. ಒಂದು ಈ ಸಾಂಕ್ರಾಮಿಕ. ಅದು ಎಲ್ಲರ ಬಾಯಿಗಳಿಗೆ ಬೀಗ ಹಾಕಿದೆ. ಎರಡನೆಯದಾಗಿ ಭಯ! ದನಿ ಎತ್ತಿದರೆ ಏನಾದೀತೊ ಎಂಬ ಭಯ. ದಿಶಾ ರವಿಯಂಥ ಕಾಲೇಜ್ ವಿದ್ಯಾರ್ಥಿಯ ಒಂದು ಚಿಕ್ಕ ಟಿಪ್ಪಣಿಯಿಂದಾಗಿ ತಿಂಗಳುಗಟ್ಟಲೆ ಜೈಲು ವಾಸ ಅನುಭವಿಸಬೇಕಾಯಿತು. ಬಂಧನ, ಜಾಮೀನುರಹಿತ ಜೈಲುವಾಸ. ಈ ಎರಡು ಭಯಗಳಿದ್ದಾವಲ್ಲ….”
ರಾಜದೀಪ್: .”. ಅಷ್ಟೇ ಅಲ್ಲ; ನಾನು ಮೂರನೆಯ ಕಾರಣವನ್ನೂ ಕೊಡುತ್ತೇನೆ: ಮಧ್ಯಮವರ್ಗಕ್ಕೆ ಈಗ ಕಾಂಗ್ರೆಸ್ ಮೇಲಾಗಲೀ ಇತರ ಪ್ರತಿಪಕ್ಷಗಳ ಮೇಲಾಗಲೀ ಭರವಸೆ ಉಳಿದಿಲ್ಲ. ನೀವುಗಳು ಈ ವರ್ಗದ ಸಂಕಟಮುಕ್ತಿಗೆ ಏನೋ ಹೊಸ ಮಾರ್ಗ ಸೂಚಿಸಬಲ್ಲಿರಿ ಎಂಬ ಭರವಸೆಯನ್ನು ನೀವೇ ಉಳಿಸಿಕೊಂಡಿಲ್ಲವಲ್ಲ!”
ಚಿದಂಬರಂ: “ನಾವು, ಅಂದರೆ ಕಾಂಗ್ರೆಸ್‌ನವರು ಶಕ್ತಿಮೀರಿ ಯತ್ನಿಸುತ್ತಿದ್ದೇವೆ; ಅದು ಸಾಲದು ಅನ್ನೋದು ಗೊತ್ತಿದೆ. ಆದರೆ ಇತ್ತ ನೋಡಿ: ಈ ದಿನವೇ ಪ್ರಧಾನಿಯವರು ಮೂರನೆಯ ಅಲೆಯ ಬಗ್ಗೆ ದೇಶವನ್ನು ಎಚ್ಚರಿಸಿದ್ದಾರೆ. ಹಿಂದಿನ ಎರಡು ಅಲೆಗಳ ಹೊಡೆತದಿಂದ ಕಂಗಾಲಾದವರು ಇನ್ನೊಂದು ಅಲೆಯನ್ನು ಎದುರಿಸಬೇಕಿದೆ. ಈ ೩ನೇ ಹೊಡೆತವನ್ನು ತಡೆಯಲು ಕೇವಲ ವೈದ್ಯಕೀಯ ವ್ಯವಸ್ಥೆ ಮಾಡಿದರೆ ಸಾಲದು ಆರ್ಥಿಕ ವ್ಯವಸ್ಥೆಯನ್ನೂ ಮಾಡಬೇಕು ತಾನೆ? ಸರಕಾರಕ್ಕೆ ಏನೂ ತೋಚುತ್ತಿಲ್ಲ. ಅದು ಆರ್ಥಿಕತೆಯ ಕುರಿತು ಏನೂ ಮಾತಾಡುತ್ತಿಲ್ಲ.”
ರಾಜದೀಪ್: “ವೆಲ್! ನೀವು ಪ್ರತಿಪಕ್ಷದಲ್ಲಿದ್ದೀರಿ, ಆದ್ದರಿಂದ ಮಾತಾಡುತ್ತಿದ್ದೀರಿ. ಸರಕಾರದ ಪ್ರತಿಕ್ರಿಯೆಗೆ ಕಾದು ನೋಡೋಣ. ನೀವು ಈ ಮಾತುಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕೆ ಧನ್ಯವಾದ. ನಮಸ್ಕಾರ.”
ವರದಿ: ರಾಮನಾಥ್
ಪೋಸ್ಟ್ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..