
SAGARA | ಬಾಣಂತಿಗೆ ಕಪಾಳಮೋಕ್ಷ ಆರೋಪ ಡಾ. ನಾಗೇಂದ್ರಪ್ಪ ಮೇಲೆ ಪ್ರಕರಣ ದಾಖಲು | ಆಸ್ಪತ್ರೆಗೆ DHO ದಿಡೀರ್ ಭೇಟಿ
ಸಾಗರ : ಶಸ್ತ್ರ ಚಿಕಿತ್ಸೆಗೆ ದಾಖಲಾಗಿದ್ದ ಬಾಣಂತಿಯೊಬ್ಬರಿಗೆ ಕಪಾಳಮೋಕ್ಷ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ತಾಯಿ-ಮಗು ಆಸ್ಪತ್ರೆಯ ಪ್ರಸೂತಿ ವೈದ್ಯ ಡಾ. ನಾಗೇಂದ್ರಪ್ಪ ಎಂಬವರ ವಿರುದ್ಧ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ. 1 ರಂದು ಲೋಕೇಶ್ ಎಂಬುವವರ ಪತ್ನಿಯನ್ನು ತಾಯಿ-ಮಗು ಆಸ್ಪತ್ರೆಗೆ ಸಂತಾನಹರಣ ಚಿಕಿತ್ಸೆಗೆ ದಾಖಲು ಮಾಡಲಾಗಿತ್ತು.ಬೆಳಿಗ್ಗೆ 9.45 ಕ್ಕೆ ಡಾ. ನಾಗೇಂದ್ರಪ್ಪ ಶಸ್ತ್ರಚಿಕಿತ್ಸೆ ಮಾಡಿದ್ದರು. ಶಸ್ತ್ರ ಚಿಕಿತ್ಸೆಯ ಬಳಿಕ ಡಾ. ನಾಗೇಂದ್ರಪ್ಪ ವಿನಾ ಕಾರಣ ಲೋಕೇಶ್ ಅವರ ಪತ್ನಿಯ ಕೆನ್ನೆಗೆ ರಭಸವಾಗಿ ಹೊಡೆದಿದ್ದಾರೆ. ಇದರಿಂದ ಮಹಿಳೆಗೆ ಕಿವಿ ನೋವಾಗಿದ್ದು ಮಾನಸಿಕವಾಗಿ ಹೆದರಿದ್ದಾರೆ ಎನ್ನಲಾಗಿದೆ.
ಘಟನೆಯ ಬಳಿಕ ಹೊಡೆದಿರುವ ಕಾರಣ ತಿಳಿಯಲು ಲೋಕೇಶ್, ಡಾ. ನಾಗೇಂದ್ರಪ್ಪ ಅವರನ್ನು ಭೇಟಿಯಾಗಲು ಆಸ್ಪತ್ರೆಯಲ್ಲಿ ಹುಡುಕಿದಾಗ ಅವರು ನಾಪತ್ತೆಯಾಗಿದ್ದರು. ಫೋನ್ ಕರೆ ಮಾಡಿ ವಿಚಾರಿಸಿದಾಗ ನೀವು ಏನು ಬೇಕಾದರೂ ಮಾಡಿಕೊಳ್ಳಿ. ನನಗೂ ಕಾನೂನು ಗೊತ್ತಿದೆ ಎಂದು ಉಡಾಫೆಯ ಉತ್ತರ ನೀಡಿದ್ದಾರೆ.
ಡಾ. ನಾಗೇಂದ್ರಪ್ಪ ವಿರುದ್ಧ ಸೂಕ್ತ ಕಾನೂನು ಕ್ರಮ ಜರಗಿಸುವಂತೆ ಲೋಕೇಶ್ ನೀಡಿದ ದೂರಿನ ಹಿನ್ನೆಲೆ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಆಸ್ಪತ್ರೆಗೆ ಡಿಹೆಚ್ಓ ದಿಢೀರ್ ಭೇಟಿ
ಸಾಗರದ ತಾಯಿ ಮಗು ಆಸ್ಪತ್ರೆಯ ವೈದ್ಯ ನಾಗೇಂದ್ರಪ್ಪ ವಿರುದ್ದ ಹಲವಾರು ಆರೋಪಗಳು ಮಾದ್ಯಮಗಳಲ್ಲಿ ವರದಿಯಾದ ಹಿನ್ನಲೆಯಲ್ಲಿ ಆರೋಗ್ಯ ಸಚಿವರ ಕಛೇರಿಯ ಸೂಚನೆಯ ಮೇರೆಗೆ DHO ಡಾ. ನಟರಾಜ್ ಕೆ ಎನ್ ಸಾಗರದ ತಾಯಿ ಮಗು ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಸಿಬ್ಬಂದಿಗಳ ಬಳಿ ಮಾಹಿತಿ ಪಡೆದು ಆರೋಗ್ಯ ಸಚಿವರ ಕಛೇರಿಗೆ ವರದಿ ಸಲ್ಲಿಸಿದ್ದಾರೆ.

