ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಜನ್ಮದಿನವನ್ನು ರಾಜ್ಯಾದ್ಯಂತ ಅವರ ಅಭಿಮಾನಿಗಳು ಮತ್ತು ಬಿಜೆಪಿ ಕಾರ್ಯಕರ್ತರು ಭಾನುವಾರ ಸರಳವಾಗಿ ಆಚರಿಸಿದರು. ಗಣ್ಯರು, ಅಭಿಮಾನಿಗಳು ಬಿಎಸ್‌ವೈ ಅವರಿಗೆ ಶೂಭಕೋರಿದ್ದಾರೆ.
ಬೆಂಗಳೂರಲ್ಲಿ ಬಿಎಸ್‌ವೈ ಬೃಹತ್ ಕೇಕ್ ಕತ್ತರಿಸಿದರು. ತವರು ಕ್ಷೇತ್ರ ಶಿಕಾರಿಪುರ, ಶಿರಾಳಕೊಪ್ಪ, ಜಿಲ್ಲಾ ಕೇಂದ್ರ ಶಿವಮೊಗ್ಗದಲ್ಲಿ ಬಿಎಸ್‌ವೈ ಅಭಿಮಾನಿಗಳು ದೇವಸ್ಥಾನಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.
79 ಕೆಜಿ ತೂಕದ ಕೇಕ್ ಕತ್ತರಿಸಿದ ಬಿಎಸ್‌ವೈ:
ಬಿಎಸ್‌ವೈ 79ನೇ ಜನ್ಮ ದಿನದ ನಿಮಿತ್ತ 79 ಕೆ.ಜಿ. ತೂಕದ ಕೇಕ್ ಅನ್ನು ಕಾವೇರಿ ನಿವಾಸದಲ್ಲಿ ಬಿಎಸ್‌ವೈ ಕತ್ತರಿಸುವ ಮೂಲಕ ಅಭಿಮಾನಿಗಳು ಹಾಗೂ ಬೆಂಬಲಿಗರನ್ನು ಖುಷಿಪಡಿಸಿದರು. ಗೋಪೂಜೆ ಸಲ್ಲಿಸಿದ ಬಳಿಕ ಸಂಜಯನಗರದ ರಾಧಾಕೃಷ್ಣ ದೇವಸ್ಥಾನಕ್ಕೆ ವಿಶೇಷ ಪೂಜೆ ಸಲ್ಲಿಸಲು ಬೆಳಗ್ಗೆ ಆಗಮಿಸಿದ ಬಿಎಸ್‌ವೈ ಅವರನ್ನು ಪೂರ್ಣ ಕುಂಭದೊಂದಿಗೆ ಬರ ಮಾಡಿಕೊಳ್ಳಲಾಯಿತು. ಮಾಜಿ ಸಚಿವರು, ಶಾಸಕರು ಜತೆಗಿದ್ದರು.
ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ಮೊಮ್ಮಗಳ ಆರತಕ್ಷತೆಯಲ್ಲಿ ಮಾಜಿ ಸಿಎಂ ಬಿಎಸ್‌ವೈ ಪಾಲ್ಗೊಂಡು ಆರ್ಶೀವದಿಸಿದರು.
ಶಿವಮೊಗ್ಗದ ಪ್ರೇರಣಾ ಶಿಕ್ಷಣ ಸಂಸ್ಥೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಪದಾಧಿಕಾರಿಗಳು ಬೆಂಗಳೂರಿಗೆ ತೆರಳಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಜನ್ಮದಿನದ ಶುಭಾಶಯ ಕೋರಿದರು.
‘ಆತ್ಮೀಯರೇ, ಹಿತೈಷಿಗಳೇ, ಕೊರೋನಾ ಸಂಕಷ್ಟಗಳ ಹಿನ್ನೆಲೆಯಲ್ಲಿ ಈ ಬಾರಿ ನನ್ನ ಹುಟ್ಟಿದ ದಿನವನ್ನು ಯಾವುದೇ ವಿಶೇಷ ರೀತಿಯಲ್ಲಿ ನಾನು ಆಚರಿಸಿಕೊಳ್ಳುತ್ತಿಲ್ಲ. ಆದ್ದರಿಂದ ಯಾರೂ ಕೂಡ ಹಾರ, ತುರಾಯಿ, ಉಡುಗೊರೆ ಇತ್ಯಾದಿ ತರಬೇಡಿ ಎಂದು ಕೋರುತ್ತೇನೆ. ನೀವು ಇದ್ದಲ್ಲಿಂದಲೇ ಹಾರೈಸಿ. ನಿಮ್ಮೆಲ್ಲರ ಪ್ರೀತಿ, ಅಭಿಮಾನ, ಆರ್ಶೀವಾದಗಳೇ ನನಗೆ ಶ್ರೀರಕ್ಷೆ’ ಎಂದು ಬಿಎಸ್‌ವೈ ಶನಿವಾರವೇ ಟ್ವೀಟ್ ಮೂಲಕ ಮನವಿ ಮಾಡಿದ್ದರು. ಆದಾಗ್ಯೂ ಹಲವು ಗಣ್ಯರು ಬಿಎಸ್‌ವೈ ಅವರನ್ನ ಭೇಟಿಯಾಗಿ ಶುಭ ಕೋರಿದರು.
‘ರೈತ ನಾಯಕರು, ಮಾಜಿ ಮುಖ್ಯಮಂತ್ರಿ, ದಿಟ್ಟ ಧೀಮಂತ ನಾಯಕರು, ನನ್ನ ಮಾರ್ಗದರ್ಶಕರಾದ ಸನ್ಮಾನ್ಯ ಬಿ.ಎಸ್. ಯಡಿಯೂರಪ್ಪ ಅವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ದೇವರು ಅವರಿಗೆ ಹೆಚ್ಚಿನ ಆಯಸ್ಸು ಹಾಗೂ ಉತ್ತಮ ಆರೋಗ್ಯ ನೀಡಲೆಂದು ಪ್ರಾರ್ಥಿಸುತ್ತೇನೆ’ ಎಂದು ಸಿಎಂ ಬಸವರಾಜ ಬೊಮ್ಮಾಯಿ ಶುಭಕೋರಿದ್ದಾರೆ.