ಅಂಬೇಡ್ಕರ್ ವಿಚಾರಧಾರೆಗಳು ಇಂದಿಗೂ ಆದರ್ಶ – ಸೋಮಣ್ಣ ಬೇವಿನಮರದ | ಬಂಕಾಪುರದಲ್ಲಿ ಅಂಬೇಡ್ಕರ್ ಜಯಂತಿ
ಬಂಕಾಪುರ : ಎಲ್ಲ ಧರ್ಮ, ಜಾತಿಗಳಿಗೆ ಸಮಾನತೆ, ಸಮಾನ ಅವಕಾಶ ನೀಡಿದ ಸಂವಿಧಾನ ಕರ್ತೃ ಭಾರತರತ್ನ ಡಾ| ಬಿ.ಆರ್.ಅಂಬೇಡ್ಕರ್ ಜಯಂತಿ ಕಾರ್ಯಕ್ರಮಗಳು ಕಾಟಾಚಾರಕ್ಕೆ ನಡೆಯದೇ ಅವರ ಬದುಕು, ಆದರ್ಶ, ತತ್ವಗಳ ಗಂಭೀರ ಚಿಂತನೆಗಳ ಚರ್ಚೆಗೆ ವೇದಿಕೆಯಾಗಬೇಕು ಎಂದು ಕರ್ನಾಟಕ ಗಡಿನಾಡು ನಿಗಮದ ಅಧ್ಯಕ್ಷರಾದ ಸೋಮಣ್ಣ ಬೇವಿನಮರದ ರವರು ಹೇಳಿದರು.
ಬಂಕಾಪುರ ಪಟ್ಟಣದಲ್ಲಿ ರಾಜ್ಯ ದಲಿತ ಸಂಘರ್ಷ ಸಮಿತಿ ವತಿಯಿಂದ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ಬಸವರಾಜ್ ಕಟ್ಟಿಮನಿ ನಿವಾಸದಲ್ಲಿ ಆಯೋಜಿಸಿದ್ದ ಡಾ| ಬಾಬಾಸಾಹೇಬ ಅಂಬೇಡ್ಕರ್ 133ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ದೀಪ ಬೆಳಗಿಸಿ ಉದ್ಘಾಟಿಸಿ ನಂತರ ಮಾತನಾಡಿದ ಅವರು ಬಡತನದಲ್ಲಿ ಜನಿಸಿ ಹಲವು ನೋವುಗಳ ಮಧ್ಯೆ ತಮ್ಮ ವಿದ್ಯಾಬ್ಯಾಸ ಪಡೆದ ಅಂಬೇಡ್ಕರ್ ಜಗತ್ತಿನ ಹಲವು ದೇಶಗಳ ಸಂವಿಧಾನ ಅಧ್ಯಯನ ಮಾಡಿ ಅಮೆರಿಕ, ಇಂಗ್ಲೆಂಡ್, ಐರ್ಲೆಂಡ್ ದೇಶದ ಪ್ರಮುಖ ಅಂಶ ತೆಗೆದುಕೊಂಡು ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುವಂತ ಸಂವಿಧಾನವನ್ನು ನಮ್ಮ ದೇಶಕ್ಕೆ ಸಮರ್ಪಣೆ ಮಾಡಿದ ಕೀರ್ತಿ ಇದೆ ಎಂದರು.
ಅಂಬೇಡ್ಕರ್ ಈ ಹಿಂದೆ ದಲಿತರ ಕೇರಿಯಲ್ಲಿ ದೀಪವನ್ನು ಹಚ್ಚಿದ್ದೇನೆ ಅದನ್ನು ಉಳಿಸಿಕೊಂಡು ಹೋಗಿ ಅಂದಿದ್ದರು ಆ ದೀಪವನ್ನು ಬಸವರಾಜ್ ಕಟ್ಟಿಮನಿ ಮೂಲಕ ನಾವು ಕಂಡುಕೊಳ್ಳುತಿದ್ದೇವೆ ಎಂದರು.
ಕಾಂಗ್ರೆಸ್ ಮುಖಂಡರಾದ ಶಿಗ್ಗಾವ್ ಸವಣೂರು ಕ್ಷೇತ್ರದ ಯಾಸಿರ್ ಖಾನ್ ಪಠಾಣ್ ಮಾತನಾಡಿ ವ್ಯವಸ್ಥಿತ ಸಂವಿಧಾನವನ್ನು ದೇಶಕ್ಕೆ ನೀಡಿದ ಮಹಾನ್ ನಾಯಕ ಅಂಬೇಡ್ಕರ್. ಇಂದು ಸಮಾಜದಲ್ಲಿ ಅಂಬೇಡ್ಕರ್ ವೇಷಧಾರಿಗಳು ಕಾಣಸಿಗುತ್ತಾರೆಯೇ ಹೊರತು, ಅವರಂತೆ ನಡೆದುಕೊಳ್ಳುವವರು ಕಡಿಮೆ. ದೇಶ, ಸಮಾಜ ಮತ್ತು ತನ್ನವರಿಗಾಗಿ ಬಾಬಾಸಾಹೇಬರು ಬಾಳಿದಂತೆ ಬಾಳು ನಡೆಸ ಬೇಕಾದವರು ಬೇಕಾಗಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಡಾ. ಬಿ ಆರ್ ಅಂಬೇಡ್ಕರ್ ಭಾವಚಿತ್ರದ ಮುಂದೆ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ನಂತರ ಕೇಕ್ ಅನ್ನು ಕತ್ತರಿಸಿ ಎಲ್ಲರಿಗೂ ಸಿಹಿ ಹಂಚಲಾಯಿತು.
ಕಾರ್ಯಕ್ರಮದಲ್ಲಿ ತಮಿದ್ ಕಾಜಿ ಸ್ವಾಗತಿಸಿದರು. ಜಿಲ್ಲಾ ದಲಿತ ಸಂಘರ್ಷ ಸಮಿತಿ ಕಾರ್ಯಾಧ್ಯಕ್ಷರಾದ ಬಸವರಾಜ್ ಕಟ್ಟಿಮನಿ ವಂದನಾರ್ಪಣೆಯನ್ನು ನೆರವೇರಿಸಿದರು
ಕಾರ್ಯಕ್ರಮದಲ್ಲಿ ಬಂಕಾಪುರದ ಪುರಸಭೆ ಸದಸ್ಯರು ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.