ಚಿಕ್ಕ ಜೇನಿ ವ್ಯಾಪ್ತಿಯಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ ಅಕ್ರಮ ಮರಳು ಧಂಧೆ –
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಚಿಕ್ಕಜೇನಿ ಗ್ರಾಪಂ ವ್ಯಾಪ್ತಿಯ ಮುತ್ತಲ, ಜನ್ನಂಗಿ , ಗ್ರಾಮದ ನದಿ ಪಾತ್ರದಲ್ಲಿ ಎಗ್ಗಿಲ್ಲದೇ ಅಕ್ರಮ ಮರಳು ದಂಧೆ ನಡೆಯುತ್ತಿದ್ದು ನೂರಾರು ಲೋಡ್ ಅಕ್ರಮ ಮರಳು ಶೇಖರಿಸಿದ್ದರೂ ಅಕ್ರಮ ವ್ಯವಹಾರದಲ್ಲಿ ಮೌನ ಸಮ್ಮತಿ ನೀಡಿರುವ ಆಡಳಿತ ವ್ಯವಸ್ಥೆಯಿಂದ ಅಪಾರ ಪ್ರಮಾಣದ ಸಂಪತ್ತು ನಾಶವಾಗುತ್ತಿದೆ.
ಶಾಂತಪುರ ಸೇತುವೆಯಿಂದ ಪ್ರಾರಂಭವಾಗಿ ಹತ್ತಾರು ಸ್ಥಳಗಳಲ್ಲಿ ಮರಳೆತ್ತುವ ಕಾರ್ಯದಲ್ಲಿ ಹೊರರಾಜ್ಯ ಬಿಹಾರದ ಹತ್ತಾರು ಕೂಲಿ ಕಾರ್ಮಿಕರನ್ನು ಬಳಸಿಕೊಳ್ಳಲಾಗುತ್ತಿದೆ. ಟ್ಯೂಬ್, ಬಕೇಟ್, ಬುಟ್ಟಿಯನ್ನು ಉಪಯೋಗಿಸಿಕೊಂಡು ಹಗಲು ಹೊತ್ತಿನಲ್ಲಿ ನದಿ ಮಧ್ಯದಿಂದ ಮರಳನ್ನು ತೆಗೆದು ಸಂಗ್ರಹಿಸಿಟ್ಟುಕೊಂಡು ರಾತ್ರಿಯಾಗುತ್ತಿದ್ದಂತೆ ವಾಹನಗಳಲ್ಲಿ ಬೇರೆ ಬೇರೆ ತಾಲೂಕುಗಳಿಗೆ ಮರಳು ಸರಬರಾಜು ಮಾಡುವ ವಹಿವಾಟು ನಡೆಸಲಾಗುತ್ತಿದೆ.ಈ ಬಗ್ಗೆ ಪೋಸ್ಟ್ ಮ್ಯಾನ್ ನ್ಯೂಸ್ ತಂಡ ಸ್ಥಳಕ್ಕೆ ತೆರಳಿ ಜಿಪಿಎಸ್ ಆಧಾರಿತ ಪೋಟೋ ಸಾಕ್ಶ್ಯದ ಮೂಲಕ ಸಂಬಂಧಪಟ್ಟ ಇಲಾಖೆಯ ಗಮನಕ್ಕೆ ತರಲಾಗಿದೆ.
ಈ ಬಾರಿ ಸುರಿದ ಭಾರಿ ಮಳೆಯಿಂದ ಈ ಭಾಗದ ನದಿಯಲ್ಲಿ ಸಾವಿರಾರು ಲೋಡ್ ಮರಳು ಶೇಖರಣೆಯಾಗಿದ್ದು ಇದನ್ನು ಮರಳು ದಂಧೆಕೋರರು ಲೂಟಿ ಹೊಡೆದು ಸರ್ಕಾರದ ಬೊಕ್ಕಸಕ್ಕೆ ಕೋಟ್ಯಾಂತರ ರೂ ಬತ್ತಿ ಇಟ್ಟ ಮೇಲೆ ಗಣಿ ಇಲಾಖೆಯ ಅಧಿಕಾರಿಗಳು ಬಂದು ನಾಮಕಾವಸ್ಥೆ 2 ಬುಟ್ಟಿ 2 ಗುದ್ದಲಿ ವಶಪಡಿಸಿಕೊಂಡು ಆರೋಪಿ ಪರಾರಿ ಎಂದು ಪ್ರಕರಣ ದಾಖಲಿಸುತ್ತಾರೆ.
