ಆಯಿಷಾ ಸುಲ್ತಾನ್ ವಿರುದ್ಧದ ದೇಶದ್ರೋಹ ಪ್ರಕರಣ; ನಿರೀಕ್ಷಣಾ ಜಾಮೀನು ನೀಡಿದ ಕೇರಳ ಹೈಕೋರ್ಟ್
_newsk_3592743447.jpeg)
ಕೊಚ್ಚಿ ; ಲಕ್ಷದ್ವೀಪದಲ್ಲಿ ಕೊರೋನಾ ಸೋಂಕು ಅಧಿಕವಾಗಲು ಕೇಂದ್ರ ಸರ್ಕಾರದ ಕೆಟ್ಟ ನೀತಿಗಳೇ ಕಾರಣ ಎಂದು ಹೇಳುವ ಭರದಲ್ಲಿ ಕೇಂದ್ರ ಸರ್ಕಾರ ಲಕ್ಷದ್ವೀಪದ ಮೇಲೆ ಜೈವಿಕ ಅಸ್ತ್ರ ಪ್ರಯೋಗಿಸಿದೆ ಎಂದು ಹೇಳುವ ಮೂಲಕ ದೇಶದ್ರೋಹ ಪ್ರಕರಣಕ್ಕೆ ಒಳಗಾಗಿದ್ದ ಚಿತ್ರ ನಿರ್ಮಾಪಕಿ ಆಯಿಷಾ ಸುಲ್ತಾನ್ ಅವರಿಗೆ ಕೇರಳ ಹೈಕೋರ್ಟ್ ಇಂದು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಈ ಹಿಂದೆ ಅಂತಿಮ ಆದೇಶವನ್ನು ಕಾಯ್ದಿರಿಸಿದ್ದ ನ್ಯಾಯಾಲಯವು ಒಂದು ವಾರ ಬಂಧನದಿಂದ ರಕ್ಷಣೆ ನೀಡಿತ್ತು. ಆದರೆ, ಇಂದು ಒದೇ ಪ್ರಕರಣದ ವಿಚಾರಣೆ ನಡೆಸಿರುವ ನ್ಯಾಯಾಲಯ ಕೊನೆಗೂ ನಿರೀಕ್ಷಣಾ ಜಾಮೀನು ನೀಡಿ ಬಂಧನದ ಭೀತಿಯಲ್ಲಿದ್ದ ಆಯಿಷಾ ಸುಲ್ತಾನ್ ಅವರಿಗೆ ರಕ್ಷಣೆ ನೀಡಿದೆ.
ಕಳೆದ ತಿಂಗಳು ಮಲಯಾಳಂ ಟಿವಿ ಚಾನೆಲ್ ಒಂದರಲ್ಲಿ ಕಾಣಿಸಿಕೊಂಡಿದ್ದ ಆಯಿಷಾ ಸುಲ್ತಾನ್, ಲಕ್ಷದ್ವೀಪದ ಆಡಳಿತಾಧಿಕಾರಿಯನ್ನು ಒಕ್ಕೂಟ ಸರ್ಕಾರವು ‘ಜೈವಿಕ ಅಸ್ತ್ರ’ ರೂಪದಲ್ಲಿ ಪ್ರಯೋಗಿಸಿದೆ ಎಂದು ಹೇಳಿದ್ದರು. ಇದರ ವಿರುದ್ದ ಲಕ್ಷದ್ವೀಪ ಬಿಜೆಪಿ ಅಧ್ಯಕ್ಷ ಸಿ. ಅಬ್ದುಲ್ ಖಾದರ್ ಹಾಜಿ ನೀಡಿದ ದೂರಿನ ಮೇರೆಗೆ ಜೂನ್ 10 ರಂದು ದ್ವೀಪದ ಪೊಲೀಸರು ಆಯಿಷಾ ಸುಲ್ತಾನ ವಿರುದ್ಧ ಪ್ರಕರಣ ದಾಖಲಿಸಿದ್ದರು.
