Ripponpete | ಬೈಕ್ ಕಳ್ಳತನ : ಎರಡು ಗಂಟೆಯೊಳಗೆ ಮಾಲು ಸಮೇತ ಇಬ್ಬರು ಆರೋಪಿಗಳ ಬಂಧನ
ಕಳ್ಳತನವಾದ ಬೈಕ್ನ್ನು ಕೇವಲ 2 ಗಂಟೆಯೊಳಗೆ ಪತ್ತೆ ಮಾಡಿ ಮಾಲು ಸಮೇತ ಆರೋಪಿಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ರಿಪ್ಪನ್ಪೇಟೆ ಠಾಣೆ ಪಿಎಸ್ಐ ನಿಂಗರಾಜ್ ಕೆ ವೈ ನೇತ್ರತ್ವದಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶಿವಮೊಗ್ಗದ ತೊಪ್ಪಿನಘಟ್ಟದ ಡ್ರೈವರ್ ಕೆಲಸ ಮಾಡುವ 23 ವರ್ಷದ ಸತೀಶ್ ಎಲ್ ಎಸ್ ಹಾಗೂ ಅಪ್ರಾಪ್ತ (ಕಾನೂನು ಸಂಘರ್ಷಕ್ಕೊಳಗಾದ ಬಾಲಕ) ಸೇರಿದಂತೆ ಇಬ್ಬರು ಬಂಧಿತ ಆರೋಪಿಗಳಾಗಿದ್ದಾರೆ.
ಶನಿವಾರ ರಾತ್ರಿ ದೂನ ಗ್ರಾಮದ ರೇಣುಕಪ್ಪ ಎಂಬುವವರು ರಸ್ತೆಯ ಪಕ್ಕದಲ್ಲಿರುವ ಅವರ ತೋಟಕ್ಕೆ ನೀರು ಹಾಯಿಸಲು ತಮ್ಮ ಮೋಟಾರ್ ಬೈಕಿನಲ್ಲಿ ರಾತ್ರಿ 9-00 ಗಂಟೆಗೆ ಹೋಗಿ ಬೈಕನ್ನು ರಸ್ತೆಯ ಬದಿಯಲ್ಲಿ ನಿಲ್ಲಿಸಿ ನಂತರ ತೋಟದ ಒಳಗಡೆ ಹೋಗಿ ನೀರು ಮೋಟಾರ್ ಆನ್ ಮಾಡಿ ನಂತರ ಕೂಡಲೇ ರಸ್ತೆಗೆ ಬಂದಿದ್ದು ಅಲ್ಲಿ ನಿಲ್ಲಿಸಿ ಹೋಗಿದ್ದ ಅವರ ಕೆಎ-15 ಎಸ್ 8452 ನೇ ನಂಬರಿನ ಹೊಂಡ ಡ್ರೀಮ್ ಯುಗ ಮೋಟಾರ್ ಬೈಕ್ ಇರಲಿಲ್ಲ ತೆಗೆದುಕೊಂಡು ಹೋಗಿರಬಹುದು ಎಂದು ರಾತ್ರಿ ಎಲ್ಲ ಕಡೆ ಹುಡುಕಾಡಲಾಗಿ ಎಲ್ಲಿಯೂ ಪತ್ತೆಯಾಗಿರುವುದಿಲ್ಲ ಈ ಹಿನ್ನಲೆಯಲ್ಲಿ ಇಂದು ಬೆಳಿಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.
ದೂರು ದಾಖಲಾಗುತಿದ್ದಂತೆ ಕಾರ್ಯ ಪ್ರವೃತ್ತರಾದ ಪಟ್ಟಣದ ಪಿಎಸ್ಐ ನಿಂಗರಾಜ್ ಕೆ ವೈ ಹಾಗೂ ಸಿಬ್ಬಂದಿಗಳ ತಂಡ ಅಪ್ರಾಪ್ತ ಯುವಕ ಸೇರಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಿ 80 ಸಾವಿರ ರೂ ಮೌಲ್ಯದ ಕೃತ್ಯಕ್ಕೆ ಬಳಸಿದ ಬೈಕ್ ಹಾಗೂ ಕಳ್ಳತನವಾಗಿದ್ದ ಬೈಕ್ ನ್ನು ವಶಪಡಿಸಿಕೊಂಡಿದ್ದಾರೆ.
ಆಗಿದ್ದು ಆಕ್ಸಿಡೆಂಟ್ – ಸಿಕ್ಕಿದ್ದು ಆರೋಪಿ
ಶನಿವಾರ ರಾತ್ರಿ ಪಟ್ಟಣದ ಪೊಲೀಸರು ಗಸ್ತು ತಿರುಗುತಿದ್ದಾಗ ದೂನ ಸಮೀಪದಲ್ಲಿ ಬೈಕ್ ಅಪಘಾತಕ್ಕೀಡಾಗಿ ಯುವಕನೊಬ್ಬನ ಕಾಲಿಗೆ ತೀವ್ರ ಪೆಟ್ಟಾಗಿತ್ತು ಈ ಹಿನ್ನಲೆಯಲ್ಲಿ ಆ ಯುವಕನನ್ನು ರಿಪ್ಪನ್ಪೇಟೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆತಂದು ಸೂಕ್ತ ಚಿಕಿತ್ಸೆ ನೀಡಲಾಗಿತ್ತು.
ಬೆಳಿಗ್ಗೆ 9.30 ಸಮಯದಲ್ಲಿ ಬೈಕ್ ಕಳ್ಳತನದ ದೂರು ದಾಖಲಾಗುತ್ತಿದ್ದಂತೆ ಬೈಕ್ ಅಪಘಾತದಲ್ಲಿ ಗಾಯಗೊಂಡಿದ್ದ ಯುವಕನನ್ನು ಪೊಲೀಸ್ ಶೈಲಿಯಲ್ಲಿ ವಿಚಾರಿಸಿದಾಗ ಆರೋಪಿಯ ಬಗ್ಗೆ ಬಾಯ್ಬಿಟ್ಟಿದ್ದಾನೆ ಈ ಮಾಹಿತಿಯನ್ನಾಧರಿಸಿ ಪ್ರಮುಖ ಆರೋಪಿಯನ್ನು ಕೇವಲ 2 ಗಂಟೆಯೊಳಗೆ ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಶಿವಕುಮಾರ್ ನಾಯ್ಕ್ , ಪರಮೇಶ್ವರ್ , ಸಂತೋಷ್ ಕೊರವರ ,ನವೀನ್ ಹಾಗೂ ಮಧುಸೂಧನ್ ಇದ್ದರು.