RIPPONPETE | ಅತಿಯಾದ ಕೆಲಸದ ಒತ್ತಡ,ಕಡಿಮೆ ಸಂಬಳ – ಆಶಾ ಕಾರ್ಯಕರ್ತೆಯರಿಂದ ಸಾಮೂಹಿಕ ರಾಜೀನಾಮೆ
ರಿಪ್ಪನ್ ಪೇಟೆ : ಅತಿಯಾದ ಕೆಲಸದ ಒತ್ತಡ ಹಾಗೂ ಕಡಿಮೆ ಸಂಬಳದಿಂದ ಬೇಸತ್ತ ಐದು ಜನ ಆಶಾ ಕಾರ್ಯಕರ್ತೆಯರು ಸಾಮೂಹಿಕವಾಗಿ ರಾಜೀನಾಮೆ ನೀಡಿರುವ ಘಟನೆ ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ಆಶಾ ಕಾರ್ಯಕರ್ತೆಯರಾದ ಶರಾವತಿ , ಪದ್ಮಾವತಿ , ನಗೀನಾ , ಸುಶೀಲ ಮತ್ತು ಹಸೀನಾ ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿ ಗಂಗಾಧರ್ ಗೆ ತಮ್ಮ ರಾಜೀನಾಮೆ ಸಲ್ಲಿಸಿದ್ದಾರೆ.
ನಾವುಗಳು ಸುಮಾರು 16 ವರ್ಷದಿಂದ ಆಶಾ ಕಾರ್ಯಕರ್ತೆಯಾಗಿ ಕಾರ್ಯ ನಿರ್ವಹಿಸುತ್ತಿದ್ದೇವೆ. ನಮಗೆ ಮಾಸಿಕ ವೇತನ ರೂ. 5,000=00ಗಳು ಮತ್ತು ಗೌರವ ಧನ ರೂ.2,000=00ಗಳನ್ನು ನೀಡುತ್ತಿದ್ದು, ಇದರಿಂದ ನಮ್ಮಗಳ ಜೀವನ ನಿರ್ವಾಹಣೆ ಕಷ್ಟವಾಗಿರುತ್ತದೆ.ಕೆಲಸದ ಅತಿಯಾದ ಒತ್ತಡದಿಂದ ನಮ್ಮ ಆರೋಗ್ಯ ತುಂಬಾ ಹದಗಟ್ಟಿರುತ್ತದ. ನಮಗೆ ಗರ್ಭಿಣಿ, ಮತ್ತು ಬಾಣಂತಿ ಆರೈಕ, ಮಕ್ಕಳ ಆರೈಕೆ, ಮಕ್ಕಳ ಲಸಿಕೆ ಕಾರ್ಯಕ್ರಮ, ಕಫ ಸಂಗ್ರಹಣೆ, ಲಾರ್ವ ಸರ್ವೆ, ಮನ ಮನೆ ಸಮೀಕ್ಷೆ, ಮೊಬೈಲ್ ಆಪ್ ಮೂಲಕ ಎನ್.ಸಿ.ಡಿ ಕಾರ್ಯಕ್ರಮ, ಅಂದತ್ವ ನಿವಾಹರಣಾ ಕಾರ್ಯಕ್ರಮ ಮತ್ತು 1-18 ವರ್ಷ ದೊಳಗಿನ ಮಕ್ಕಳ ಆಧಾರ್ ಕಾರ್ಡ್ ಸಂಗ್ರಹಣೆ ಇನ್ನಿತರ ಹಲವಾರು ಕೆಲಸಗಳನ್ನು ನಾವುಗಳು ಮಾಡಬೇಕಾಗಿದ್ದು, ಇದರಿಂದ ನಮಗೆ ಮಾನಸಿಕ ಮತ್ತು ದೈಹಿಕ ಹಿಂಸೆ ಉಂಟಾಗುತ್ತಿದೆ. ಇದರಿಂದ ನಮ್ಮ ಆರೋಗ್ಯದ ಮೇಲೆ ಸಾಕಷ್ಟು ದುಷ್ಪರಿಣಾಮ ಉಂಟಾಗುತ್ತಿದೆ. ಆದ್ದರಿಂದ ತಾವುಗಳು ಪರಿಶೀಲಿಸಿ, ಕೆಲಸದ ಒತ್ತಡ ಹೆಚ್ಚಿದ್ದು, ಸಂಬಳ ಕಡಿಮೆ ಇದ್ದು ಜೀವನ ನಿರ್ವಾಹಣೆ ಮಾಡಲು ತೊಂದರೆಯಾಗುತ್ತಿದ್ದು, ಈ ಕಾರಣದಿಂದ ನಮ್ಮಗಳ ಕೆಲಸಕ್ಕೆ ಸಾಮೂಹಿಕ ರಾಜಿನಾಮೆ ನೀಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಆಶಾ ಕಾರ್ಯಕರ್ತೆಯರನ್ನು ಜೀತಕ್ಕೆ ಇರಿಸಿಕೊಂಡಂತೆ ವರ್ತಿಸುತ್ತಿರುವುದು ಖಂಡನೀಯ!!….
