ರಿಪ್ಪನ್ಪೇಟೆ: ಕಳೆದ ಒಂದೂವರೆ ತಿಂಗಳಿನಿಂದ ಕಾಡಾನೆ ರೈತರ ಹೊಲಗದ್ದೆಗಳಿಗೆ ನಿರಂತರ ದಾಳಿ ನಡೆಸಿ ಬೆಳೆ ನಾಶಪಡಿಸುತ್ತಿದ್ದರೂ ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಂತಿದೆ.ಇದರಿಂದ ಆಕ್ರೋಶಗೊಂಡಿರುವ ರೈತರು ನಾಳೆ ಬೆಳಿಗ್ಗೆ 10 ಗಂಟೆಗೆ ಮೂಗೂಡ್ತಿ ಅರಣ್ಯ ಕಛೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.
ಈ ಪ್ರತಿಭಟನಾ ಸಭೆಗೆ ಮಾಜಿ ಸಚಿವರಾದ ಕಿಮ್ಮನೆ ರತ್ನಾಕರ್,ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹಾಗೂ ಆರ್ ಎಂ ಮಂಜುನಾಥ್ ಗೌಡ ಸೇರಿದಂತೆ ಅನೇಕ ಮುಖಂಡರು ರೈತರ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಪ್ರತಿಭಟನೆಯ ಆಯೋಜಕರಾದ ಗ್ರಾಪಂ ಸದಸ್ಯ ಪ್ರವೀಣ್ ಸುಳುಕೋಡು ತಿಳಿಸಿದ್ದಾರೆ.
ಅರಸಾಳು ಹಾಗೂ ಹೆದ್ದಾರಿಪುರ ಗ್ರಾಮ ಪಂಚಾಯತ್ನಿ ವ್ಯಾಪ್ತಿಯ ಕಾನಗೋಡು ತಮ್ಮಡಿಕೊಪ್ಪ ಹಾರಂಬಳ್ಳಿ ಬಾಳೆಕೊಡ್ಲು, ಕಾರೆಹೊಂಡ, ಕಗಚಿ, ತಳಲೆ, ಸುಳಕೋಡು ಗ್ರಾಮದ ರೈತರ ಜಮೀನಿಗೆ ನಿರಂತರ ದಾಳಿಯಿಡುತ್ತಿದೆ. ರೈತರು ಬೆಳೆದ ಅಡಿಕೆ, ತೆಂಗು, ಬಾಳೆ, ಕಬ್ಬು ಬೆಳೆಗಳನ್ನು ಮುರಿದು ತಿಂದು ನಷ್ಟಮಾಡುತ್ತಿದೆ. ಈ ಭಾಗದಲ್ಲಿ ಆನೆ ಬೀಡುಬಿಟ್ಟಿರುವ ಮಾಹಿತಿಯಿದ್ದರೂ ಅರಣ್ಯ ಇಲಾಖೆ ಮಾತ್ರ ರಾತ್ರಿ ಗಸ್ತು ತಿರುಗುವುದನ್ನು ಹೊರತು ಪಡಿಸಿದರೆ, ಆನೆಯನ್ನು ಬೇರೆಡೆ ಓಡಿಸುವ ಯಾವುದೇ ಪ್ರಯತ್ನ ಮಾಡದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಹಾಗೂ ಇದು ಕಾಡಾನೆಯೋ….ಸಾಕಾನೆಯೋ…!?? ಎಂಬ ಯಕ್ಷಪ್ರಶ್ನೆ ಇಲ್ಲಿನ ರೈತರಲ್ಲಿ ಮೂಡಿದೆ.
ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಗುರುವಾರ ಬೆಳಿಗ್ಗೆ 10 ಗಂಟೆಗೆ ಮುಗೂಡ್ತಿ ಅರಣ್ಯ ಕಛೇರಿ ಎದುರು ಪಕ್ಷಾತೀತವಾಗಿ ಕೂಡಲೇ ಆನೆಗಳನ್ನು ಬೇರೆ ಕಡೆ ಓಡಿಸುವಂತೆ ಹಾಗೂ ಬೆಳೆನಷ್ಟದ ರೈತರಿಗೆ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ರೈತರು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕಾಗಿ ರೈತ ಮುಖಂಡರು ಆಗ್ರಹಿಸಿದ್ದಾರೆ.