Headlines

ಆಷಾಡ ಮಾಸದ ನಂತರ ಕುಮಾರಸ್ವಾಮಿ ರಂಗಪ್ರವೇಶ: ಸಿದ್ದವಾಗಿದೆ 150 ವಿಧಾನಸಭಾ ಕ್ಷೇತ್ರದ ನೀಲನಕ್ಷೆ

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಗೆ ಸದ್ದಿಲ್ಲದೆ ಸಜ್ಜಾಗುತ್ತಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಆಷಾಢ ಮಾಸ ಕಳೆಯುತ್ತಿದ್ದಂತೆ “ರಂಗಪ್ರವೇಶ’ಕ್ಕೆ ನೀಲನಕ್ಷೆ ರೂಪಿಸುತ್ತಿದ್ದಾರೆ.

ಕಳೆದ ಎರಡು ವಿಧಾನಸಭೆ ಚುನಾವಣೆಯ ಅನುಭವದ ಆಧಾರದ ಮೇಲೆ 2023ರಲ್ಲಿ 150 ಕ್ಷೇತ್ರಗಳ ಗುರಿಯೊಂದಿಗೆ ರಾಜ್ಯ ಪ್ರವಾಸ ಕೈಗೊಳ್ಳಲು ತೀರ್ಮಾನಿಸಿದ್ದಾರೆ. ಈ ಸಂದರ್ಭದಲ್ಲಿ ಮತ್ತೆ ತಮಗೆ ಜನಪ್ರಿಯತೆ ತಂದುಕೊಟ್ಟ “ಗ್ರಾಮವಾಸ್ತವ್ಯ’ ನಡೆಸುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ.
ಹಳೇ ಮೈಸೂರು, ಉತ್ತರ ಕರ್ನಾಟಕ ಹಾಗೂ ಮಲೆನಾಡು ಭಾಗದ ಕ್ಷೇತ್ರಗಳನ್ನು ಪಟ್ಟಿ ಮಾಡಿಕೊಂಡಿದ್ದು, ಪ್ರವಾಸದ ಅನಂತರ ಬೃಹತ್‌ ಸಮಾವೇಶ ನಡೆಸಿ ವರ್ಷಕ್ಕೆ ಮುಂಚೆ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲು ನಿರ್ಧರಿಸಿದ್ದಾರೆ.
ಆರೋಗ್ಯ, ಶಿಕ್ಷಣ, ವಸತಿ, ಕೃಷಿ, ಕೈಗಾರಿಕೆ ಅಭಿವೃದ್ಧಿಗೆ ಜತೆಗೆ ಉದ್ಯೋಗ ಸೃಷ್ಟಿ ಕ್ಷೇತ್ರಗಳಿಗೆ ಒತ್ತು ನೀಡುವ ಪ್ರಣಾಳಿಕೆಯ “ಪಂಚಸೂತ್ರ’ ಸಿದ್ಧಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರತೀ ವಲಯಕ್ಕೆ ವರ್ಷಕ್ಕೆ 25 ಸಾವಿರ ಕೋಟಿ ರೂ. ವೆಚ್ಚ ಮಾಡುವುದು, ಆಯಾ ಕ್ಷೇತ್ರ ಹೇಗೆ ಅಭಿವೃದ್ಧಿಯಾಗಲಿದೆ ಎಂಬುದರ ವೀಡಿಯೋ ಪ್ರಾತ್ಯಕ್ಷಿಕೆಯನ್ನು ರಾಜ್ಯದ 224 ಕ್ಷೇತ್ರಗಳ ಪ್ರತೀ ಗ್ರಾಮದಲ್ಲೂ ಸಂಚಾರಿ ಎಲ್‌ಇಡಿ ಮೂಲಕ ಪ್ರದರ್ಶಿಸಲು ಮುಂದಾಗಿದ್ದಾರೆ.
ತಾಲೂಕು ಮತ್ತು ಜಿ.ಪಂ. ಚುನಾವಣೆಗಳಲ್ಲಿ ಪಕ್ಷಕ್ಕೆ ಗಟ್ಟಿ ತಳಪಾಯ ಹಾಕಿ ವಿಧಾನಸಭೆ ಚುನಾವಣೆಗೆ ಸಜ್ಜಾಗುವುದು ಉದ್ದೇಶ ಎನ್ನಲಾಗಿದೆ.

ಕೈ ನಾಯಕರ ಸಂಪರ್ಕ:

ಕಾಂಗ್ರೆಸ್‌ನಲ್ಲಿ ಬಣ ರಾಜಕೀಯದಿಂದ ಟಿಕೆಟ್‌ ತಪ್ಪುವ ಆತಂಕದಲ್ಲಿರುವ ಹಲವು ನಾಯಕರು ಎಚ್‌ಡಿಕೆ ಸಂಪರ್ಕದಲ್ಲಿದ್ದು, ಟಿಕೆಟ್‌ ಖಾತರಿಯಾದರೆ ಪಕ್ಷಕ್ಕೆ ಬರುವ ಭರವಸೆ ನೀಡಿದ್ದಾರೆ. ಸ್ಥಳೀಯ ನಾಯಕರ ಅಭಿಪ್ರಾಯ ಪಡೆದು ಅವರ ಸೇರ್ಪಡೆ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.

ಏನು ಮಾಡುತ್ತಿದ್ದಾರೆ ಎಚ್‌ಡಿಕೆ?

ಕೇತಗಾನಹಳ್ಳಿಯ ತೋಟದ ಮನೆಯಲ್ಲಿರುವ ಕುಮಾರಸ್ವಾಮಿ ಎರಡು ತಿಂಗಳುಗಳಿಂದ ಇಸ್ರೇಲ್‌ ಮಾದರಿ ಕೃಷಿ ಪದ್ಧತಿಯನ್ನು ತಮ್ಮ ತೋಟದಲ್ಲೇ ಪ್ರಯೋಗ ಮಾಡುತ್ತಿದ್ದಾರೆ. ಜತೆಗೆ ಕುರಿ, ಕೋಳಿ, ಹಸು, ಮೀನು ಸಾಕಾಣಿಕೆ ಮಾಡುತ್ತಿದ್ದಾರೆ.

ತಾಲೂಕು, ಜಿ.ಪಂ. ಹಾಗೂ ವಿಧಾನಸಭೆ ಚುನಾವಣೆಗೆ ತಳಮಟ್ಟದಿಂದ ಪಕ್ಷ ಸಂಘಟಿಸಲು ಸಜ್ಜಾಗುತ್ತಿದ್ದಾರೆ. ಮುಂದಿನ ತಿಂಗಳಿನಿಂದ ರಾಜ್ಯ ಪ್ರವಾಸಕ್ಕೆ ತೀರ್ಮಾನಿಸಲಾಗಿದ್ದು, ಹಲವೆಡೆ ಗ್ರಾಮವಾಸ್ತವ್ಯವೂ ಇರಲಿದೆ. ಇದೆಲ್ಲದರ ಬಗ್ಗೆ ಸದ್ಯದಲ್ಲೇ ರೂಪುರೇಷೆ ಪ್ರಕಟಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.


ವರದಿ:®®

ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ

Leave a Reply

Your email address will not be published. Required fields are marked *