ರಿಪ್ಪನ್ ಪೇಟೆ : ಸಂಯುಕ್ತ ಕಿಸಾನ್ ಮೋರ್ಚಾ ಕರೆ ನೀಡಿದ್ದ ಭಾರತ್ ಬಂದ್ ಪಟ್ಟಣದಲ್ಲಿ ಭಾಗಶಃ ಯಶಸ್ವಿಯಾಯಿತು. ರಿಪ್ಪನ್ ಪೇಟೆಯ ರೈತಸಂಘ ,ವಿವಿಧ ಸಂಘ ಸಂಸ್ಥೆಗಳು ಹಾಗೂ ವಿವಿಧ ಪಕ್ಷಗಳ ಸಹಕಾರದಿಂದ ಭಾರತ್ ಬಂದ್ ಗೆ ಸಂಪೂರ್ಣ ಬೆಂಬಲ ವ್ಯಕ್ತವಾಗಿತ್ತು.
ಸೋಮವಾರ ರಿಪ್ಪನ್ ಪೇಟೆಯಲ್ಲಿ ವಾರದ ಸಂತೆ ನಡೆಯುವುದರಿಂದ ಜನಸಾಮಾನ್ಯರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶಕ್ಕೆ ರಿಪ್ಪನ್ ಪೇಟೆಯ ಭಾರತ್ ಬಂದ್ ನ ಆಯೋಜಕರು ಬೆಳಿಗ್ಗೆ 6 ರಿಂದ ಬೆಳಿಗ್ಗೆ 11 ಗಂಟೆಯವರೆಗೆ ಬಂದ್ ಮಾಡುವಂತೆ ಮನವಿ ಮಾಡಿದ್ದರು.ಆಯೋಜಕರ ಈ ಮನವಿಗೆ ಸ್ಪಂದಿಸಿದ ಅನೇಕ ಅಂಗಡಿ,ಹೊಟೇಲ್ ಮಾಲೀಕರು ಬಂದ್ ಗೆ ಸಹಕರಿಸಿದರು.11 ಗಂಟೆಯ ನಂತರ ಎಂದಿನಂತೆ ಸಹಜವಾಗಿ ಎಲ್ಲಾ ವ್ಯಾಪಾರ ಚಟುವಟಿಕೆಗಳು ಪ್ರಾರಂಭಗೊಂಡವು.
ರಿಪ್ಪನ್ ಪೇಟೆಯ ವಿನಾಯಕ ಸರ್ಕಲ್ ನಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ಮುಖಂಡ ಬಿ ಪಿ ರಾಮಚಂದ್ರ ರವರು ಕೇಂದ್ರದ ಕೃಷಿ ವಿರೋಧಿ ಶಾಸನ ಮತ್ತು ರಾಜ್ಯದ ಎಪಿಎಂಸಿ ತಿದ್ದುಪಡಿಯ ಶಾಸನದಿಂದ ರೈತರು ಸಂಕಷ್ಟದಲ್ಲಿ ಸಿಲುಕಲಿದ್ದಾರೆ.ಕೃಷಿ ವಿರೋಧಿ ಶಾಸನ ಮತ್ತು ಎಪಿಎಂಸಿ ತಿದ್ದುಪಡಿ ರದ್ದುಪಡಿಸಬೇಕೆಂದು ದೇಶದ 500 ಕ್ಕೂ ಅಧಿಕ ವಿವಿಧ ಸಂಘಟನೆಗಳಿಂದ ಕೂಡಿದ ಸಂಯುಕ್ತ ಕಿಸಾನ್ ಮೋರ್ಚಾ ಮೂಲಕ ಕಳೆದ ಕೆಲವು ತಿಂಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದರು ಸಹ ರೈತರ ಪ್ರತಿಭಟನೆಗೆ ಮನ್ನಣೆ ನೀಡದೇ ನಿರ್ಲಕ್ಷ್ಯ ವಹಿಸುತ್ತಿರುವ ಕೇಂದ್ರ ಸರ್ಕಾರದ ವಿರುದ್ದ ಹರಿಹಾಯ್ದರು.
