Ripponpete | ಹೆಚ್ಚುತ್ತಿರುವ ಅಪಘಾತಗಳನ್ನು ತಡೆಗಟ್ಟಲು ಮುಂದಾದ ಪೊಲೀಸರು
ಪೊಲೀಸ್ ಇಲಾಖೆ ಜನರ ರಕ್ಷಣೆ ಹಾಗೂ ಸೇವೆಗಾಗಿ ಹಗಲಿರುಳು ಶ್ರಮಿಸುತ್ತಿದೆ.ಜನ ಹಾಗೂ ವಾಹನ ಸವಾರರ ಸುರಕ್ಷತೆಯ ದೃಷ್ಟಿಯಿಂದ ವಾಹನ ಸವಾರರಿಗೆ ಅನೇಕ ರೀತಿಯ ಅಭಿಯಾನ ಹಾಗೂ ಅರಿವು ಕಾರ್ಯಕ್ರಮಗಳನ್ನು ಪೊಲೀಸ್ ಇಲಾಖೆ ಮೂಡಿಸುತ್ತಿದೆ.ಇಂತಹ ಹಲವು ಜಾಗೃತಿ ಕಾರ್ಯಕ್ರಮಗಳನ್ನು ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಹೀಗಾಗಿ, ಇದೀಗ ಪೊಲೀಸರು ಮತ್ತೊಂದು ವಿನೂತನ ಜಾಗೃತಿ ಕಾರ್ಯಕ್ಕೆ ಕೈ ಹಾಕಿದ್ದಾರೆ.
ರಿಪ್ಪನ್ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸೂಡೂರು ತಿರುವು ಅಪಘಾತಗಳಿಗೆ ಹೆಸರು ವಾಸಿ.ಈ ಸ್ಥಳದಲ್ಲಿ ಒಂದಿಲ್ಲೊಂದು ಅಪಘಾತ ನಡೆಯುತ್ತಲೇ ಇರುತ್ತವೆ.ಅದೆಷ್ಟೋ ಕುಟುಂಬಗಳು ಅನಾಥವಾಗಿವೆ.ಈ ದಿಸೆಯಲ್ಲಿ ಅಪಘಾತ ತಡೆಯಲು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನ್ ಪೇಟೆ ಪೊಲೀಸ್ ಇಲಾಖೆ ವಿಶಿಷ್ಟ ರೀತಿಯಲ್ಲಿ ಕಾರ್ಯೋನ್ಮುಖರಾಗಿದ್ದಾರೆ.
ರಿಪ್ಪನ್ ಪೇಟೆಯ ಪಿಎಸ್ಐ ಪ್ರವೀಣ್ ಎಸ್ ಪಿ ಮತ್ತು ಸಿಬ್ಬಂದಿಗಳ ಭಾನುವಾರ ಬೆಳಿಗ್ಗೆಯಿಂದ ಸೂಡೂರಿನ ಅಪಘಾತ ವಲಯಗಳಲ್ಲಿ ರಿಫ್ಲೆಕ್ಟರ್ ರೇಡಿಯಂ, ಸೂಚನಾ ಫಲಕವನ್ನು, ಅಳವಡಿಸುವುದರ ಮೂಲಕ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.
ರಿಪ್ಪನ್ಪೇಟೆ ಪಿಎಸ್ಐ ಪ್ರವೀಣ್ ಎಸ್ ಪಿ ಮತ್ತು ಅವರ ಸಿಬ್ಬಂದಿ ವರ್ಗ ಮಾಡುತ್ತಿರುವ ಈ ಸಮಾಜಮುಖಿ ಕಾರ್ಯವು ಸಾರ್ವಜನಿಕ ವಲಯದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ.
ಈ ಸಂದರ್ಭದಲ್ಲಿ ರಿಪ್ಪನ್ಪೇಟೆ ಪೊಲೀಸ್ ಠಾಣೆಯ ಎ ಎಸೈ ಮಂಜಪ್ಪ ಮತ್ತು ಗಿರೀಶ್ , ರಿಪ್ಪನ್ಪೇಟೆ ಗ್ರಾಪಂ ಪಿಡಿಓ ಮಧುಸೂಧನ್ ಸಿಬ್ಬಂದಿಗಳಾದ ಉಮೇಶ್, ಸಂತೋಷ್ ಕೊರವರ ,ಚೆನ್ನಪ್ಪ , ಮಧುಸೂಧನ್ , ಸೋಮಶೇಖರ್ , ಅರುಣ್ , ಮಂಜುನಾಥ್ ಸೇರಿದಂತೆ ಇನ್ನಿತರರಿದ್ದರು.