ದೇಶದಲ್ಲಿ ತಾಯಿ ಮಕ್ಕಳ ಸಾವಿನ ಪ್ರಮಾಣವನ್ನು ತಗ್ಗಿಸಬೇಕು ಎಂಬ ಏಕೈಕ ಉದ್ದೇಶದಿಂದ 2009ರಲ್ಲಿ ಹೆಲ್ತ್ ಮಿಷನ್ ಅಡಿಯಲಿ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಳ್ಳಲಾಗಿತ್ತು. ಹಾಗೆ ನೇಮಿಸಿಕೊಳ್ಳುವಾಗ ಅವರ ಶಿಕ್ಷಣ, ಅನುಭವ ಯಾವುದನ್ನೂ ಕೇಳಿಲ್ಲ. ಮನೆ ಮನೆಗೆ ಹೋಗಿ ಆರೋಗ್ಯ ಅರಿವು ಮೂಡಿಸುವುದು ಇವರ ಕೆಲಸವಾಗಿತ್ತು. ದಿನಕ್ಕೆ ಎರಡು ಗಂಟೆ ಕೆಲಸ ನಿಗದಿ ಮಾಡಲಾಗಿತ್ತು. ಅನೇಕರು ಬೇರೆ ಕೆಲಸದ ಮಧ್ಯೆ ಇದೇನು ಮಹಾ ಎಂದು ಬಹಳ ಉತ್ಸಾಹದಿಂದ ಆರೋಗ್ಯ ಕಾರ್ಯಕರ್ತರಾಗಿ ಸೇರಿಕೊಂಡಿದ್ದರು. ಈ ಹದಿನೈದು ವರ್ಷಗಳ ಅವಧಿಯಲ್ಲಿ ತಾಯಿ ಮಕ್ಕಳ ಮರಣಪ್ರಮಾಣ ಗಣನೀಯವಾಗಿ ಕಡಿಮೆ ಆಗಿದೆ ಎಂದು ಸರ್ಕಾರದ ಅಂಕಿಅಂಶಗಳೇ ಹೇಳುತ್ತಿವೆ. ಆ ಸಾಧನೆಗೆ ಆಶಾ ಕಾರ್ಯಕರ್ತೆಯರ ಕೊಡುಗೆ ಅಪಾರ. ಆದರೆ ಅವರಿಗೆ ಸಿಗುತ್ತಿರುವ ಗೌರವ ಧನ ಕೇವಲ ಐದು ಸಾವಿರ ರೂಪಾಯಿಗಳು. ಇನ್ನುಳಿದ ಎರಡು ಸಾವಿರ ರೂಪಾಯಿ ಆಯಾ ಕೆಲಸದ ಆಧಾರದಲ್ಲಿ ನೀಡಲಾಗುತ್ತದೆ. ಒಬ್ಬ ಗರ್ಭಿಣಿಯನ್ನು ಹೆರಿಗೆಗೆಂದು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರೆ ಇನ್ನೂರು ರೂಪಾಯಿ ನೀಡಲಾಗುತ್ತದೆ. ಆದರೆ ಗ್ರಾಮೀಣ ಭಾಗದ ಆಶಾ, ಗರ್ಭಿಣಿ ಮಹಿಳೆಯರ ಜೊತೆಗೆ ಎರಡು ಮೂರು ದಿನ ಆಸ್ಪತ್ರೆಯಲ್ಲಿ ಕಳೆಯಬೇಕಾದ ಸ್ಥಿತಿಯಿದೆ. ಅದರ ಜೊತೆಗೆ ದಿನದ ಎರಡು ಗಂಟೆ ಕೆಲಸ ಎಂದು ನೇಮಿಸಿಕೊಂಡು ಮಾಡಿಸುತ್ತಿರುವ ಕೆಲಸ 34! ಇಷ್ಟೊಂದು