ಒಬ್ಬಳು ಅಮಾಯಕ ಹೆಣ್ಣು ಮಗಳಿಗೆ ನ್ಯಾಯ ಸಿಗಲಿ ಅಂತಾ ಹೋರಾಡ್ತಿದ್ದೀನಿ.. ಕೋರ್ಟಿನಲ್ಲಿ ನ್ಯಾಯ ಸಿಗ್ಲಿಲ್ಲ ಅಂದ್ರೆ, ಬೀದಿಗಿಳಿದು ಹೋರಾಟ ಮಾಡ್ತೀನಿ.. ನನ್ನ ಈ ಹೋರಾಟಕ್ಕೆ ಕಾನೂನೇ ನನ್ನ ಅಸ್ತ್ರ.. ಅಷ್ಟೇ..ಈ ಡೈಲಾಗ್ನ ಕೇಳ್ತಿದ್ರೆ ಮೈ ಜುಮ್ ಅನ್ನುತ್ತೆ ಅಲ್ವಾ.. ಈ ಸಿನಿಮಾದಲ್ಲಿ ತಮಿಳಿನ ಖ್ಯಾತ ನಟ ಸೂರ್ಯ ಹೊಡೆದಿರೋ ಡೈಲಾಗ್, ಬಡವರಿಗೆ ನ್ಯಾಯಕೊಡಿಸಲು ಆತನ ಹೋರಾಟ ನೋಡಿದವರು, ಹೇಳ್ತಿರೋ ಮಾತು ಒಂದೇ.. ಜೈ ಭೀಮ್ ಸಿನಿಮಾ ಸೂಪರ್ ಅಂತಾ..
ಇದೇ ನವಂಬರ್ 2ನೇ ತಾರೀಖು ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿ ಧೂಳ್ ಎಬ್ಬಿಸ್ತಿರೋ ತಮಿಳಿನ ಜೈಭೀಮ್ ಚಿತ್ರಕ್ಕೆ ಹೊಗಳಿಕೆಯ ಮಹಾಪೂರವೇ ಹರಿದುಬರ್ತಿದೆ.. ಸಿನಿಮಾ ನೋಡಿದವರು ದೇಶದ ಮೂಲೆ ಮೂಲೆಯಿಂದಲೂ ಭಾರೀ ಪ್ರಮಾಣದ ಪ್ರಶಂಸೆ ವ್ಯಕ್ತಪಡಿಸ್ತಿದ್ದಾರೆ. ಎಲ್ಲರ ಬಾಯಲ್ಲೂ ಜೈ ಭೀಮ್, ಯಾರ ಸ್ಟೇಟಸ್ ನೋಡಿದ್ರೂ ಜೈ ಭೀಮ್. ಹಾಗಾದ್ರೆ, ಜೈ ಭೀಮ್ ಇಷ್ಟೊಂದು ಹವಾ ಸೃಷ್ಟಿಸಲು ಕಾರಣ ಏನು? ಜನರ ಮನಸ್ಸಿನ ಮೇಲೆ ಪ್ರಭಾವ ಬೀರಲು ಕಾರಣ ಏನು?
ಓಟಿಟಿ ಪ್ಲಾಟ್ಫಾರ್ಮ್ ವೀಕ್ಷಣೆ ಮಾಡೋರೆಲ್ಲಾ ಕಳೆದೊಂದು ವಾರದಿಂದ ಅದೊಂದು ಸಿನಿಮಾವನ್ನ ತುಂಬಾನೇ ಕೊಂಡಾಡ್ತಾ ಇದ್ದಾರೆ. ರಿಲೀಸ್ ಆದ ದಿನದಿಂದ ಇಲ್ಲಿಯವರೆಗೂ ವಿಮರ್ಶಕರು, ಚಿತ್ರರಸಿಕರ ಹೊಗಳಿಕೆ ಪಾತ್ರವಾಗಿರುವ ಆ ಸಿನಿಮಾ ಬೆನ್ನಿಗೆ ವಿವಾದಗಳ ಮೇಲೆ ವಿವಾದಗಳು ಗಂಟುಬೀಳ್ತಾನೆ ಇವೆ.. ಆ ಚಿತ್ರ ಬೇರೆ ಯಾವುದೂ ಅಲ್ಲ.. ಬಡವರ ಶೋಷಣೆ ಹಾಗೂ ಉಳ್ಳವರ ಕ್ರೌರ್ಯದ ಸತ್ಯ ಕಥೆಯನ್ನು ತೆರೆಯ ಮೇಲೆ ಹಾಗೆಯೇ ಅಚ್ಚೋತ್ತಿರೋ ಜೈಭೀಮ್
ಬಡುಕಟ್ಟು ಜನರ ಕಾಯಕ ವೃತ್ತಿಯಿಂದ. ಶ್ರೀಮಂತರ ಮನೆಯ ಹೊಲದಲ್ಲಿರೋ ಇಲಿಗಳನ್ನು ಹಿಡಿಯುವುದು, ಶ್ರೀಮಂತರ ಮನೆಗೆ ಬಂದಂತಹ ವಿಷಕಾರಿ ಹಾವುಗಳನ್ನು ಹಿಡಿಯುವುದು ಇವರ ಕಾಯಕ. ಅದರ ಜೊತೆ ಹೊಟ್ಟೆಯ ಹಿಟ್ಟಿಗಾಗಿ ಕೂಲಿ ಕೆಲಸ ಅರಸಿ ಬೇರೆ ಬೇರೆ ಕಡೆ ಹೋಗಿ ವಾಪಸ್ ಬಡುಕಟ್ಟು ಜನಾಂಗದ ತಾಂಡಾ ಸೇರಿಕೊಳ್ಳುವುದು….
