RIPPONPET | ರಾಷ್ಟ್ರಮಟ್ಟದ ವಾಲಿಬಾಲ್ ಆಟಗಾರ ಬಿಜೂ ಮಾರ್ಕಸ್ ನಿಧನ
ರಿಪ್ಪನ್‌ಪೇಟೆ : ಪಟ್ಟಣದ ಹೆಮ್ಮೆಯ ವಾಲಿಬಾಲ್ ಆಟಗಾರ ಬಿಜೂ ಮಾರ್ಕೋಸ್ (56) ಅಲ್ಪ ಕಾಲದ ಅನಾರೋಗ್ಯದಿಂದ ನಿಧನರಾಗಿದ್ದಾರೆ.
ಹಾಲುಗುಡ್ಡೆ ನಿವಾಸಿಯಾಗಿದ್ದ ಬಿಜೂ ಮಾರ್ಕಸ್ (56) ಅಲ್ಪ ಕಾಲದ ಅನಾರೋಗ್ಯದ ಹಿನ್ನಲೆಯಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಚಿಕಿತ್ಸೆ ಫಲಿಸದೇ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಮೃತರು ಪತ್ನಿ, ಇಬ್ಬರು ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.
ಹೊಸನಗರ ತಾಲೂಕಿನಾದ್ಯಂತ ಅದೆಷ್ಟೋ ಯುವಕರಿಗೆ ವಾಲಿಬಾಲ್ ಕ್ರೀಡಾಸಕ್ತಿಯನ್ನು ಬೆಳೆಸುವ ಮೂಲಕ ಅನೇಕ ರಾಷ್ಟಮಟ್ಟದ ಕ್ರೀಡಾಪಟುಗಳನ್ನು ತಯಾರಿಸಿದ ಕೀರ್ತಿ ಬಿಜೂ ಮಾರ್ಕಸ್ ಗೆ ಸಲ್ಲುತ್ತದೆ.
ಕೇರಳದ ವಿಶ್ವವಿದ್ಯಾಲಯ ಮಟ್ಟದ ಆಟಗಾರನಾಗಿ ರಾಷ್ಟಮಟ್ಟದಲ್ಲಿ ವಾಲಿಬಾಲ್ ಆಡಿದ್ದ ಬಿಜೂ 1996 -97 ರಲ್ಲಿ ರಿಪ್ಪನ್‌ಪೇಟೆಗೆ ತಮ್ಮ ಕುಟುಂಬದೊಂದಿಗೆ ವಲಸೆ ಬಂದಿದ್ದಾರೆ. ಆ ಸಮಯದಲ್ಲಿ ರಿಪ್ಪನ್‌ಪೇಟೆಯಲ್ಲಿ ರಾಜ್ಯದಲ್ಲಿಯೇ ಉತ್ತಮ ಹೆಸರು ಗಳಿಸಿದ್ದ ವಾಲಿಬಾಲ್ ಕ್ರೀಡಾಪಟುಗಳಿದ್ದು ಬಿಜೂ ಗೆ ಮತ್ತಷ್ಟು ತರಬೇತಿ ನೀಡಿ ಉತ್ತಮವಾಗಿ ಅಣಿಗೊಳಿಸಿದ್ದರು. ಅನಂತರದಲ್ಲಿ ಯೂನಿಯನ್ ಕ್ಲಬ್ ಮೂಲಕ ರಾಜ್ಯಾದ್ಯಂತ ತಮ್ಮ ಆಟವನ್ನು ಪ್ರದರ್ಶಿಸಿ ಜನ ಮೆಚ್ಚುಗೆ ಗಳಿಸಿದ್ದ ಬಿಜೂ ಇನ್ನೂ ನೆನಪು ಮಾತ್ರ…
ಪಂದ್ಯಾವಳಿಗಳಲ್ಲಿ ಎಷ್ಟೇ ಎತ್ತರದವರು ತಡೆ ಹಾಕಲಿ, ಅದನ್ನು ಬೇಧಿಸಿ ಎದುರಾಳಿಯನ್ನು ತಬ್ಬಿಬ್ಬುಗೊಳಿಸುವ ಆಟ ಬಿಜೂ ಮಾರ್ಕಸ್ ನದ್ದು. ಕೌಂಟರ್ ಅಟ್ಯಾಕ್, ಸೆಕೆಂಡ್ ಪಾಸ್, ಬ್ಯಾಕ್‌ಲೈನ್‌ಗಳಲ್ಲಿ ಜಿಮ್ಮಿಗೆ ಪಾಸ್ ನೀಡಿದರೆ ಮುಗಿದೇ ಹೋಯಿತು ಎದುರಾಳಿ ಕಥೆ. ಆ ಕೈಯಲ್ಲಿ ಅದೇನೋ ಮ್ಯಾಜಿಕ್ ಇತ್ತೋ ಏನೋ. ಬ್ಲಾಕ್ ಮಾಡಿದರೆ ಟಚ್ ಔಟ್‌ನಲ್ಲಿ ಅಂಕ ಕಸಿಯುತ್ತಿದ್ದ ಬಿಜೂ ಓಪನ್ ಬಿಟ್ಟರಂತೂ ಅಟ್ಯಾಕ್ ಲೈನ್‌ಗೆ ಚೆಂಡನ್ನು ಬಡಿದು ಮೀಸೆ ಮರೆಯಲ್ಲಿ ನಗುತ್ತಿದ್ದ. ಆ ಚಲನೆಯಾದರೂ ಎಂತಹದ್ದು? ಎದುರಾಳಿಗಳು ಈತ ಎಲ್ಲಿಗೆ ಹೊಡೆಯುತ್ತಾನೆಂದು ಬ್ಲಾಕ್‌ಗೆ ತಯಾರಾಗಿರುತ್ತಿದ್ದರೋ ಇವನು ಅದಾಗಲೇ ಚೆಂಡನ್ನು ಎದುರಾಳಿ ಅಂಕಣದೊಳಗೆ ಚಿಮ್ಮಿಸಿಯಾಗುತ್ತಿತ್ತು. ವಾಲಿಬಾಲ್ ಯಾವತ್ತೂ ತಂಡವಾಗಿ ಆಡಿದರಷ್ಟೇ ಗೆಲುವು. ಕಾಂಬಿನೇಶನ್ ಅನ್ನುವುದು ಅತ್ಯಗತ್ಯ. ಪಾಸರ್ ಮತ್ತು ಆಟಗಾರರ ಸಮನ್ವಯತೆ ಇದ್ದರಷ್ಟೇ ಅಂಕ. ಅಂತಹದರಲ್ಲಿ ಈತ ಏಕಾಂಗಿಯಾಗಿ ಪಂದ್ಯಗಳನ್ನು ಗೆಲ್ಲಿಸಿಕೊಡುವ ಅಪ್ರತಿಮ ಆಟಗಾರರಾಗಿದ್ದರು ಬಿಜೂ ಮಾರ್ಕಸ್..
ಅಪ್ರತಿಮ ವಾಲಿಬಾಲ್ ಪಟು ,ಉತ್ತಮ ವ್ಯಕ್ತಿತ್ವದ ,ಅಜಾತ ಶತ್ರು ಬಿಜೂ ಮಾರ್ಕಸ್ ಆತ್ಮಕ್ಕೆ ಶಾಂತಿ ದೊರೆಯಲೆಂದು ಪೋಸ್ಟ್ ಮ್ಯಾನ್ ನ್ಯೂಸ್ ತಂಡ ಪ್ರಾರ್ಥಿಸುತ್ತದೆ.