BSNL ನೆಟ್ವರ್ಕ್ ಸಮಸ್ಯೆ – ಗ್ರಾಹಕನ ಏಕಾಂಗಿ ಧರಣಿ!
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಹುಲಿದೇವರಬನ ಸಮೀಪದ ಹೊಸಕೊಪ್ಪ ಗ್ರಾಮದಲ್ಲಿ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸಿಗುತ್ತಿಲ್ಲ ಎಂದು ದೂರಿ ಗ್ರಾಮದ ಸೀತಾರಾಮ ಹೆಗಡೆ ಶುಕ್ರವಾರ (ಮಾ.07) ಬಿಎಸ್‌ಎನ್‌ಎಲ್ ಕಚೇರಿ ಎದುರು ಏಕಾಂಗಿ ಧರಣಿ ನಡೆಸಿ ಗಮನ ಸೆಳೆದರು.
ಕಳೆದ ಹದಿನೈದು ಇಪ್ಪತ್ತು ದಿನಗಳಿಂದ ನಮ್ಮ ಮನೆಗೆ ಬಿಎಸ್‌ಎನ್‌ಎಲ್ ನೆಟ್‌ವರ್ಕ್ ಸೌಲಭ್ಯ ಇಲ್ಲವಾಗಿದೆ.
ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೆ ಸ್ಪಂದಿಸುತ್ತಿಲ್ಲ. ದಿನಕ್ಕೆ ಕನಿಷ್ಠ ಸಂಜೆ 5ರಿಂದ 7 ಗಂಟೆ ನೆಟ್‌ವರ್ಕ್ ಸೌಲಭ್ಯ ಕೊಡಿ. ಮಕ್ಕಳು ಪಟ್ಟಣದಲ್ಲಿ ಪದವಿ ಓದುತ್ತಿದ್ದಾರೆ. ಮನೆಯಲ್ಲಿ ವಯಸ್ಸಾದ ತಂದೆ ತಾಯಿ ಇದ್ದೇವೆ. ಅವರ ಜೊತೆ ಮಾತನಾಡಬೇಕು ಎಂದು ಕೈಮುಗಿದರೂ ಅಧಿಕಾರಿಗಳ ಮನಸ್ಸು ಕರಗುತ್ತಿಲ್ಲ ಎಂದು ಸೀತಾರಾಮ ಹೆಗಡೆ ತಿಳಿಸಿದರು.
ಪದೇಪದೆ ಬ್ಯಾಟರಿ ಹಾಳಾಗಿದೆ ಎಂದು ಸಬೂಬು ಹೇಳುತ್ತಾರೆ. ಬ್ಯಾಟರಿ ಹಾಳಾಗಿದೆ, ನೀವೇ ಮೆಸ್ಕಾಂ ಕಚೇರಿಗೆ ಹೋಗಿ ಎಂದು ಹೇಳುತ್ತಾರೆ. ಹಾಗಾದರೆ ಸರ್ಕಾರ ಇವರಿಗೆ ಸಂಬಳ ಕೊಡುವುದು ಏಕೆ? ನಾವು ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದೇವೆ. ತುರ್ತು ಸಂದರ್ಭದಲ್ಲಿ ಯಾರನ್ನಾದರೂ ಸಂಪರ್ಕಿಸಬೇಕು ಎಂದರೆ ಫೋನ್ ಸೌಲಭ್ಯ ಇಲ್ಲ. 15 ದಿನಕ್ಕೊಮ್ಮೆ 500 ರೂ. ಕರೆನ್ಸಿ ಹಾಕುತ್ತೇವೆ. ಆದರೆ ಸಮರ್ಪಕ ಸೇವೆ ಕೊಡಲು ಬಿಎಸ್‌ಎನ್‌ಎಲ್ ಅಧಿಕಾರಿಗಳು ವಿಫಲವಾಗಿದ್ದಾರೆ. ನೆಟ್‌ವರ್ಕ್ ಸೌಲಭ್ಯ ಕೊಡುವವರೆಗೂ ಸ್ಥಳ ಬಿಟ್ಟು ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ಬಿಎಸ್‌ಎನ್‌ಎಲ್ ಅಧಿಕಾರಿ ಹರ್ಷವರ್ಧನ್ ಮಾತನಾಡಿ, ಆವಿನಹಳ್ಳಿ ಭಾಗದಲ್ಲಿ ಮರ ಬಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ವಿದ್ಯುತ್ ಸಂಪರ್ಕ ಕಡಿತಗೊಂಡಿರುವುದರಿಂದ ಬ್ಯಾಟರಿ ಚಾರ್ಜ್ ಆಗದೆ ನೆಟ್‌ವರ್ಕ್ ಸಿಗುತ್ತಿಲ್ಲ. ಕೆಲವೊಮ್ಮೆ ಕಡಿಮೆ ವೋಲ್ಟೇಜ್ ಸರಬರಾಜು ಆಗಿ ಬ್ಯಾಟರಿ ಕೆಲಸ ಮಾಡುತ್ತಿಲ್ಲ. ನೆಟ್‌ವರ್ಕ್ ಸಮಸ್ಯೆ ಬಗೆಹರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ಒಂದು ತಿಂಗಳಿನಲ್ಲಿ ಆವಿನಹಳ್ಳಿ ಭಾಗದ ನೆಟ್‌ವರ್ಕ್ ಸಮಸ್ಯೆ ಬಗೆಹರಿಸಲಾಗುತ್ತದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಬಿಎಸ್‌ಎನ್‌ಎಲ್ ಅಧಿಕಾರಿ ಮುರಳಿಕೃಷ್ಣ ಹಾಜರಿದ್ದರು.