w
Headlines
Home » ರಿಪ್ಪನ್ ಪೇಟೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಆನ್‌ಲೈನ್ ದಂಡ : ವಾಹನ ಸವಾರರಿಗೆ ಎಚ್ಚರಿಕೆ

ರಿಪ್ಪನ್ ಪೇಟೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಆನ್‌ಲೈನ್ ದಂಡ : ವಾಹನ ಸವಾರರಿಗೆ ಎಚ್ಚರಿಕೆ

GridArt 20260313

Ripponpete police introduce an online traffic fine system where rule violations like riding without a helmet or triple riding are captured via mobile cameras and fines are sent directly to vehicle owners through SMS.

ರಿಪ್ಪನ್ ಪೇಟೆಯಲ್ಲಿ ಸಂಚಾರ ನಿಯಮ ಉಲ್ಲಂಘನೆಗೆ ಆನ್‌ಲೈನ್ ದಂಡ : ವಾಹನ ಸವಾರರಿಗೆ ಎಚ್ಚರಿಕೆ

ಹೆಲ್ಮೆಟ್ ಹಾಕದೇ ಪೇಟೆಗೆ ಬರ್ತೀರಾ? ಹುಷಾರ್… ಮೊಬೈಲ್‌ಗೆ ‘ಟಿನ್’ ಅಂತ ದಂಡದ ಮೆಸೇಜ್ ಬರುತ್ತೇ.!

ರಿಪ್ಪನ್ ಪೇಟೆ : “ಹೆಲ್ಮೆಟ್ ಹಾಕೋದು ಬೇಡ, ಪೊಲೀಸ್ ಕಾಣೋದೇ ಇಲ್ಲ… ಪೇಟೆಗೆ ಒಮ್ಮೆ ಸುತ್ತಿ ಬರೋಣ” ಎಂದು ಯೋಚಿಸಿ ಬೈಕ್ ಹತ್ತುವ ಸವಾರರೇ ಈಗ ಸ್ವಲ್ಪ ಜಾಗ್ರತೆ. ನೀವು ಪೊಲೀಸ್ ನೋಡದೇ ಹೋಗಬಹುದು, ಆದರೆ ಪೊಲೀಸ್ ನಿಮ್ಮನ್ನು ನೋಡದೇ ಬಿಡೋದಿಲ್ಲ!

ಇತ್ತೀಚೆಗೆ ರಿಪ್ಪನ್ ಪೇಟೆ ಪಟ್ಟಣದಲ್ಲಿ ಹೊಸ “ಅದೃಶ್ಯ” ಪೊಲೀಸ್ ವ್ಯವಸ್ಥೆ ಜಾರಿಯಾಗಿದೆ. ರಸ್ತೆಯಲ್ಲೇ ತಡೆದು ದಂಡ ಹಾಕೋ ದಿನಗಳು ಸ್ವಲ್ಪ ಕಡಿಮೆಯಾಗುತ್ತಿದ್ದು, ಈಗ ತಪ್ಪು ಮಾಡಿದ್ರೆ ನೇರವಾಗಿ ನಿಮ್ಮ ಮೊಬೈಲ್‌ಗೆ ‘ಟಿನ್’ ಅಂತ ಸಂದೇಶ ಬರುತ್ತಿದೆ. ಅದನ್ನು ತೆರೆಯುತ್ತಿದ್ದಂತೆಯೇ “ಸಂಚಾರ ನಿಯಮ ಉಲ್ಲಂಘನೆ – ದಂಡ ಪಾವತಿಸಿ” ಎಂಬ ಸಿಹಿ ಸುದ್ದಿ ಎದುರಾಗುತ್ತಿದೆ.

ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪಿಎಸ್‌ಐ ರಾಜುರೆಡ್ಡಿ ನೇತೃತ್ವದಲ್ಲಿ ಈ ಹೊಸ ಪ್ರಯೋಗ ನಡೆಯುತ್ತಿದೆ. ಪಟ್ಟಣದ ಪ್ರಮುಖ ರಸ್ತೆಗಳ ಬಳಿ ಪೊಲೀಸ್ ಸಿಬ್ಬಂದಿ ಸುಮ್ಮನೆ ನಿಂತಿರುವಂತೆ ಕಾಣಬಹುದು. ಆದರೆ ಅವರ ಕೈಯಲ್ಲಿರುವ ಮೊಬೈಲ್ ಫೋನ್ ಕ್ಯಾಮೆರಾ ಕೆಲಸ ಮಾಡ್ತಾ ಇರುತ್ತದೆ. ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುತ್ತಾ ಬಂದರೆ, ಮೂವರು ಕೂತು ಸವಾರಿ ಮಾಡ್ತಾ ಬಂದರೆ ಅಥವಾ ಸೀಟ್ ಬೆಲ್ಟ್ ಹಾಕದೆ ಕಾರು ಚಲಾಯಿಸುತ್ತಾ ಬಂದರೆ — ಒಂದು ಕ್ಲಿಕ್ ಸಾಕು!