ಹೀನಾಯವಾಗಿ ಆಶಾ ಕಾರ್ಯಕರ್ತೆಯರನ್ನು ಈ ಹದಿನೈದು ವರ್ಷಗಳ ಕಾಲ ನಡೆಸಿಕೊಂಡಿರುವುದು ವ್ಯವಸ್ಥಿತ ಜೀತಗಾರಿಕೆ, ಸರ್ಕಾರವೇ ಜೀತಕ್ಕೆ ಇರಿಸಿಕೊಂಡಂತೆ ವರ್ತಿಸುತ್ತಿರುವುದು ಖಂಡನೀಯ.
ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಆಶಾ ಕಾರ್ಯಕರ್ತೆಯರ ಸ್ಥಿತಿ ಅಷ್ಟೇನೂ ಉತ್ತಮವಾಗಿಲ್ಲ. ಕರ್ನಾಟಕದಲ್ಲಿ ವಿಶೇಷ ಪೋರ್ಟಲ್ ಮಾಡಿ ಆ ಮೂಲಕ ಆನ್‌ಲೈನ್ ಎಂಟ್ರಿ ಮಾಡಿಸಿ ಪ್ರೋತ್ಸಾಹ ಧನ ನೀಡುವ ಪದ್ಧತಿ ಜಾರಿಗೊಳಿಸಲಾಗಿದೆ. ಈ ವ್ಯವಸ್ಥೆಯ ಲೋಪದಿಂದಾಗಿ ಗೌರವ ಧನವೂ ಸರಿಯಾಗಿ ಪಾವತಿಯಾಗುತ್ತಿಲ್ಲ ಎಂಬುದು ಐದಾರು ವರ್ಷಗಳ ಅಳಲು. ಅದನ್ನಿನ್ನೂ ಬಗೆಹರಿಸಿಲ್ಲ. ಕನಿಷ್ಠ ವಿದ್ಯಾರ್ಹತೆ ಹೊಂದಿರುವ ಬಡ ಹೆಣ್ಣುಮಕ್ಕಳು ಮನೆ ನಿಭಾಯಿಸುತ್ತಾ, ಸಮುದಾಯದ ಆರೋಗ್ಯ ಕಾರ್ಯಕರ್ತರಾಗಿ ಮನೆಮನೆಗೆ ಅಲೆಯುತ್ತಾ ಮಾಡಿದ ಕೆಲಸದ ವಿವರವನ್ನು ಮೊಬೈಲ್ ಮೂಲಕ ದಾಖಲೀಕರಣ ಮಾಡುವ ಆದೇಶ ಕಳೆದ ನವೆಂಬರ್‌ನಲ್ಲಿ ಬಂದಿದೆ. ಇದಕ್ಕಾಗಿ ಅವರು ಸ್ವಂತ ಹಣದಲ್ಲಿ ಸ್ಮಾರ್ಟ್‌ಫೋನ್ ಖರೀದಿಸಿ ಅದರಲ್ಲಿ ಎಂಟ್ರಿ ಮಾಡಬೇಕು. ಇಂಟರ್ನೆಟ್ ಡೇಟಾ ಹಾಕಿಸಲು ತಿಂಗಳಿಗೆ ಕನಿಷ್ಠ ಎಂಟುನೂರು ರೂಪಾಯಿ ಖರ್ಚು ಮಾಡಬೇಕಿದೆ. ಅದರ ಜೊತೆಗೆ ಹೆಚ್ಚುತ್ತಲೇ ಇರುವ ಕೆಲಸದ ಪಟ್ಟಿ. ಆದರೆ ಹದಿನೈದು ವರ್ಷಗಳಿಂದ ಅದೇ ಗೌರವ ಧನ! ಈ ಎಲ್ಲ ಸಮಸ್ಯೆಗಳನ್ನು ಹಲವು ಸುತ್ತಿನ ಸಭೆಗಳಲ್ಲಿ ಅಧಿಕಾರಿಗಳು, ಸಚಿವರ ಗಮನಕ್ಕೆ ತಂದಿದ್ದರೂ ಬಗೆಹರಿಸಿರಲಿಲ್ಲ.