ಇಂತಹ ಬುಡಕಟ್ಟು ಜನಾಂಗದ ತಾಂಡಾದಲ್ಲಿ ರಾಜಾಕಣ್ಣು ಎಂಬ ವ್ಯಕ್ತಿ ಇರ್ತಾನೆ. ಈ ಪಾತ್ರದಲ್ಲಿ ಅಭಿನಯಿಸಿದ ಕಲಾವಿದ ಕೆ.ಮಣಿಕಂಡನ್. ಈ ರಾಜಾಕಣ್ಣು ಪತ್ನಿಯಾಗಿ ಲಿಜೋಮೋಲ್ ಜೋಸ್ ಅಭಿನಯಿಸಿದ್ದಾರೆ. ಸಿನಿಮಾದಲ್ಲಿ ಆಕೆಯ ಹೆಸರು ಸೆಂಗೆನಿ ಆಗಿದ್ದು, ಗರ್ಭಿಣಿಯಾಗಿ ಪತಿಯನ್ನು ಪೊಲೀಸರಿಂದ ಬಿಡಿಸಲು ಹೋರಾಡುತ್ತಾಳೆ. ಆಗ ಆಕೆ ಭೇಟಿಯಾಗೋದು.. ವಕೀಲ ಕಮ್ ಹೋರಾಟಗಾರನಾಗಿರುವ ಸೂರ್ಯರನ್ನ.. ಒಟ್ಟಾರೆ, ಇಡೀ ಸಿನಿಮಾ ಮುಂದೆನಾಗುತ್ತೆ ಅನ್ನೋ ಕುತೂಹಲ ಸೃಷ್ಟಿ ಮಾಡ್ತಾ ಹೋಗುತ್ತೆ.. ಆದ್ರೆ, ಇಷ್ಟೆಲ್ಲಾ ಯಶಸ್ಸು ಪಡೆದ ಈ ಸಿನಿಮಾದ ಬೆನ್ನಿಗೆ ವಿವಾದಗಳೂ ಒಂದೊಂದಾಗಿಯೇ ಅಂಟಿಕೊಳ್ತಿವೆ..
ಅಮೆಜಾನ್ ಪ್ರೈಮ್‌ನಲ್ಲಿ ಬಿಡುಗಡೆಯಾಗಿರೋ ಜೈ ಭೀಮ್ ಚಿತ್ರ ಭರ್ಜರಿ ಯಶಸ್ಸು ಗಳಿಸಿ ಮುನ್ನುಗ್ಗುತ್ತಿದೆ. 10ಕ್ಕೆ ಶೇ.9ಕ್ಕಿಂತ ಹೆಚ್ಚಿನ ರೇಟಿಂಗ್ ಪಡೆದು ಟಾಪ್‌ನಲ್ಲಿ ಸಾಗುತ್ತಿದೆ. ತಮಿಳು ಮೂಲ ಚಿತ್ರವಾದ್ರೂ ಕನ್ನಡ, ತೆಲುಗು, ಮಲಯಾಳಂ, ಹಿಂದಿಯಲ್ಲಿ ಡಬ್ ಆಗಿದೆ. ಹೀಗಾಗಿ ಎಲ್ಲಾ ಭಾಷಯ ಜನ ಸಿನಿಮಾ ನೋಡಿ ಮೆಚ್ಚಿಕೊಳ್ಳುತ್ತಿದ್ದಾರೆ. ಕಣ್ಣಿಗೆ ಕಟ್ಟುವಂತೆ ಇಡೀ ಚಿತ್ರ ಮೂಡಿ ಬಂದಿದ್ದು, ಒಂದರ ಹಿಂದೊಂದು ವಿವಾದಗಳೂ ಕೂಡ ಕೇಳಿಬರ್ತಿವೆ.