ಆ ಫೋಟೋ ಜಿಪಿಎಸ್ ಮಾಹಿತಿಯೊಂದಿಗೆ ಠಾಣೆಗೆ ಹೋಗುತ್ತದೆ. ಅಲ್ಲಿಂದ ಶಿವಮೊಗ್ಗದ ಐಟಿಎಂಎಸ್ (ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್ಮೆಂಟ್ ಸಿಸ್ಟಮ್) ವಿಭಾಗಕ್ಕೆ ಕಳುಹಿಸಲಾಗುತ್ತದೆ. ನಂತರ ಅಧಿಕಾರಿಗಳು ಪರಿಶೀಲನೆ ಮಾಡಿ, ತಪ್ಪು ಖಚಿತವಾದರೆ ನಿಮ್ಮ ವಾಹನದ ನೋಂದಣಿ ಸಂಖ್ಯೆಯ ಆಧಾರದಲ್ಲಿ ದಂಡವನ್ನು ಆನ್‌ಲೈನ್ ಮೂಲಕ ನಿಮ್ಮ ಹೆಸರಿಗೆ ಕಳುಹಿಸುತ್ತಾರೆ. ಅಂದರೆ ನೀವು ಮನೆಗೆ ತಲುಪುವಷ್ಟರಲ್ಲಿ ನಿಮ್ಮ ಮೊಬೈಲ್‌ಗೆ ದಂಡದ ಸಂದೇಶ ತಲುಪುವ ಸಾಧ್ಯತೆ ಇದೆ.

ಇದರಿಂದ ರಸ್ತೆಯಲ್ಲಿ ವಾಹನ ನಿಲ್ಲಿಸಿ “ಸಾರ್ ಹೆಲ್ಮೇಟ್ ಮನೆಯಲ್ಲಿದೆ ಬಿಡಿ”, “ಹಿಂಗೇ ಹಾಲು ತಗೋಳೊಕೆ ಬಂದೆ ಸರ್ ” , ಎಂಎಲ್ ಎ ಗೆ ಪೋನ್ ಮಾಡ್ಲಾ ಸರ್ ,  “ಈ ಸಲ ಕ್ಷಮಿಸಿ”, “ಆ ರಾಜಕೀಯ ವ್ಯಕ್ತಿ ನಮ್ಮ ಸಂಭಂಧಿ ಸರ್ ” ಎಂಬ ಚರ್ಚೆಗಳಿಗೆ ಅವಕಾಶವೇ ಇಲ್ಲ .. ಪೊಲೀಸ್ ಸಿಬ್ಬಂದಿಗೂ ಕಿರಿಕಿರಿ ಕಡಿಮೆ, ತಪ್ಪು ಮಾಡಿದವರಿಗೆ ಶಿಕ್ಷೆ ಖಚಿತ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.

ಪೊಲೀಸರ ಪ್ರಕಾರ, ರಿಪ್ಪನ್ ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 2026ರ ಮೊದಲ ಮೂರು ತಿಂಗಳಲ್ಲಿ 8 ರಸ್ತೆ ಅಪಘಾತಗಳು ಸಂಭವಿಸಿ, 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಇಂತಹ ದುರ್ಘಟನೆಗಳಲ್ಲಿ ಬಹುಪಾಲು ರಸ್ತೆ ನಿಯಮಗಳ ಪಾಲನೇ ಮಾಡದೇ ನಿರ್ಲಕ್ಷ್ಯತನದಿಣ್ದ ವಾಹನ ಚಾಲನೆ ಮಾಡಿರುವುದೇ ಕಾರಣವಾಗಿರುವುದು ಗಮನಿಸಲಾಗಿದೆ.

ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವುದು, ದ್ವಿಚಕ್ರ ವಾಹನದಲ್ಲಿ ಮೂವರು ಪ್ರಯಾಣಿಸುವುದು, ಸೀಟ್ ಬೆಲ್ಟ್ ಹಾಕದೆ ಕಾರು ಚಲಾಯಿಸುವುದು, ನಿಷಿದ್ಧ ಸ್ಥಳಗಳಲ್ಲಿ ವಾಹನ ನಿಲ್ಲಿಸುವುದು ಹಾಗೂ ಸರಕು ವಾಹನಗಳಲ್ಲಿ ಜನರನ್ನು ಸಾಗಿಸುವಂತಹ ತಪ್ಪುಗಳಿಗೆ ಕನಿಷ್ಠ 500 ರೂ.ವರೆಗೆ ದಂಡ ವಿಧಿಸಲಾಗುತ್ತಿದೆ.

ಹೀಗಾಗಿ ಪೇಟೆಗೆ ಬರೋ ಮೊದಲು ಬೈಕ್ ಸ್ಟಾರ್ಟ್ ಮಾಡುವ ಮೊದಲು ಹೆಲ್ಮೆಟ್ ಹಾಕಿಕೊಳ್ಳಿ. ಇಲ್ಲದಿದ್ದರೆ ಪೊಲೀಸ್ ಕಾಣದಿದ್ದರೂ, ಮೊಬೈಲ್‌ನಲ್ಲಿ “ಟಿನ್” ಅಂತ ದಂಡ ಬರುವುದನ್ನು ನೋಡಿ ಅಚ್ಚರಿ ಪಡಬೇಕಾಗಬಹುದು

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.