ರಿಪ್ಪನ್ ಪೇಟೆ : ಅರಸಾಳು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆ ಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ ಹಾಗೂ ವಿವಿಧ ಸಂಘಟನೆಗಳಿಂದ ಸಂಘಟನೆಗಳ ಸಹಕಾರದಿಂದ ಅರಸಾಳು ರೈಲ್ವೆ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸುತ್ತಿರುವುದಾಗಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ. ಪಿ ರಾಮಚಂದ್ರ ಹೇಳಿದರು.
ರಿಪ್ಪನ್ ಪೇಟೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಅರಸಾಳು ರೈಲ್ವೆ ನಿಲ್ದಾಣವನ್ನು ಉನ್ನತೀಕರಿಸಿ ಶಿವಮೊಗ್ಗದಿಂದ ತಾಳಗುಪ್ಪ ಮಾರ್ಗದಲ್ಲಿ ಪ್ರತಿನಿತ್ಯ ಓಡಾಡುವ ಎಲ್ಲಾ ರೈಲುಗಳನ್ನು ಅರಸಾಳು ರೈಲು ನಿಲ್ದಾಣದಲ್ಲಿ ನಿಲುಗಡೆ ಗೊಳ್ಳಲಿ ಎಂದು ಹೊಸನಗರ ತಾಲೂಕಿನ ಎಲ್ಲಾ ನಾಗರಿಕರು ಲೋಕಸಭಾ ಸದಸ್ಯರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಶಿವಮೊಗ್ಗ ಲೋಕಸಭಾ ಸದಸ್ಯ ಬಿ.ವೈ ರಾಘವೇಂದ್ರರವರ ಇಚ್ಛಾಶಕ್ತಿಯಿಂದ ಅರಸಾಳು ಗ್ರಾಮದಲ್ಲಿ ರೈಲ್ವೆ ನಿಲ್ದಾಣವನ್ನು ನೂತನವಾಗಿ ಪುನರ್ ನಿರ್ಮಾಣ ಮಾಡಿ. ಮಾಲ್ಗುಡಿ ಮ್ಯೂಸಿಯಂ ಸ್ಥಾಪಿಸಿ ಅರಸಾಳು ರೈಲ್ವೆ ನಿಲ್ದಾಣವನ್ನು ಪ್ರವಾಸಿ ಕೇಂದ್ರವನ್ನಾಗಿ ನಿರ್ಮಾಣ ಮಾಡಿದ್ದಾರೆ.
ಮಾಲ್ಗುಡಿ ಮ್ಯೂಸಿಯಂ ನೋಡಲು ಪ್ರತಿನಿತ್ಯ ರಾಜ್ಯದ ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ಜನರು ಬರುತ್ತಾರೆ. ಅರಸಾಳು ರೈಲ್ವೆ ನಿಲ್ದಾಣದ ಮೂಲಕ ಪ್ರತಿ ದಿನ ಬೆಂಗಳೂರು ಮೈಸೂರು ನಗರಗಳು ಸೇರಿದಂತೆ ಸೇರಿದಂತೆ ವಿವಿಧೆಡೆಗೆ ನಾಲ್ಕಕ್ಕೂ ಅಧಿಕ ರೈಲುಗಳು ಸಂಚರಿಸುತ್ತಿವೆ ಆದರೆ ಇಲ್ಲಿ ಅಧಿಕಾರಿಗಳ ಮತ್ತು ಚುನಾಯಿತ ಪ್ರತಿನಿಧಿಗಳ ನಿರ್ಲಕ್ಷದಿಂದ ಯಾವುದೇ ರೈಲುನಿಲುಗಡೆ ಆಗುತ್ತಿಲ್ಲ.
ಹೊಸನಗರ ತಾಲೂಕಿನಲ್ಲಿರುವ ಏಕೈಕ ರೈಲು ನಿಲ್ದಾಣ ವಾಗಿರುವ 87 ವರ್ಷಗಳ ಇತಿಹಾಸವಿರುವ ಈ ರೈಲ್ವೆ ನಿಲ್ದಾಣದಲ್ಲಿ ಈಗಾಗಲೇ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಎಲ್ಲಾ ರೀತಿಯ ರೈಲುಗಳು ನಿಲುಗಡೆ ಗೊಳ್ಳುವಂತೆ ಪ್ಲಾಟ್ ಫಾರಂ ಸಹ ನಿರ್ಮಾಣ ಮಾಡಲಾಗಿದೆ. ಆದರೆ ಯಾವುದೇ ರೈಲುಗಳು ನಿಲುಗಡೆಯಾಗುತಿಲ್ಲ.
