



ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ – ಮೂವರು ಸ್ಥಳದಲ್ಲೇ ಸಾವು
ಶಿವಮೊಗ್ಗ: ನಗರದ ಹೊರವಲಯದ ಗೋಂಧಿ ಚಟ್ನಹಳ್ಳಿ ಗ್ರಾಮದ ಬಳಿ ಇಂದು (ಗುರುವಾರ) ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ದುರ್ಮರಣ ಹೊಂದಿದ್ದಾರೆ.
ಶಿವಮೊಗ್ಗದಿಂದ ಹೊನ್ನಾಳಿ ಕಡೆಗೆ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ಗೂಡ್ಸ್ ವಾಹನವು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಬಲವಾಗಿ ಡಿಕ್ಕಿ ಹೊಡೆದಿದೆ. ಪರಿಣಾಮವಾಗಿ, ವಾಹನದಲ್ಲಿದ್ದ ನಾಲ್ವರಲ್ಲಿ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಈ ದುರ್ಘಟನೆ ಇಂದು ಬೆಳಿಗ್ಗೆ ಸುಮಾರು 5.30ರ ಸುಮಾರಿಗೆ ನಡೆದಿದೆ.
ಮೃತರನ್ನು ಅಸಾದುಲ್ಲಾ (50, ದಾವಣಗೆರೆ ಜಿಲ್ಲೆಯ ಚನ್ನಗಿರಿ ಮೂಲದವರು), ಸಾದಿಕ್ (30) ಮತ್ತು ಫಿರೋಜ್ (22, ಇಬ್ಬರೂ ಉತ್ತರ ಪ್ರದೇಶದ ಕಾರ್ಮಿಕರು) ಎಂದು ಗುರುತಿಸಲಾಗಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.