ಈ ಹದಿನೈದು ವರ್ಷಗಳಲ್ಲಿ ಆಶಾ ಕಾರ್ಯಕರ್ತರು ಏನೇ ಸಮಸ್ಯೆ ಬಂದರೂ ಅಧಿಕಾರಿಗಳಿಗೆ, ಮಂತ್ರಿಗಳಿಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದ್ದಾರೆ ವಿನಃ ಸಾಮೂಹಿಕ ಧರಣಿಯಂತಹ ಕೆಲಸಕ್ಕೆ ಕೈ ಹಾಕಿರಲಿಲ್ಲ. ಮೊದಲ ಬಾರಿಗೆ 2020ರಲ್ಲಿ ಒಮ್ಮೆ ಪ್ರತಿಭಟನೆ ಮಾಡಿದ್ದರು. ಅದಾದ ನಂತರ 2024ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಧರಣಿ ಕೂತಾಗ ಸರ್ಕಾರ ಲೋಕಸಭಾ ಚುನಾವಣೆ ನಡೆಯಲಿರುವ ಕಾರಣ ನೀಡಿ ಅವರ ಮನವೊಲಿಸಿ ವಾಪಸ್ ಕಳುಹಿಸಿತ್ತು. ಅದಾಗಿ ಹನ್ನೊಂದು ತಿಂಗಳಲ್ಲಿ ಹಲವು ಬಾರಿ ಶಾಸಕರು, ಸಚಿವರು, ಅಧಿಕಾರಿಗಳ ಜೊತೆ ಹದಿನೈದು ಸಭೆಗಳು ನಡೆದಿವೆ. ರಾಜ್ಯ ಸರ್ಕಾರದ ಗೌರವ ಧನ, ಕೇಂದ್ರದ ಪ್ರೋತ್ಸಾಹ ಧನ ಸೇರಿ 15,000 ಗೌರವ ಧನ ನಿಗದಿ ಮಾಡಬೇಕು ಎಂಬುದು ಅವರ ಬೇಡಿಕೆಯಾಗಿತ್ತು.
