WhatsApp Channel Join Now
Telegram Channel Join Now
 ಉಡುಪಿ: ಒಂಟಿ ಮಹಿಳೆಯನ್ನು ವಯರ್ ಮೂಲಕ ಕತ್ತು ಹಿಸುಕಿ ಕೊಲೆ ಮಾಡಿ ನಗದು, ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ. ಈ‌ ಒಂದು ಕೊಲೆ‌ ಹಲವು ಅನುಮಾನಗಳಿಗೆ ಎಡೆಮಾಡಿದೆ. ಬ್ರಹ್ಮಾವರದ ಕುಮ್ರಗೋಡುವಿನ ಫ್ಲಾಟ್ ನಲ್ಲಿ ಶವವಾದ ಮಹಿಳೆಯ ಹೆಸರು ವಿಶಾಲ ಗಾಣಿಗ(36). ಈಕೆಗೆ 7 ವರ್ಷದ ಮಗಳಿದ್ದಾರೆ. ದುಬೈನಲ್ಲಿ ಕಂಪೆನಿಯೊಂದರ ಮನೇಜರ್ ಆಗಿ ದುಡಿಯುವ ಪತಿ. ಆಸ್ತಿ-ಪಾಸ್ತಿ, ಮನೆ, ಭೂಮಿ ಯಾವುದಕ್ಕೂ ಕೊರತೆ ಇರಲಿಲ್ಲ. ಹತ್ತು ದಿನಗಳ ಹಿಂದೆ ಮಗಳು ಆರ್ವಿಯೊಂದಿಗೆ ಈಕೆ ದುಬೈನಿಂದ ತವರಿಗೆ ಬಂದಿದ್ದರು. ಮನೆಯ ಆಸ್ತಿ ವ್ಯವಹಾರ ಸಂಬಂಧ ಸಹಿ ಹಾಕುವ ಸಲುವಾಗಿ ತವರಿಗೆ ವಾಪಾಸಾಗಿದ್ದು, ವ್ಯವಹಾರಗಳೆಲ್ಲಾ ಮುಗಿದಾಗಿತ್ತು.

ತಂದೆ, ತಾಯಿ ಮತ್ತು ಮಗಳ ಜೊತೆ ಬ್ರಹ್ಮಾವರದ ಫ್ಲಾಟ್ ನಲ್ಲೇ ವಾಸವಾಗಿದ್ದು ಸೋಮವಾರ ಬೆಳಿಗ್ಗೆ ಜೊತೆಗಿದ್ದ ಮೂವರನ್ನೂ ಕುಂದಾಪುರದ ಗುಜ್ಜಾಡಿಯಲ್ಲಿರುವ ಮನೆಗೆ ಬಿಟ್ಟಿದ್ದಾರೆ. ಬ್ಯಾಂಕ್  ಕೆಲಸ ಇದೆ ಜೊತೆಗೆ ಫ್ಲಾಟ್ ನಲ್ಲಿರುವ ಕೆಲವು ವಸ್ತು ತರಬೇಕಿದೆ ಎಂದು ಮತ್ತೆ ಅದೇ ರಿಕ್ಷಾದಲ್ಲಿ ಬ್ಯಾಂಕ್ ಹೋಗಿ ಹಣ ಹಾಗೂ ಲಾಕರ್ ನಲ್ಲಿರುವ ಚಿನ್ನಾಭರಣ ತೆಗೆದುಕೊಂಡು ಬ್ರಹ್ಮಾವರಕ್ಕೆ ವಾಪಾಸಾಗಿದ್ದರು. ಒಂದೇ ಆಟೋದಲ್ಲಿ ಒಟ್ಟು 75 ಕಿಮೀ ದೂರ ಪ್ರಯಾಣಿಸಿದ್ದರು. ಬ್ರಹ್ಮಾವರಕ್ಕೆ ಬಂದವರು ಬ್ಯಾಂಕ್ ಗೂ ಹೋಗಿದ್ದರು. ಇದಾದ ನಂತರ ಯಾರ ಸಂಪರ್ಕಕ್ಕೂ ಸಿಗಲಿಲ್ಲ. ಗಾಬರಿಗೊಂಡ ತಂದೆ ರಾತ್ರಿ ಮನೆಗೆ ಬಂದು ನೋಡಿದಾಗ, ಕೇಬಲ್ ನಿಂದ ಕತ್ತು ಹಿಸುಕಲ್ಪಟ್ಟ ಸತ್ತ ಸ್ಥಿತಿಯಲ್ಲಿ ವಿಶಾಲ ಅವರ ಶವ ಪತ್ತೆಯಾಗಿದೆ.
ಮೈಮೇಲಿದ್ದ ಚಿನ್ನಾಭರಣ ಕಾಣೆಯಾಗಿದೆ.  ಮನೆಗೆ ನುಗ್ಗಿದ ಆ‌ ವ್ಯಕ್ತಿ ಚಿನ್ನಾಭರಣ ದೋಚುವ ಸಲುವಾಗಿಯೇ ಈಕೆಯನ್ನು ಸಾಯಿಸಿದ್ದಾರೆ ಅನಿಸುತ್ತಿದೆ. ಆದರೆ ಕೆಲವೊಂದು ಘಟನಾವಳಿಗಳು ಸಂಶಯಕ್ಕೂ ಕಾರಣವಾಗಿದೆ. ಸುಮಾರು ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಕಾಣೆಯಾಗಿದೆ. ಮೇಲ್ನೋಟಕ್ಕೆ ಚಿನ್ನಕ್ಕಾಗಿಯೇ ಕೊಲೆ ನಡೆದಿದೆ ಎಂಬ ಸಂಶಯ ಇದೆ. ಇತ್ತೀಚೆಗಷ್ಟೇ ಆಸ್ತಿ ವ್ಯವಹಾರ ಮುಗಿದಿತ್ತು. ಈಕೆಯ ಬಳಿ ಸಾಕಷ್ಟು ಹಣ, ಆಭರಣ ಇರಬಹುದು ಎಂಬ ಮಾಹಿತಿ ಇದ್ದವರಿಂದಲೇ ಕೊಲೆ ನಡೆದಿದೆ ಅನ್ನೋದು ಸ್ಪಷ್ಟ.