ಜೈ ಭೀಮ್ ಸಿನಿಮಾದಲ್ಲಿ ವಿವಾದವಾಗಿ ಕಾಣಿಸಿಕೊಂಡ ಮೊದಲನೇ ಪಾಯಿಂಟ್ ಅಂದ್ರೆ ಅದು ಕಪಾಳಮೋಕ್ಷ.
ಸಿನಿಮಾದಲ್ಲಿ ಪ್ರಕಾಶ್ ರೈ ಪೊಲೀಸ್ ಅಧಿಕಾರಿಯಾಗಿರ್ತಾರೆ. ಚಿತ್ರದಲ್ಲಾಗುವ ಪೊಲೀಸ್ ದೌರ್ಜನ್ಯದ ತನಿಖೆ ಪ್ರಕಾಶ್ ರೈ ಹೆಗಲೇರಿರುತ್ತೆ. ತನಿಖೆ ವೇಳೆ ವ್ಯಕ್ತಿಯೊಬ್ಬ ಪ್ರಕಾಶ್ ರೈ ಮುಂದೆ ಹಿಂದಿಯಲ್ಲೇ ಉತ್ತರಿಸುತ್ತಾ ಇರ್ತಾನೆ. ಇದೇ ವೇಳೆ ಹಿಂದಿಯಲ್ಲಿ ಮಾತನಾಡುವ ವ್ಯಕ್ತಿಗೆ ರೈ ಕಪಾಳಮೋಕ್ಷ ಮಾಡುತ್ತಾರೆ. ತಮಿಳಲ್ಲಿ ಮಾತಾಡು ಅಂತ ಪ್ರಕಾಶ್ ರೈ ಖಡಕ್ ವಾರ್ನಿಂಗ್ ಮಾಡುತ್ತಾರೆ. ಈ ದೃಶ್ಯವನ್ನ ನೋಡಿದ ಹಲವರು ಪ್ರಕಾಶ್ ರೈ ಹಿಂದಿ ವಿರೋಧಿಯಂತ ಧ್ವನಿ ಎತ್ತಿದ್ದಾರೆ
ಸಿನಿಮಾ ಬಗ್ಗೆ ವಿವಾದ ಏಳಲು ಕಾರಣವಾಗಿರುವುದೇ ಈ ದೃಶ್ಯ.
ಇದು ಹಿಂದಿ ಭಾಷಿಕರನ್ನು ಕೆರಳಿಸಿದೆ. ಆಯಾ ಭಾಷೆಗೆ ತನ್ನದೇ ಆದಂತಹ ಘನತೆ ಗೌರವ ಇದ್ದೇ ಇದೆ. ಆದ್ರೆ, ಹಿಂದಿ ಭಾಷೆ ಮೇಲೆ ಇಷ್ಟೊಂದು ದ್ವೇಷ ಸಾಧಿಸುವ ಅಗತ್ಯ ಏನಿದೆ? ಅಂತ ಉತ್ತರ ಭಾರತೀಯರಿಂದ ಅಭಿಪ್ರಾಯ ಕೇಳಿ ಬರುತ್ತಿದೆ. ಆ ದೃಶ್ಯವನ್ನು ಕತ್ತರಿ ಹಾಕುವಂತೆ ಒತ್ತಡಗಳು ಆರಂಭವಾಗಿವೆ. ಸಾಮಾಜಿಕ ಜಾಲತಾಣದಲ್ಲಿಯೂ ಕೂಗು ಕೇಳಿ ಬರುತ್ತಿದೆ. ಆದ್ರೆ, ಚಿತ್ರ ತಂಡ ಅದ್ಯಾವುದಕ್ಕೂ ಕ್ಯಾರೇ ಅಂದಿಲ್ಲ.