ಈ ಬಗ್ಗೆ ಅನೇಕ ಬಾರಿ ಹೊಸನಗರ ತಾಲೂಕಿನ ಜನತೆ ಸಂಸದ ಬಿವೈ ರಾಘವೇಂದ್ರ ಸಾಗರ ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕ ಹೆಚ್.ಹಾಲಪ್ಪ ಹಾಗೂ ರಾಜ್ಯ ಗೃಹಮಂತ್ರಿ ಆರಗ ಜ್ಞಾನೇಂದ್ರ ರವರಿಗೆ ಹಲವಾರು ಬಾರಿ ಮನವಿ ನೀಡಿದರೂ ಸಹ ಯಾರು ರೈಲ್ವೆ ನಿಲುಗಡೆ ಬಗ್ಗೆ ಗಮನಹರಿಸುತ್ತಿಲ್ಲ.
ಅರಸಾಳು ರೈಲ್ವೆ ನಿಲ್ದಾಣದಲ್ಲಿ ರೈಲು ನಿಲುಗಡೆಗೊಂಡರೆ ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನ, ಶ್ರೀರಾಮಚಂದ್ರಾಪುರಮಠ,ಕವಲೇದುರ್ಗದ ಭಕ್ತಾದಿಗಳಿಗೆ,ಪ್ರವಾಸಿಗರ ರಮಣೀಯ ಪ್ರವಾಸಿ ತಾಣವಾದ ಕೊಡಚಾದ್ರಿ ಬೆಟ್ಟ, ಜೈನರ ಪವಿತ್ರ ಯಾತ್ರಾ ಸ್ಥಳವಾದ ಹೊಂಬುಜಕ್ಕೆ ಉತ್ತರಭಾರತದಿಂದ ಬರುವ ಭಕ್ತಾದಿಗಳಿಗೆ ಅನುಕೂಲವಾಗಲಿದೆ.
ಹಾಗೆಯೇ ಪ್ರತಿನಿತ್ಯ ಕುಂದಾಪುರ ಸಿದ್ದಾಪುರ ಬೈಂದೂರು,ನಗರ, ಹೊಸನಗರ, ತೀರ್ಥಹಳ್ಳಿ, ಆರಗ ಗುಡ್ಡೆಕೊಪ್ಪ,ಕೋಣಂದೂರು. ಹುಂಚ. ಗರ್ತಿಕೆರೆ ಹೆದ್ದಾರಿಪುರ,ಮುಗುಡ್ತಿ. ರಿಪ್ಪನ್ ಪೇಟೆ ಸೇರಿದಂತೆ ವಿವಿಧೆಡೆಗಳಿಂದ ದಿನನಿತ್ಯ ಬೆಂಗಳೂರು ಹಾಗೂ ಮೈಸೂರು ನಗರಕ್ಕೆ ಸಂಚರಿಸುವ ಸಾವಿರಾರು ಪ್ರಯಾಣಿಕರಿಗೆ. ವಾಣಿಜ್ಯ ಉದ್ಯಮಿಗಳಿಗೆ ಕೂಲಿಕಾರ್ಮಿಕರಿಗೆ. ವಿದ್ಯಾರ್ಥಿಗಳಿಗೆ,ರೈತ ನಾಗರಿಕರುಗಳಿಗೆ ಅನುಕೂಲವಾಗಲಿದೆ. ಆದ್ದರಿಂದ ಅರಸಾಳು ರೈಲ್ವೆ ನಿಲ್ದಾಣದ ಮೂಲಕ ಸಂಚರಿಸುವ ಪ್ರತಿಯೊಂದು ರೈಲುಗಳು ಅರಸಾಳು ರೈಲ್ವೆ ನಿಲ್ದಾಣದಲ್ಲಿ ನಿಲುಗಡೆ ಗೊಳಿಸುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಿಂದ ಸಾರ್ವಜನಿಕರೊಂದಿಗೆ ಕಾಂಗ್ರೆಸ್ ಪಕ್ಷದ ರಾಜ್ಯ ಹಾಗೂ ಜಿಲ್ಲಾ ಮುಖಂಡರುಗಳ ಸಹಕಾರದೊಂದಿಗೆ ಅರಸಾಳು ರೈಲ್ವೆ ನಿಲ್ದಾಣದ ಎದುರು ಬೃಹತ್ ಪ್ರತಿಭಟನೆಯನ್ನು ಶೀಘ್ರದಲ್ಲಿಯೇ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.