ಸಾಗರದ ಇತಿಹಾಸ ಪ್ರಸಿದ್ಧ ಗಣಪತಿ ಕೆರೆಯಲ್ಲಿ ಮತ್ತೆ ನೀರುನಾಯಿ ಹಿಂಡು ಪ್ರತ್ಯಕ್ಷವಾಗಿದೆ. ಜೊಂಡು ತೆಗೆದು ಸ್ವಚ್ಛವಾಗಿರುವ ಕೆರೆಯಲ್ಲಿ ಕಳೆದ ವರ್ಷವೂ ಇವು ಕಂಡುಬಂದಿದ್ದವು.
ಶರಾವತಿ ಹಿನ್ನೀರು, ವರದಾ ನದಿಗಳು ನೀರು ನಾಯಿಗಳ ಆವಾಸ ಸ್ಥಾನ. ವರದಾ ನದಿಯ ಉಪ ನದಿಗಳ ಮೂಲಕ ಸಾಗರ ಪಟ್ಟಣದ ಗಣಪತಿ ಕೆರೆಗೆ ನೀರು ನಾಯಿಗಳು ಬಂದಿರುವ ಸಾಧ್ಯತೆ ಇದೆ. ಅಳಿವಿನ ಅಂಚಿನಲ್ಲಿರುವ ಪ್ರಾಣಿ ಆಗಿರುವುದರಿಂದ ಇವುಗಳಿಗೆ ಹಾನಿ ಮಾಡಿದರೆ ಅರಣ್ಯ ಇಲಾಖೆ ಕೇಸ್ ದಾಖಲು ಮಾಡುತ್ತದೆ.
ಗುಂಪು ಗುಂಪಾಗಿ ವಾಸಿಸುವ ನೀರು ನಾಯಿಗಳು ಅಲೆಮಾರಿಗಳಾಗಿವೆ. ಸಾಮಾನ್ಯವಾಗಿ ಶರಾವತಿ ಹಿನ್ನೀರಿನ ಲಿಂಗನಮಕ್ಕಿ, ಕೋಗಾರು, ಮಳಲಿ ಭಾಗಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತವೆ. ಆದರೆ ಗಣಪತಿ ಕೆರೆಯಲ್ಲಿ ಗುಂಪಾಗಿ ಸಾಗುವ ನೀರುನಾಯಿಗಳು ಕಂಡುಬಂದಿದ್ದು ಕೆರೆಯಲ್ಲಿದ್ದ ಮೀನನ್ನು ಕಬಳಿಸುತ್ತಿದ್ದವು. ಮೀನಿನ ಚಲನವಲನ ಗಮನಿಸಿ ಒಮ್ಮೆ ಮೇಲಕ್ಕೆ ಹಾರಿ ಗಪ್ಪೆಂದು ತನ್ನ ಬಾಯಿಗೆ ಮೀನನ್ನು ಸೇರಿಸಿಕೊಳ್ಳುವ ಚಾಣಾಕ್ಷತನ ರೋಮಾಂಚಕಾರಿಯಾಗಿದೆ.
ಸಾಗರದ ಜನತೆಗೆ ಈ ಅಪರೂಪದ ಪ್ರಾಣಿಯ ಮೀನಿನ ಬೇಟೆ ನೋಡುವುದೇ ಒಂದು ಸಡಗರವಾಗಿದೆ. ಕ್ಯಾಮರಾ ಕಣ್ಣಿಗೂ ಸಿಗದೆ ಕ್ಷಣಮಾತ್ರದಲ್ಲಿ ಮಾಯವಾಗುತ್ತವೆ.
ಗಣಪತಿ ಕೆರೆಯಲ್ಲಿ ಮೀನುಗಾರಿಕೆ ಗುತ್ತಿಗೆ ಪಡೆದವರಿಗೆ ನೀರು ನಾಯಿಗಳು ಭಾರಿ ಸಂಕಷ್ಟ ತಂದೊಡ್ಡಿದೆ. ಗೆಂಡೆ, ಕಾಟ್ಲಾ, ಗೌರಿ, ಮೃಗಾಲ, ರೋವು, ಬೆಳ್ಳಿಗೆಂಡೆ, ಹುಲ್ಲುಗೆಂಡೆ ಜಾತಿಯ ಮೀನುಗಳನ್ನು ಕೆರೆಯಲ್ಲಿ ಬಿಡಲಾಗಿದೆ. ಪ್ರತಿ ಮೀನು ಈಗ 10 ರಿಂದ 12 ಕೆಜಿ ತೂಗುತ್ತವೆ. ಆದರೆ ನೀರು ನಾಯಿಗಳ ಗುಂಪು ಪ್ರತಿದಿನ ನೂರಾರು ಮೀನುಗಳನ್ನು ಹಿಡಿದು ತಿನ್ನುತ್ತಿವೆ.
ಸಂಪೂರ್ಣ ವೀಡಿಯೋ ಇಲ್ಲಿ ವೀಕ್ಷಿಸಿ 👇👇👇