ಕಳೆದ ಏಳೆಂಟು ವರ್ಷದಿಂದ ಹಿಂದಿ ಮತ್ತು ಇತರೆ ಭಾಷೆಗಳ ವಿವಾದ ತಲೆದೋರಿದೆ. ಅದರಲ್ಲಿಯೂ ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಕನ್ನಡ, ತಮಿಳುನಾಡಿನಲ್ಲಿ ತಮಿಳು, ಆಂಧ್ರ ತೆಲಂಗಾಣದಲ್ಲಿ ತೆಲುಗು, ಕೇರಳದಲ್ಲಿ ಮಲಯಾಳಂ ಭಾಷೆ ಚಾಲ್ತಿಯಲ್ಲಿದೆ. ಈ ಸ್ಥಳೀಯ ಭಾಷೆಗಳ ಮೇಲೆ ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರುವ ಪ್ರಯತ್ನ ಮಾಡುತ್ತಿದೆ ಅನ್ನೋ ಆರೋಪವಿದೆ. ಇದು ದಿನದಿಂದ ದಿನಕ್ಕೆ ವಿವಾದವಾಗಿ ಮುಂದುವರಿಯುತ್ತಲೇ ಇದೆ. ಈ ನಡುವ ಜೈ ಭೀಮ್ ಸಿನಿಮಾದಲ್ಲಿನ ಡೈಲಾಗ್ ಈ ವಿವಾದಕ್ಕೆ ತುಪ್ಪಾ ಸುರಿತಾ? ಅನ್ನೋ ಅನುಮಾನವನ್ನು ಹುಟ್ಟಿಸಿದೆ.
ಈ ನಡುವೆ ಇದಕ್ಕೆ ಸ್ಪಷ್ಟನೆ ನೀಡಿರೋ ನಟ ಪ್ರಕಾಶ್ ರೈ, ಸಿನಿಮಾದಲ್ಲಿ ತಳ ಸಮುದಾಯದವರ ಪರಿಸ್ಥಿತಿಯನ್ನು ತೋರಿಸಲಾಗಿದೆ. ಆದ್ರೆ, ಅದು ವಿವಾದ ಸೃಷ್ಟಿಸಿದವರ ಕಣ್ಣಿಗೆ ಕಾಣಲಿಲ್ಲ. ಕಪಾಳಕ್ಕೆ ಹೊಡೆದಿರುವುದನ್ನೇ ವಿವಾದ ಮಾಡುತ್ತಿದ್ದಾರೆ. ಇದರಲ್ಲಿ ವಿವಾದ ಮಾಡುವವರ ಮನಸ್ಥಿತಿ ಎಂಥದ್ದು ಅನ್ನೋದನ್ನು ತೋರಿಸುತ್ತಿದೆ. ನಾನು ದಕ್ಷಿಣ ಭಾರತದ ವ್ಯಕ್ತಿಯಾಗಿ, ನಟನಾಗಿ ಹಿಂದಿ ಹೇರಿಕೆಯನ್ನು ಒಪ್ಪಿಕೊಳ್ಳಲಾರೆ. ಚಿತ್ರದಲ್ಲಿ ಸಿಕ್ಕ ಅಭಿನಯಕ್ಕೆ ಹೆಮ್ಮೆ ಇದೆ ಎಂದು ತಿಳಿಸಿದ್ದಾರೆ.
ಚಿತ್ರದ ದೃಶ್ಯವೊಂದರಲ್ಲಿ ಕಮ್ಯೂನಲ್ ಸಿಂಬಲ್ ಕ್ಯಾಲೆಂಡರ್ನಲ್ಲಿ ಕಾಣಿಸಿಕೊಂಡ ಚಿತ್ರಕ್ಕೆ ವಿರೋಧ ಬಂದ ಬಳಿಕ ಚಿತ್ರ ತಂಡ ಚಿಹ್ನೆ ಬದಲಿಸಿದೆ.
