ತನ್ನನ್ನು ಪ್ರೀತಿಸು ಎಂದು ಬೆನ್ನು ಬಿದ್ದಿದ್ದ ಯುವಕನ ಕಾಟಕ್ಕೆ ಬೇಸತ್ತು ಅಪ್ರಾಪ್ತ ಬಾಲಕಿ ಆತ್ಮಹತ್ಯೆಗೆ (Suicide) ಶರಣಾದ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಗೊಂದಿಚಟ್ನಿ ಹಳ್ಳಿಯಲ್ಲಿ ನಡೆದಿದೆ.
ವರ್ಷಿಣಿ (14) ಆತ್ಮಹತ್ಯೆಗೆ ಶರಣಾದ ಬಾಲಕಿ.
ತ್ಯಾಗರಾಜ್ ಎಂಬ ಯುವಕ ಬಾಲಕಿಗೆ ತನ್ನನ್ನು ಪ್ರೀತಿಸು ಎಂದು ಬೆನ್ನುಬಿದ್ದಿದ್ದ. ಆದರೆ ಬಾಲಕಿ ಆತನ ಪ್ರೀತಿಯನ್ನು ನಿರಾಕರಿಸಿದ್ದಾಳೆ. ಸುಮಾರು ದಿನಗಳಿಂದ ತನ್ನನ್ನು ಪ್ರೀತಿಸುವಂತೆ ತ್ಯಾಗರಾಜ್ ಬಾಲಕಿಗೆ ಟಾರ್ಚರ್ ನೀಡಿದ್ದು, ಕಳೆದ ಎರಡು ತಿಂಗಳ ಹಿಂದೆ ಬಾಲಕಿ ಕುಟುಂಬಸ್ಥರು ಯುವಕನಿಗೆ ವಾರ್ನಿಂಗ್ ಕೂಡಾ ಮಾಡಿದ್ದರು ಎನ್ನಲಾಗಿದೆ.
ಇನ್ನು ಮುಂದೆ ಬಾಲಕಿಗೆ ಕಾಟ ಕೊಡುವುದಿಲ್ಲ ಎಂದು ತ್ಯಾಗರಾಜ್ ಹೇಳಿದ್ದರೂ ತನ್ನ ಚಾಳಿಯನ್ನು ಮುಂದುವರಿಸಿದ್ದಾನೆ. ಇದೀಗ ಬಾಲಕಿ ಯುವಕನ ಕಾಟ ತಾಳಲಾರದೆ ಶನಿವಾರ ರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಯುವಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಕುಟುಂಬಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಕುರಿತು ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.