ಆಯಿಷಾ ಸುಲ್ತಾನ ಅವರು ಟಿವಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ, “ಕೊರೋನಾ ಪ್ರಕರಣ ಶೂನ್ಯ ಪ್ರಮಾಣದಲ್ಲಿದ್ದ ಪ್ರದೇಶದಲ್ಲಿ ದಿನಕ್ಕೆ ನೂರು ಪ್ರಕರಣಗಳು ವರದಿಯಾಗುತ್ತಿವೆ. ಒಕ್ಕೂಟ ಸರ್ಕಾರ ಹೊಸದಾಗಿ ನೇಮಕಮಾಡಿದ್ದ ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರನ್ನು ಪ್ರಯೋಗಿಸಿದ್ದು ‘ಜೈವಿಕ ಅಸ್ತ್ರ’ ರೀತಿಯಲ್ಲಾಗಿದೆ. ನನಗೆ ಸ್ಪಷ್ಟವಾಗಿ ಹೇಳಲು ಸಾಧ್ಯ, ಒಕ್ಕೂಟ ಸರ್ಕಾರವು ಕೊರೊನಾವನ್ನು ಜೈವಿಕ ಅಸ್ತ್ರವಾಗಿ ಪ್ರಯೋಗಿಸಿದೆ” ಎಂದು ಹೇಳಿದ್ದರು.
ಆಯಿಷಾ ಸುಲ್ತಾನ ಅವರ ಹೇಳಿಕೆಯನ್ನು ವಿವಾದವನ್ನಾಗಿಸಿದ ಬಿಜೆಪಿ ಅವರ ವಿರುದ್ದ ದೇಶದ್ರೋಹದ ಆರೋಪ ಹೊರಿಸಿ ದೂರು ನೀಡಿತ್ತು. ಅದರ ಆಧಾರದ ಮೇಲೆ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 124ಎ (ದೇಶದ್ರೋಹ) ಮತ್ತು 153 ಬಿ (ದ್ವೇಷಪೂರಿತ ಭಾಷಣ) ಅಡಿಯಲ್ಲಿ ಲಕ್ಷದ್ವೀಪದ ಕವರತ್ತಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಆಯಿಷಾ ಸುಲ್ತಾನಾ ವಿರುದ್ದ ದೇಶದ್ರೋಹ ಎಫ್‌ಐಆರ್ ದಾಖಲಾಗುತ್ತಿದ್ದಂತೆ ಬಿಜೆಪಿಯ ಒಳಗೆ ಪ್ರತಿಭಟನೆ ಪ್ರಾರಂಭವಾಗಿ, ಹದಿನೈದು ನಾಯಕರು ಸೇರಿದಂತೆ ಹಲವು ಕಾರ್ಯಕರ್ತರು ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. “ಪ್ರಸ್ತುತ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರ ಕ್ರಮಗಳು ಜನ ವಿರೋಧಿ, ಪ್ರಜಾಪ್ರಭುತ್ವ ವಿರೋಧಿ ಮತ್ತು ಜನರಲ್ಲಿ ತೀವ್ರ ಸಂಕಟವನ್ನು ಉಂಟುಮಾಡುತ್ತವೆ” ಎಂದು ಬರೆದಿದ್ದ ರಾಜಿನಾಮೆ ಪತ್ರದಲ್ಲಿ, ಬಿಜೆಪಿಯ 12 ನಾಯಕರು ಸಹಿ ಮಾಡಿದ್ದರು.
ದ್ವೀಪಕ್ಕೆ ಹೊಸದಾಗಿ ನೇಮಕಗೊಂಡಿರುವ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ದ್ವೀಪದ ಸಂಸ್ಕೃತಿಯನ್ನು ಹಾಳುಗೆಡವುತ್ತಿದ್ದಾರೆ ಮತ್ತು ತಮ್ಮ ಹಾಗೂ ತಮ್ಮ ರಾಜಕೀಯ ಹಿತಾಸಕ್ತಿಗಾಗಿ ದ್ವೀಪದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ದ್ವೀಪವಾಸಿಗಳು ಆರೋಪಿಸುತ್ತಿದ್ದಾರೆ.ಅವರು ದ್ವೀಪದಲ್ಲಿ ಆಡಳಿತ ವಹಿಸಿಕೊಂಡ ನಂತರ ಮಾಡಿರುವ ಕೊರೊನಾ ಮಾರ್ಗಸೂಚಿಯ ಬದಲಾವಣೆ, ಮೀನುಗಾರರ ಗುಡಿಸಲು ತೆರವು, ಗೂಂಡಾ ಕಾಯ್ದೆ ಸೇರಿದಂತೆ ಜಾರಿ ಮತ್ತಿತರ ನಿರ್ಣಯಗಳ ವಿರುದ್ಧ ಕೇರಳ ಹೈಕೋರ್ಟ್‌ನಲ್ಲಿ ಇದುವರೆಗೂ 23 ಅರ್ಜಿಗಳು ಸಲ್ಲಿಕೆಯಾಗಿವೆ.