ಧರ್ಮಸ್ಥಳ ಪ್ರಕರಣ – ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರಗೊಳಿಸಬೇಡಿ : ಶಾಸಕ ಬೇಳೂರು ಗೋಪಾಲಕೃಷ್ಣ
ಶಿವಮೊಗ್ಗ.ಆ.7: ಸೌಜನ್ಯ ಮತ್ತಿತರ ಕೇಸುಗಳನ್ನು ಮುಂದಿಟ್ಟುಕೊಂಡು ಗೊಂದಲ ಮೂಡಿಸುವ ಕೆಲಸ ನಡೆಯುತ್ತಿದ್ದು, ಹಾಗಾಗಿ ಧಾರ್ಮಿಕ ಕ್ಷೇತ್ರಗಳನ್ನು ಅಪವಿತ್ರ ಗೊಳಿಸಲು ಹೋಗಬೇಡಿ ಎಂದು ಶಾಸಕರು ಹಾಗೂ ಕರ್ನಾಟಕ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ಗೋಪಾಲಕೃಷ್ಣ ಹೇಳಿಕೆ ನೀಡಿದ್ದಾರೆ.
ಗುರುವಾರ ಮಾಧ್ಯಮಗಾರರಿಗೆ ಪ್ರತಿಕ್ರಿಯಿಸಿದ ಅವರು, ಧರ್ಮಸ್ಥಳ ಕರ್ನಾಟಕದಲ್ಲಿ ಒಂದು ರೀತಿಯ ಕಾಶಿಯ ಇದ್ದಂಗೆ. ಆದರೆ ಇಂದು ಅದರ ವಿಚಾರವಾಗಿ ಪರ ಮತ್ತು ವಿರೋಧ ನಡೆಯುತ್ತಿವೆ.ನನ್ನ ಪ್ರಕಾರ ಧಾರ್ಮಿಕ ಕ್ಷೇತ್ರದ ವಿಚಾರವಾಗಿ ನಾವ್ಯಾರೂ ಹಸ್ತಕ್ಷೇಪ ಮಾಡಬಾರದು ಅದು ತಪ್ಪಾಗುತ್ತದೆ.
ಆ ಕ್ಷೇತ್ರಕ್ಕೆ ಬಹಳಷ್ಟು ಭಕ್ತಾದಿಗಳು ನಂಬಿಕೆ ಮತ್ತು ವಿಶ್ವಾಸ ಇಟ್ಟುಕೊಂಡು ಹೋಗುವುದನ್ನು ನಾವು ನೋಡಿದ್ದೇವೆ. ನಾವು ಮೊದಲಿನಿಂದಲೂ ಆ ಕ್ಷೇತ್ರದ ಬಗ್ಗೆ ನಂಬಿಕೆ ಇಟ್ಟುಕೊಂಡು ಬಂದಿದ್ದೇವೆ. ವೀರೇಂದ್ರ ಹೆಗ್ಗಡೆ ಅವರ ಬಗ್ಗೆಯೂ ಅಪಾರವಾದ ಗೌರವ ಇದೆ ಎಂದರು.
ಧಾರ್ಮಿಕ ಕ್ಷೇತ್ರದಲ್ಲಿ ಅಪವಿತ್ರ ಗೊಳಿಸುವ ಕೆಲಸವನ್ನು ಸರ್ಕಾರ ಸಹ ಮಾಡಬಾರದು.ಏಕೆಂದರೆ ಈ ಹಿಂದೆಯೂ ಸಿಗಂದೂರು ಕ್ಷೇತ್ರವನ್ನ ಮುಜರಾಯಿ ಇಲಾಖೆಗೆ ಸೇರಿಸುವ ಕೆಲಸವನ್ನು ಹಿಂದಿನ ಸರ್ಕಾರ ಮಾಡಿತ್ತು.ಸಂಸದರು ಮತ್ತು ಶಾಸಕರು ಸೇರಿಕೊಂಡು ಈ ಕೆಲಸ ಮಾಡಿದ್ದರು ಹಾಗಾಗಿ ಯಾವುದೇ ಧಾರ್ಮಿಕ ಕ್ಷೇತ್ರದಲ್ಲಿ ಹಸ್ತಕ್ಷೇಪ ಮಾಡಬಾರದು ಎಂದರು.