ಒಟ್ಟು 75 ಕಿಮೀ ಅಟೋದಲ್ಲಿ ಪ್ರಯಾಣದ ವೇಳೆ ವ್ಯವಹಾರದ ಬಗ್ಗೆ ಈಕೆ ಕುಟುಂಬದವರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ರಿಕ್ಷಾ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಜೊತೆಗೆ ಗ್ಯಾಸ್ ಏಜೆನ್ಸಿಯವನೊಬ್ಬ ಈಕೆಗೆ ಕರೆ ಮಾಡಿ ಮಾತನಾಡಿದ್ದ. ಆತನ ವಿಚಾರಣೆಯೂ ನಡೆಯಲಿದೆ. ಕೇವಲ ಬ್ಯಾಂಕ್ ವ್ಯವಹಾರದ ಉದ್ದೇಶದಿಂದ ಬಂದಿದ್ದರೇ ಅಥವಾ ಈ ವೇಳೆ ಬೇರೆ ಯಾರನ್ನಾದರೂ ಭೇಟಿಯಾಗಿದ್ದರೆ ಅನ್ನೋ ಸಂಶಯವೂ ಇದೆ.

ತನಿಖೆಗೆ ನಾಲ್ಕು ತಂಡ ರಚಿಸಲಾಗಿದೆ. ಚಿನ್ನಾಭರಣ ದರೋಡೆ ಮಾತ್ರವಲ್ಲದೆ, ಇತರ ಕಾರಣಗಳ ಬಗೆಗೂ ವಿಚಾರಣೆ ನಡೆಯುತ್ತಿದೆ. ಎಲ್ಲಾ ಸರಿಯಾಗಿದ್ದರೆ ಇಂದು ಮಗಳ ಹುಟ್ಟುಹಬ್ಬ ನಡೆಯಬೇಕಿತ್ತು. ಸಾಯುವ ಕೆಲವೇ ಗಂಟೆಗಳ ಮೊದಲು ಗಂಡನಿಗೆ ಮೆಸೇಜ್ ಮಾಡಿ ಮಗಳ ಹೆಸರಲ್ಲಿ ಕೇಕ್ ಬುಕ್ ಮಾಡಿರೋದಾಗಿಯೂ ವಿಶಾಲ ಹೇಳಿದ್ರು. ಕೇಕ್ ಕಟ್ ಮಾಡುವ ಹೊತ್ತಲ್ಲಿ ಈಕೆಯ ಪೋಸ್ಟ್ ಮರ್ಟಂ ನಡೆಯುತ್ತಿದೆ. ದುಬೈ ನಲ್ಲಿ ಸುಖವಾಗಿದ್ದ ಮಹಿಳೆ, ಸಾಯೋದಕ್ಕಂತಲೇ ತವರಿಗೆ ಬರುವಂತಾದದ್ದು ದುರಂತವೇ ಸರಿ.


ವರದಿ:®®

ಪೋಸ್ಟ್‌ ಮ್ಯಾನ್ ನ್ಯೂಸ್ ನ ಎಲ್ಲಾ ಸುದ್ದಿಗಳ ಅಪ್ ಡೇಟ್ ಪಡೆಯಲು ಈ ಕೆಳಗಿನ ವಾಟ್ಸಾಪ್ ಲಿಂಕ್ ಬಳಸಿ..

Leave a Reply

Your email address will not be published. Required fields are marked *