ನಂತರ ಮಾತನಾಡಿದ ಜೆಡಿಎಸ್ ಮುಖಂಡರಾದ ಅರ್ ಎ ಚಾಬುಸಾಬ್ ಕೇಂದ್ರದ ಹಾಗೂ ರಾಜ್ಯದ ಬಿಜೆಪಿ ಸರ್ಕಾರ ಮಧ್ಯಮ ವರ್ಗ ಹಾಗೂ ಬಡವರ್ಗದ ಜನರ ಮೇಲೆ ಆರ್ಥಿಕ ದೌರ್ಜನ್ಯ ಮಾಡುತ್ತಿದ್ದು ಗ್ಯಾಸ್,ಪೆಟ್ರೋಲ್ ,ಡಿಸೇಲ್ ಬೆಲೆಗಳನ್ನು ಏರಿಸುವುದರ ಮೂಲಕ ದಿನ ಉಪಯೋಗಿ ವಸ್ತುಗಳ ಬೆಲೆ ಏರುವಂತೆ ಮಾಡಿದ್ದು ಇದರಿಂದ ಬಡವರು , ಮಧ್ಯಮ ವರ್ಗದವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ ಹಾಗೇಯೆ ಕೇಂದ್ರ ಸರ್ಕಾರ ಹೊಸ ಕೃಷಿ ನೀತಿ ಮತ್ತು ಎಪಿಎಂಸಿ ತಿದ್ದುಪಡಿ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ಗಲ್ಲಿಗೇರಿಸುವಂತಹ ಶಾಸನವಾಗಿದ್ದು ಅವುಗಳನ್ನು ರದ್ದುಪಡಿಸಬೇಕೆಂದು ಆಗ್ರಹಿಸಿದರು.
ರೈತ ಸಂಘದ ಮುಖಂಡರಾದ ಆರ್ ಎನ್ ಮಂಜಪ್ಪ ರವರು ಮಾತನಾಡಿ ಕೇಂದ್ರದ ಕೃಷಿ ವಿರೋಧಿ ಶಾಸನವನ್ನು ಕೈ ಬಿಡಬೇಕು.ಎಪಿಎಂಸಿ ಕಾನೂನು ತಿದ್ದುಪಡಿ ರದ್ದು ಪಡಿಸಬೇಕು.ಗಗನಕ್ಕೇರುತ್ತಿರುವ ದಿನ ನಿತ್ಯ ವಸ್ತುಗಳ ಬೆಲೆಯನ್ನು ನಿಯಂತ್ರಿಸಿ ಜನ ಸಾಮಾನ್ಯರಿಗೆ ನೆರವಾಗಬೇಕು ಎಂದರು.
ಪ್ರತಿಭಟನಾ ಸಭೆಯ ನಂತರ ಪ್ರತಿಭಟನಕಾರರು ಮೆರವಣಿಗೆಯ ಮೂಲಕ ನಾಡಕಛೇರಿಗೆ ತೆರಳಿ ಉಪ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ಈ ಪ್ರತಿಭಟನಾ ಕಾರ್ಯಕ್ರಮದಲ್ಲಿ ಹೊಸನಗರ ಜನಪರ ವೇದಿಕೆ ಅಧ್ಯಕ್ಷರಾದ ಆರ್ ಎನ್ ಮಂಜುನಾಥ್,ಕೆಂಚನಾಲ ಗ್ರಾಪಂ ಅಧ್ಯಕ್ಷರಾದ ಉಭೇದುಲ್ಲಾ ಷರೀಫ಼್,ರೈತ ಸಂಘದ ಮುಖಂಡರಾದ ಸುಗಂಧರಾಜ್,ಕಾಂಗ್ರೆಸ್ ಮುಖಂಡರಾದ ಅಮೀರ್ ಹಂಜಾ, ಈಶ್ವರಪ್ಪ ಗೌಡ, ರಿಪ್ಪನ್ ಪೇಟೆ ಗ್ರಾಪಂ ಸದಸ್ಯರಾದ ಆಸೀಫ಼್ ಭಾಷಾಸಾಬ್,ಎನ್ ಚಂದ್ರೇಶ್,ಮಧುಸೂದನ್,ಪ್ರಕಾಶ್ ಪಾಲೇಕರ್ ಮುಖಂಡರಾದ ಎನ್ ವರ್ತೇಶ್,ಕಲ್ಲೂರು ತೇಜಮೂರ್ತಿ,ಮುಡುಬ ಧರ್ಮಪ್ಪ,ಫ಼್ಯಾನ್ಸಿ ರಮೇಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.