ಹೊಸನಗರ: ತಾಲೂಕಿನ ಐತಿಹಾಸಿಕ ಬಿದನೂರು ನಗರದ ಶಾಂತಿಕೆರೆ ಸಮೀಪ ಇರುವ ಹಜರತ್ ಶೇಖುಲ್ಅಕ್ಬರ್ಅನ್ವರ್ ಮಾಅಸುಂಷಾ ವಲೀಯುಲ್ಲಾ ದರ್ಗಾದ 48ನೇ ಉರೂಸ್ ಸಮಾರಂಭ ಮೇ 13ರಿಂದ ಪ್ರಾರಂಭಗೊಳ್ಳಲಿದೆ ಎಂದು ದರ್ಗಾ ಸಮಿತಿ ಸದಸ್ಯ ಅರ್ ಎ ಚಾಬುಸಾಬ್ ತಿಳಿಸಿದರು.
ನಗರದ ದರ್ಗಾ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಮೇ 13ರಂದು ನಗರ ವೆಂಕಟರಮಣಉಡುಪ ನೇತೃತ್ವದಲ್ಲಿ ಚಾಲನೆಗೊಳ್ಳಲಿರುವ ಉರೂಸ್ನ್ನು ಕಾರ್ಗಲ್ನ ಜನಾಬ್ ಎಸ್.ಇ.ಸಿರಾಜ್ ತಂಗಳ್ ಉದ್ಘಾಟಿಸಲಿರುವರು.
ಮೇ 14ರಂದು ಮಗರಿಬ್ ನಮಾಜ್ ಬಳಿಕ ಮೌಲೂದ್, ಸಲಾತ್ ನಡೆಯಲಿದ್ದು, ಧಾರ್ಮಿಕ ಪ್ರವಚನ ನಡೆಯಲಿದೆ. ಮೇ 15ರಂದು ಶಿವಮೊಗ್ಗದ ಮಲಪ್ಪುರಂನ ಸಯ್ಯಿದ್ ಶಹೀದುದ್ದೀನ್ ತಂಗಳ್ ನೇತೃತ್ವದಲ್ಲಿ ಸಂದಲ್ ಮೆರವಣಿಗೆ, ಬಳಿಕ ಸಯ್ಯಿದ್ಅಬೂಬುಕರ್ ಸಿದ್ದೀಕ್ ಅಲ್ಹಾದಿ ತಂಗಳ್ ಅವರು ಆಶೀರ್ವಚನ ನೀಡಲಿದ್ದಾರೆ.
ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಎನ್.ಕೆ.ಎಂ.ಶಾಫಿ ಸಅದಿ ಭಕ್ತಾದಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿರುವರು. ಮಹಮದ್ ಮಿಹರಾಜುದ್ದೀನ್ರಝಾಖಾದ್ರಿಅಲ್ಅಸ್ ಅದಿ ಅವರಿಂದ ನಾತ್ಎಶರೀಫ್ ನೆರವೇರಿಸಲಿದ್ದಾರೆ. ಮೇ 16ರಂದು ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾರ್ವಜನಿಕ ಅನ್ನಸಂತರ್ಪಣೆ ಏರ್ಪಡಿಸಲಾಗಿದೆ ಮಾಹಿತಿ ನೀಡಿದರು.
ರಾಜ್ಯದ ವಿವಿಧೆಡೆಯಿಂದ ಆಗಮಿಸುವ ಭಕ್ತಾದಿಗಳಿಗೆ ಅನುಕೂಲವಾಗುವಂತೆ ಸುವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ದರ್ಗಾದ ಆವರಣದಲ್ಲಿ ಹೆಚ್ಚುವರಿ ಸ್ಥಳಾವಕಾಶಕ್ಕೆ ಅಗತ್ಯ ಕಾಮಗಾರಿ ಭರದಿಂದ ನಡೆಯುತ್ತಿದೆ. ಉರೂಸ್ ಸಮಾರಂಭವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಸಮಾಜದ ಪ್ರಮುಖರ ಸಹಕಾರವನ್ನು ಕೋರಲಾಗಿದ್ದು, ಜನಪ್ರತಿನಿಧಿಗಳು ಸೇರಿದಂತೆ ವಿವಿಧ ಕ್ಷೇತ್ರದ ಗಣ್ಯರು ಆಗಮಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ದರ್ಗಾ ಸಮಿತಿ ಅಧ್ಯಕ್ಷ ಜಿ.ಮಹಮದ್ ಸಾಬ್, ಉಪಾಧ್ಯಕ್ಷ ಅಬ್ಬಾಸ್, ಉರೂಸ್ ಸಮಿತಿಯ ಅಧ್ಯಕ್ಷ ವಿನಾಯಕ ಉಡುಪ, ಪದಾಧಿಕಾರಿಗಳಾದ ಅಮೀರ್ ಹಂಜಾ, ಕಚ್ಚಿಗೆಬೈಲು ಸಾದಿಕ್ ಅಲಿ, ಅಬ್ದುಲ್ಖಾದರ್, ಅಬ್ದುಲ್ಲಾ ಸಾಬ್ ಮತ್ತಿತರರು ಉಪಸ್ಥಿತರಿದ್ದರು.