ಅನಧಿಕೃತ ಜೇನುತುಪ್ಪ, ವಿನೆಗರ್ ತಯಾರಿಕೆ ಘಟಕದ ಮೇಲೆ ತಹಶೀಲ್ದಾರ್ ದಾಳಿ
ಶಿವಮೊಗ್ಗ ಜಿಲ್ಲೆಯ ಕೆಲವು ಕೆಮಿಕಲ್ ಫ್ಯಾಕ್ಟರಿಗಳಲ್ಲಿ ಅನಧಿಕೃತವಾಗಿ ಜೇನುತುಪ್ಪ ಹಾಗೂ ವಿನೆಗರ್ ತಯಾರು ಮಾಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಸಾಗರ ತಾಲೂಕಿನ ಹುಲ್ಲತ್ತಿ ಗ್ರಾಮದ ಜೇನುತುಪ್ಪ ಮತ್ತು ವಿನೆಗರ್ ತಯಾರಿಕಾ ಘಟಕಕ್ಕೆ ಅಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಹಾಗೂ ಸಾಗರ ತಹಸೀಲ್ದಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಯಾವುದೇ ಕೆಮಿಕಲ್ ಫ್ಯಾಕ್ಟರಿಗಳಲ್ಲಿ ಆಹಾರ ಪದಾರ್ಥಗಳು ತಯಾರು ಮಾಡಬಾರದು ಎಂದು ಕಾನೂನು ಇದೆ. ಆದರೆ, ಹುಲ್ಲತಿ ಗ್ರಾಮದ ಶ್ರೀಧರ ಹೆಗಡೆ ಎಂಬ ವ್ಯಕ್ತಿ ಶ್ವೇತಾ ಕೆಮಿಕಲ್ ಇಂಡಸ್ಟ್ರೀಸ್ ಹಾಗೂ ಶ್ರೇಯಸ್ ಹೋಂ ಇಂಡಸ್ಟ್ರೀಸ್ ಎಂಬ ಹೆಸರಿನಲ್ಲಿ ಹಲವು ವರ್ಷಗಳಿಂದ ಕೆಮಿಕಲ್ ವಸ್ತು ತಯಾರಿಕೆ ಮಾಡಿಕೊಂಡು ಬರುತ್ತಿದ್ದಾರೆ. ಇದರ ಮಧ್ಯದಲ್ಲಿ ಜೇನುತುಪ್ಪ ಹಾಗೂ ಗೋಬಿ ಮಂಚೋರಿ, ಫ್ರೈಡ್ ರೈಸ್ ಗೆ ಉಪಯೋಗಿಸುವ ವೆನಿಗರ್ ತಯಾರು ಮಾಡುತ್ತಿರುವುದನ್ನು ಕಂಡು ಬಂದಿದೆ.
ಯಾವುದೇ ಫ್ಯಾಕ್ಟರಿ ನಡೆಸಬೇಕು ಎಂದರೆ ಸ್ಥಳೀಯ ಗ್ರಾಮ ಪಂಚಾಯತಿ ಹಾಗೂ ಆಯ ಇಲಾಖೆಯ ವತಿಯಿಂದ ಅನುಮತಿ ಪಡೆಯಬೇಕು. ಆದರೆ ಈ ವ್ಯಕ್ತಿ ಕೇವಲ ಗ್ರಾಮ ಪಂಚಾಯಿತಿಯ ಅನುಮತಿ ಪಡೆದಿದ್ದು, ಆಹಾರ ಮತ್ತು ಸುರಕ್ಷತೆ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರುವುದಿಲ್ಲ. ಫ್ಯಾಕ್ಟರಿಯಲ್ಲಿ ಯಾವುದೇ ಅನುಮತಿ ಇಲ್ಲದೆ ಜೇನುತುಪ್ಪ ಹಾಗೂ ವೆನಿಗರ್ ತಯಾರು ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಅಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯ ಅಧಿಕಾರಿಗಳು ಮತ್ತು ಸಾಗರ ತಹಸಿಲ್ದಾರ್ ಕಚೇರಿಯ ಅಧಿಕಾರಿಗಳು ದಿಢೀರನೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಫ್ಯಾಕ್ಟರಿಯಲ್ಲಿ ಇದ್ದ ಜೇನುತುಪ್ಪ ಹಾಗೂ ವಿನೆಗರ್ ಸೇರಿದಂತೆ ವಿವಿಧ ಪದಾರ್ಥಗಳ ಸ್ಯಾಂಪಲ್ ಪಡೆದುಕೊಂಡು ತಪಾಸಣೆಗೆ ಕಳಿಸಿ ಕೊಡಲಾಗಿದೆ . ಆಹಾರ ಪದಾರ್ಥಗಳ ವರದಿ ಬಂದ ನಂತರ ಅಧಿಕಾರಿಗಳು ಫ್ಯಾಕ್ಟರಿ ಮಾಲೀಕ ಹಾಗೂ ಫ್ಯಾಕ್ಟರಿ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಈ ಸಂದರ್ಭದಲ್ಲಿ ತಹಸಿಲ್ದಾರ್ ಚಂದ್ರಶೇಖರ್ ನಾಯಕ್, ಆಹಾರ ಸುರಕ್ಷತೆ ಇಲಾಖೆ ಅಧಿಕಾರಿ ಗುರುರಾಜ್ ,ಪಿಡಿಒ ಸೋಮಪ್ಪ ವಿಲೇಜ್ ಅಕೌಂಟೆಂಟ್ ಗುರುರಾಜ್ ಹಾಜರಿದ್ದರು.