ಸ್ವಾಭಾವಿಕ ಖನಿಜ ಸಂಪತ್ತನ್ನು ಸಂರಕ್ಷಿಸುವ ಬೇಕಾಗಿದ್ದ ಗಣಿ ಮತ್ತು ಭೂವಿಜ್ಞಾನ, ಲೋಕೋಪಯೋಗಿ, ಕಂದಾಯ, ಅರಣ್ಯ, ಹಾಗೂ ಇತರ ಇಲಾಖೆಯ ಅಧಿಕಾರಿಗಳು ಅಕ್ರಮ ಮರಳು ದಂಧೆಯನ್ನು ನಿಯಂತ್ರಿಸುವಲ್ಲಿ ಅಸಮರ್ಥರೋ ಅಥವಾ ಅಸಹಾಯಕರೋ ಎಂಬ ಜಿಜ್ಞಾಸೆ ಜನರಲ್ಲಿ ಮೂಡಿದ್ದು ಅಧಿಕಾರಿಗಳ ಗಮನದಲ್ಲಿ ಇದ್ದೆ ಅಕ್ರಮ ಮರಳು ದಂಧೆ ನಡೆಯುತ್ತಿದೆ ಆದ್ದರಿಂದಲೇ ಅಧಿಕಾರಸ್ಥರು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಈ ಭಾಗದ ನಾಗರಿಕರು ಮಾಹಿತಿ ನೀಡುತ್ತಾರೆ.
ರಿಪ್ಪನ್‌ಪೇಟೆಯ ಅರಣ್ಯ ಜಾಗದಲ್ಲಿ ಪ್ರಭಾವಿಯೊಬ್ಬನ ಮರಳು ಯಾರ್ಡ್
ರಿಪ್ಪನ್‌ಪೇಟೆ ಪಟ್ಟಣದ ಶರ್ಮಣ್ಯಾವತಿ(ಗವಟೂರು ಹೊಳೆ) ನದಿ ಪಾತ್ರದಲ್ಲಿ ಈ ಬಾರಿದ ಸುರಿದ ಭಾರಿ ಮಳೆಗೆ ಸಾವಿರಾರು ಲೋಡ್ ಮರಳು ಶೇಖರಣೆಯಾಗಿದ್ದು ಇಲ್ಲೊಬ್ಬ ಖಾಸಗಿ ವ್ಯಕ್ತಿ ಅದನ್ನೆಲ್ಲಾ ತನ್ನದೇ ಆಸ್ತಿ ಎನ್ನುವ ರೀತಿಯಲ್ಲಿ ಅರಣ್ಯ ಇಲಾಖೆಯ ಹತ್ತಾರು ಎಕರೆ ಜಾಗವನ್ನು ಒತ್ತುವರಿ ಮಾಡಿಕೊಂಡು ಖಾಸಗಿ ಮರಳು ಯಾರ್ಡ್ ನ್ನು ನಿರ್ಮಿಸಿ ಜಾಸ್ತಿ ಹಣ ಕೊಟ್ಟವರಿಗೆ ಟೆಂಡರ್ ಕೊಡುತ್ತೇನೆ ಎಂದು ಹೇಳುತ್ತಾನೆ ಎಂದರೆ ಸ್ವಾಭಾವಿಕ ಖನಿಜ ಸಂಪತ್ತನ್ನು ಸಂರಕ್ಷಿಸುವ ಹೊಣೆ ಹೊತ್ತಿರುವ ಅಧಿಕಾರಿಗಳ ಅಸಹಾಯಕತೆ ಎಷ್ಟಿದೆ ಎಂದು ಯೋಚಿಸಲೇ ಬೇಕಾಗುತ್ತದೆ ಅಲ್ವಾ..!?
ಒಟ್ಟಾರೆಯಾಗಿ ಇನ್ನಾದರೂ ಸಂಬಂಧಪಟ್ಟ ಇಲಾಖೆಯವರು ಇನ್ನಾದರೂ ಈ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೋ ಎಂಬ ಅಲ್ಪ ಆಶಯದಿಂದ ಕಾದು ನೋಡಬೇಕಾಗಿದೆ.