ಗರ್ಭಿಣಿಯರು, ಬಾಣಂತಿಯರ ಸಮೀಕ್ಷೆ, ಮಕ್ಕಳಿಗೆ ಲಸಿಕೆ ಹಾಕಿಸೋದು, ಲಾರ್ವ ಸರ್ವೆ, ಸಾಂಕ್ರಾಮಿಕ ರೋಗಗಳ ಬಗ್ಗೆ ಸಮೀಕ್ಷೆ ನಡೆಸೋದು ಹೀಗೆ ಹತ್ತು ಹಲವು ಅವರ ವ್ಯಾಪ್ತಿಗೆ ಮೀರಿದ ಕೆಲಸಗಳನ್ನು ಮಾಡಿಸಲಾಗುತ್ತಿದೆ. ದಿನಕ್ಕೆ ಕನಿಷ್ಠ 25 ಮನೆಗೆ ಆಶಾ ಕಾರ್ಯಕರ್ತೆ ಭೇಟಿ ನೀಡಬೇಕು. ಬಾಣಂತಿ ಸಾವಾದರೆ ವೈದ್ಯರು, ದಾದಿಯರ ಸಾಲಿನಲ್ಲಿ ಯಾವುದೇ ತರಬೇತಿ, ಸಂಬಳ, ವಿದ್ಯಾರ್ಹತೆ ಇಲ್ಲದ ಆಶಾ ಕಾರ್ಯಕರ್ತೆಯೂ ಜವಾಬ್ದಾರಿ ಹೊರಬೇಕು. ಇದ್ಯಾವ ನ್ಯಾಯ? ಅವರದ್ದು ಸಾಮಾಜಿಕ ಸೇವೆ ಎಂದು ಪರಿಗಣಿಸಿ ಅವರಿಂದ ವೈದ್ಯರು, ದಾದಿಯರು ಮಾಡಬೇಕಿರುವ ಕೆಲಸ ಮಾಡಿಸಿ ಕನಿಷ್ಠ ವಾರಕ್ಕೊಂದು ರಜೆಯನ್ನೂ ನೀಡದೆ, ಓಡಾಟದ ಖರ್ಚನ್ನೂ ನೀಡದೆ ಅಕ್ಷರಶಃ ಜೀತದಾಳುಗಳಂತೆ ಕಾಣುವುದು ನಾಗರಿಕ ಸಮಾಜ ಒಪ್ಪುವ ವಿಷಯವಲ್ಲ.
2024 ರ ಅಕ್ಟೋಬರ್‌ನಲ್ಲಿ ನಡೆದ ಆಶಾ ಕಾರ್ಯಕರ್ತೆಯರ ಸಮ್ಮೇಳನದಲ್ಲಿ ಬೇಡಿಕೆ ಈಡೇರಿಸದಿದ್ದರೆ ಜನವರಿಯಲ್ಲಿ ಬೆಂಗಳೂರಿನಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ಆದರೂ ಆರೋಗ್ಯ ಇಲಾಖೆ ಸಕಾರಾತ್ಮಕವಾಗಿ ಸ್ಪಂದಿಸಿರಲಿಲ್ಲ. ಹಾಗಾಗಿ ಜ. 7ರಿಂದ ಆಶಾ ಕಾರ್ಯಕರ್ತೆಯರು ಫ್ರೀಡಂ ಪಾರ್ಕ್‌ನಲ್ಲಿ ಈ ಚಳಿಯನ್ನೂ, ತಮ್ಮ ಆರೋಗ್ಯವನ್ನೂ ಲೆಕ್ಕಿಸದೇ ಧರಣಿ ಕುಳಿತಿದ್ದರು. ಈ ಮಧ್ಯೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗುವ ಪ್ರಯತ್ನವನ್ನೂ ಸಂಘಟನೆಯ ಮುಂದಾಳುಗಳು ಮಾಡಿದ್ದರು. ಆದರೆ ಮುಖ್ಯಮಂತ್ರಿಗಳು ಭೇಟಿಗೆ ಸಮಯ ಕೊಟ್ಟಿಲ್ಲ ಎಂಬ ಅಸಮಾಧಾನವೂ ಆಶಾ ಕಾರ್ಯಕರ್ತೆಯರಲ್ಲಿತ್ತು. ಕಡೆಗೂ ನಾಲ್ಕನೇ ದಿನಕ್ಕೆ ಸರ್ಕಾರದಿಂದ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಈ ಭರವಸೆ ಹುಸಿಯಾಗದಿರಲಿ. ಕಾಲ ಕಾಲಕ್ಕೆ ಇಂತಹ ಗೌರವಧನ ಎಂಬ ಬಿಡಿಗಾಸಿಗೆ ದುಡಿಯುವ ಕಾರ್ಯಕರ್ತರ ಅಹವಾಲುಗಳಿಗೆ ಸ್ಪಂದಿಸುವ ಇಚ್ಚಾಶಕ್ತಿಯನ್ನು ಸರ್ಕಾರ ತೋರಿಸಬೇಕಿದೆ.