ಚಿತ್ರದ ದೃಶ್ಯವೊಂದರಲ್ಲಿ ಖಳನಾಯಕನಾಗಿರುವವನು ಫೋನಿನಲ್ಲಿ ಮಾತನಾಡುವ ವೇಳೆ ಅಲ್ಲಿದ್ದ ಕ್ಯಾಲೆಂಡರ್ನಲ್ಲಿ ಕಮ್ಯೂನಲ್ ಚಿಹ್ನೆ ಕಾಣಸಿಗುತ್ತದೆ. ಕ್ಯಾಲೆಂಡರ್ನಲ್ಲಿ ಕಾಣಿಸಿಕೊಂಡ ಆ ಚಿತ್ರಕ್ಕೂ ತೀವ್ರ ವಿರೋಧ ವ್ಯಕ್ತವಾಗಿದೆ. ಬಳಿಕ ಚಿಹ್ನೆ ಬದಲಿಸಲು ನಿರ್ಧರಿಸಿರುವ ಚಿತ್ರತಂಡ ಯಾರಿಗೂ ನೋವಾಗದಂತೆ ಮತ್ತೊಂದು ಚಿಹ್ನೆಯನ್ನ ಅಳವಡಿಸಿದೆ. ಡಿಜಿಟಲಿ ಚಿತ್ರದ ಮರುವಿನ್ಯಾಸ ಮಾಡಿದ್ದು, ಲಕ್ಷ್ಮೀ ದೇವತೆಯ ಚಿತ್ರವನ್ನು ಅಳವಡಿಸಿದೆ.
ಈ ರೀತಿಯಾಗಿ ಜೈ ಭೀಮ್ ಚಿತ್ರ ಒಂದರ ಹಿಂದೆ ಒಂದು ವಿವಾದಕ್ಕೆ ಗುರಿಯಾಗ್ತಾನೆ ಇದೆ. ಅಲ್ಲದೇ ಕೆಲವರು ಚಿತ್ರದ ವಿರುದ್ಧ ಪ್ರಕರಣಗಳನ್ನೂ ದಾಖಲಿಸುತ್ತಿರುವ ಘಟನೆಗಳೂ ನಡೆಯುತ್ತಿದೆ. ಆದ್ರೆ, ಇದಕ್ಕೆಲ್ಲಾ ತಲೆಕೆಡಿಸಿಕೊಳ್ದೇ ಇರುವವರು ಸಿನಿಮಾವನ್ನ ಸಿನಿಮಾದಂತೆ ಅಷ್ಟೇ ನೋಡುತ್ತಿದ್ದು, ಇದೆಲ್ಲಾ ವಿವಾದಗಳು ಕಾಮನ್ ಅಂತಿದ್ದಾರೆ. ಸಿನಿಮಾದಲ್ಲಿ ವಿವಾದಗಳು ಕಾಮನ್. ಆದ್ರೆ ಜೈ ಭೀಮ್ ವಿಚಾರದಲ್ಲಿ ಒಂದು ವಿವಾದ ಅಂತ್ಯವಾಯ್ತು ಅನ್ನೋ ಹಂತದಲ್ಲಿ ಮತ್ತೊಂದು ವಿವಾದ ಹುಟ್ಟಿಕೊಳ್ಳುತ್ತಿದೆ.
ಅಷ್ಟೇ ಅಲ್ಲ.. ನಿಜ ಘಟನೆ ಆಧರಿತ ಅಂತ ಚಿತ್ರತಂಡ ಹೇಳಿಕೊಂಡಿದ್ದರೂ ಇಲ್ಲಿ ದೌರ್ಜನ್ಯಕ್ಕೆ ಒಳಗಾಗುವವರ ಹೆಸರು ಹಾಗೇ ಇದೆ.. ಅವರಿಗಾಗಿ ಹೊರಾಡಿದ ಲಾಯರ್ ಹೆಸರನ್ನೂ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಆದ್ರೆ ದೌರ್ಜನ್ಯ ಎಸಗಿದ ಪೊಲೀಸ್ ಅಧಿಕಾರಿ ಹೆಸರನ್ನು ಮಾತ್ರ ಬದಲಿಸಿ. ಒಂದು ಜಾತಿಯನ್ನೇ ಗುರಿಯಾಗಿಸಿಕೊಳ್ಳಲಾಗಿದೆ ಅನ್ನೋ ಆರೋಪ ಕೂಡ ಚಿತ್ರತಂಡದ ಮೇಲೆ ಕೇಳಿ ಬಂದಿದೆ. ಸತ್ಯ ಹೇಳೋದಿದ್ರೆ ಸತ್ಯವನ್ನೇ ಹೇಳಬೇಕಿತ್ತು.. ಆದ್ರೆ ಸೆಲೆಕ್ಟಿವ್ ಸತ್ಯ ಹೇಳಿದ್ಯಾಕೆ? ಅನ್ನೋ ಪ್ರಶ್ನೆಗೆ ಉತ್ತರಿಸುವ ಗೋಜಿಗೆ ಚಿತ್ರತಂಡವಂತೂ ಹೋಗಿಲ್ಲ..