ಸಿಗಂದೂರು ಲಾಂಚ್‌ನಲ್ಲಿ ಬೆಳಗಾವಿಯ ಕುಟುಂಬದ ಮೇಲೆ ಹಲ್ಲೆ
ಸಾಗರ : ಸಿಗಂದೂರು ಲಾಂಚ್‌ಗೆ ವಾಹನಗಳನ್ನು ಬಿಡುವ ವಿಚಾರದಲ್ಲಿ ಜಗಳವಾಗಿ ಪ್ರಯಾಣಿಕರ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿ ಬಂದಿದೆ. ಗ್ರಾಮ ಪಂಚಾಯಿತಿ ನೇಮಿಸಿರುವ ಟಿಕೆಟ್ ಕಲೆಕ್ಟರ್ ಸೇರಿ ಹಲವರ ವಿರುದ್ಧ ಕಾರ್ಗಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ನೇಮಕವಾಗಿರುವ ಟಿಕೆಟ್ ಕಲೆಕ್ಟರ್ ಮತ್ತು 10-15 ಸಹಚರರ ವಿರುದ್ದ ಎಫ್‌ಐಆರ್ ದಾಖಲಿಸಲಾಗಿದೆ.
ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಕಡಬಿ ಶಿವಪುರದ ನಿವಾಸಿ ಪ್ರಣತಿ, ತಂದೆ ಪ್ರಸನ್ನ, ತಾಯಿ ಪ್ರಭಾ, ಸಹೋದರ ಪವನ್‌ಕುಮಾರ್ ಮತ್ತು ಮಾವನ ಮಗ ವಿನಾಯಕ್ ಪ್ರಸಾದ್ ಎಂಬುವರು ಸಂಬಂಧಿಕರ ಮದುವೆಗೆಂದು ಸಾಗರಕ್ಕೆ ಬಂದಿದ್ದರು. ಅಲ್ಲಿಂದ ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯಕ್ಕೆ ಓಮ್ನಿ ಕಾರಿನಲ್ಲಿ ಹೊರಟಿದ್ದರು.
ವಾಹನಗಳನ್ನು ಸರದಿಯಲ್ಲಿ ಲಾಂಚ್‌ಗೆ ಬಿಡುವ ವಿಚಾರದಲ್ಲಿ ಟಿಕೆಟ್ ಕಲೆಕ್ಟರ್ ಮತ್ತು ಕಾರಿನಲ್ಲಿದ್ದ ವಿನಯ್ ಪ್ರಸಾದ್ ಮಧ್ಯೆ ವಾಗ್ವಾದ ನಡೆದಿತ್ತು. ಬಳಿಕ ದೇವಸ್ಥಾನಕ್ಕೆ ತೆರಳಲು ಕುಟುಂಬದವರು ಲಾಂಚ್‌ಗೆ ಓಮ್ನಿ ಕಾರು ಹಾಕಿದ್ದರು.ಬಳಿಕ ಗುಂಪು ಕಟ್ಟಿಕೊಂಡು ಬಂದ ಟಿಕೆಟ್ ಕಲೆಕ್ಟರ್, ಓಮ್ನಿಯಲ್ಲಿದ್ದ ವಿನಾಯಕ, ಪವನ್‌ಕುಮಾರ್ ಮೇಲೆ ಹಲ್ಲೆ ಮಾಡಿದ್ದಾರೆ. ಅವಾಚ್ಯ ಶಬ್ದಗಳಿಂದ ನಿಂದಿಸಿ ಜೀವ ಬೆದರಿಕೆ ಹಾಕಿದ್ದಾರೆ. ಓಮ್ನಿಗೆ ಹಾನಿ ಮಾಡಿದ್ದಾರೆ. ಮಹಿಳೆಯರು ಎಂಬುದನ್ನು ಲೆಕ್ಕಿಸದೆ ಹಲ್ಲೆ ಮಾಡಿದ್ದಾರೆ ಎಂದು ದೂರಿನಲ್ಲಿ ದೂರಲಾಗಿದೆ.
ತುಮರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದು ಸಾಗರದ ಸರ್ಕಾರಿ ಆಸ್ಪತ್ರೆಗೆ ತೆರಳಿದ್ದರು. ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಘಟನೆ ಸಂಬಂಧ ಕಾರ್ಗಲ್ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.