Headlines

ಪ್ರೀತಿಸಿದ ಯುವಕನ ಜೊತೆ ಮದುವೆಗೆ ಅಡ್ಡಿಯಾಯಿತು ಕುಜ ದೋಷ : ವಿಷ ಸೇವಿಸಿದ್ದ ಮಹಿಳಾ ಪೊಲೀಸ್ ಸಾವು

ಪ್ರೀತಿಸಿದ ಯುವನೊಂದಿಗೆ ಮದುವೆಯಾಗಲು ಕುಜ ದೋಷ ಅಡ್ಡಿಯಾಗಿದ್ದರಿಂದ ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ.

ಮೃತ ದುರ್ದೈವಿಯನ್ನು ಸುಧಾ ಎಂದು ಗುರುತಿಸಲಾಗಿದೆ. ಭದ್ರಾವತಿ ತಾಲೂಕಿನ ಕಲ್ಲಾಪುರ ನಿವಾಸಿಯಾಗಿರುವ ಪೊಲೀಸ್ ಕಾನ್ಸ್‌ಟೇಬಲ್ ಸುಧಾ ಹಾಗೂ ಭದ್ರಾವತಿ ಅರಣ್ಯ ವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಬೆಳಗಾವಿ ಮೂಲದ ಪ್ರವೀಣ್ ಆರು ವರ್ಷದಿಂದ ಪರಸ್ಪರ ಪ್ರೀತಿಸುತ್ತಿದ್ದರು. ಇವರಿಬ್ಬರ ಪ್ರೀತಿಗೆ ಹೆತ್ತವರ ವಿರೋಧವಿತ್ತು.


ಆರಂಭದಲ್ಲಿ ಇವರಿಬ್ಬರ ಪ್ರೀತಿಗೆ ಜಾತಿ ಅಡ್ಡಿಯಾಗಿತ್ತು. ಜಾತಿ ಅಡ್ಡಿಯ ನಡುವೆಯೂ ಇಬ್ಬರು ಮದುವೆಗೆ ಸಿದ್ಧರಾಗಿದ್ದರು. ಆದರೆ ಪ್ರವೀಣ್ ತಾಯಿ ಯುವತಿಯ ಜಾತಕವನ್ನು ಜ್ಯೋತಿಷಿಯೊಬ್ಬರಿಗೆ ತೋರಿಸಿದ್ದರು. ಜ್ಯೋತಿಷಿ ಈ ಯುವತಿಗೆ ಕುಜ ದೋಷ ಇದೆ. ಇವಳೊಂದಿಗೆ ವಿವಾಹವಾದರೆ ನಿಮ್ಮ ಮಗನ ಆಯಸ್ಸು ಕಡಿಮೆ ಎಂದಿದ್ದಾರೆ ಎನ್ನಲಾಗಿದೆ. ಹೀಗಾಗಿ ಕುಜ ದೋಷ ಇರುವ ಹುಡುಗಿ ಜೊತೆ ಮದುವೆ ಮಾಡಲು ಸಾಧ್ಯವಿಲ್ಲ ಎಂದು ಪ್ರವೀಣ್ ತಾಯಿ ತಿಳಿಸಿದ್ದರು.

ಅಲ್ಲದೇ ಯುವತಿ ಸುಧಾಳಿಗೂ ಫೋನ್ ಮಾಡಿ ನನ್ನ ಮಗನ ಸಹವಾಸ ಬಿಟ್ಟು ಬಿಡು. ಈ ಮದುವೆ ಮಾಡಲು ಸಾಧ್ಯವಿಲ್ಲ ಎಂದು ಆವಾಜ್ ಕೂಡ ಹಾಕಿದ್ದರಂತೆ. ಇದರಿಂದ ಮನನೊಂದ ಪ್ರೇಮಿಗಳು ಮೇ.31ರಂದು ಭದ್ರಾವತಿಯ ಎಪಿಎಂಸಿ ಆವರಣದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. 

ನಂತರ ಇಬ್ಬರನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಯುವತಿ ಸುಧಾಳನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ್‍ಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ಮಧ್ಯರಾತ್ರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

Leave a Reply

Your email address will not be published. Required fields are marked *