ಒಕ್ಕಲೆಬ್ಬಿಸುವ ನೋಟಿಸ್ ನೀಡದಂತೆ ಅರಣ್ಯ ಸಚಿವರಿಗೆ ರೈತರ ಮನವಿ – ಮಹತ್ವದ ಉತ್ತರ ಕೊಟ್ಟ ಈಶ್ವರ್ ಖಂಡ್ರೆ

ಶಿವಮೊಗ್ಗ : ನಗರಕ್ಕೆ ಆಗಮಿಸಿದ್ದ ಅರಣ್ಯ ಸಚಿವ ಈಶ್ವರ್ ಖಂಡ್ರೆ ಒತ್ತುವರಿ ತೆರವಿನ ನೋಟಿಸ್ ನೀಡುತ್ತಿರುವ ಪ್ರಕರಣದ ಬಿಸಿ ತಟ್ಟಿದೆ. ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆಯ ಮುಖಂಡರ ಅರಣ್ಯ ಸಚಿವರನ್ನ ಭೇಟಿಯಾಗಿ ರೈತರನ್ನು ಒಕ್ಕಲೆಬ್ಬಿಸದಂತೆ ಮನವಿ ಮಾಡಿದರು.
ಮುಖಂಡರ ಪರವಾಗಿ ಸಚಿವರಿಗೆ ಮನವಿ ಸಲ್ಲಿಸಿದ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ರಾಜ್ಯಾಧ್ಯಕ್ಷ ಹೆಚ್.ಆರ್. ಬಸವರಾಜಪ್ಪ ಸಾಗುವಳಿ ಪಡೆದು ಖಾತೆ, ಪಹಣಿ ಇರುವ ರೈತರ ಜಮೀನನ್ನು ಒಕ್ಕಲೆಬ್ಬಿಸುತ್ತಿರುವುದನ್ನ ತಕ್ಷಣವೇ ನಿಲ್ಲಿಸುವಂತೆ ಮನವಿ ಮಾಡಿದರು
ಅಲ್ಲದೆ ಪುರದಾಳ್, ಬೆಳ್ಳೂರು, ತಮ್ಮಡಿಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಸತತವಾಗಿ ಕಾಡಾನೆಗಳು ದಾಳಿ ಮಾಡುತ್ತಿದ್ದು, ಅದರಿಂದ ಆಗುತ್ತಿರುವ ಹಾನಿ ತಪ್ಪಿಸುವಂತೆ ಕೋರಿದರು. ಅಲ್ಲದೆ ಕಾಡಾನೆ ದಾಳಿಗೆ ಸಾವನ್ನಪ್ಪಿರುವ ವ್ಯಕ್ತಿ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರ ಹಾಗೂ ಬೆಳೆಹಾನಿಗೆ ನಷ್ಟ ಪರಿಹಾರ ನೀಢುವಂತೆ ಕೋರಿದರು.


ಇನ್ನೂ ಈ ಸಂಬಂಧ ಮಾಧ್ಯಮಗಳೊಂದಿಗೆ ಮಾತನಾಡಿದ ಅರಣ್ಯ ಸಚಿವ ಈಶ್ವರ್ ಖಂಡ್ರೆ, 3 ಎಕರೆ ಒಳಗಿನ ಸಾಗುವಳಿದಾರರಿಗೆ ಒಕ್ಕಲೆಬ್ಬಿಸಬಾರದು, 2015 ರೊಳಗೆ ಯಾರು ಅರ್ಜಿ ಹಾಕಿದ್ದಾರೆ, ಆ ಕುರಿತಾಗಿ ಕೋರ್ಟ್ ಇನ್ನೂ ತೀರ್ಪು ನೀಡಿಲ್ಲ , ಆ ಕಾರಣಕ್ಕಾಗಿ ಅಂತಹವರಿಗೂ ಯಾವುದೇ ಸಮಸ್ಯೆ ನೀಡಬಾರದು ಅಂತಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.
2015 ರ ನಂತರವೂ ದೊಡ್ಡ ಮಟ್ಟದಲ್ಲಿ ಒತ್ತುವರಿಯಾಗಿದ್ದು, ಉಪಗೃಹ ಆಧರಿತ ಚಿತ್ರಗಳನ್ನ ಅಂತಹ ಒತ್ತುವರಿಯನ್ನ ಸಾಕ್ಷಿಕರಿಸಿದೆ. ಅವುಗಳನ್ನ ತೆರವುಗೊಳಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.