ರಿಪ್ಪನ್ಪೇಟೆ : ಅಕ್ರಮ ಗೋ ಸಾಗಾಟ – ಮೂವರು ಆರೋಪಿಗಳ ಬಂಧನ,ಜಾನುವಾರು ರಕ್ಷಣೆ
ರಿಪ್ಪನ್ ಪೇಟೆ : ಇಲ್ಲಿನ ಹೆದ್ದಾರಿಪುರ ಗ್ರಾಪಂ ವ್ಯಾಪ್ತಿಯ ತಳಲೆ ಗ್ರಾಮದಲ್ಲಿ ಅಕ್ರಮವಾಗಿ ಗೋವು ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ವಾಹನ ಸಮೇತ ವಶಕ್ಕೆ ಪಡೆದಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ತಳಲೆ ವೃತ್ತದಲ್ಲಿ ಮೂಗೂಡ್ತಿ ಅರಣ್ಯ ವಲಯದ ಸಿಬ್ಬಂದಿಗಳು ತಡರಾತ್ರಿ ಗಸ್ತಿನಲ್ಲಿರುವಾಗ ಕಳಸೆ-ಬೆಳ್ಳೂರು ಮಾರ್ಗದಿಂದ ರಿಪ್ಪನ್ ಪೇಟೆಯತ್ತ ತೆರಳುತಿದ್ದ ಗೂಡ್ಸ್ ವಾಹನವನ್ನು ತಡೆದು ತಪಾಸಣೆ ನಡೆಸಿದಾಗ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದೆ.ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗಳು ರಿಪ್ಪನ್ಪೇಟೆ ಪೊಲೀಸ್ ಇಲಾಖೆಗೆ ಮಾಹಿತಿ ತಿಳಿಸಿದ್ದಾರೆ.
ವಿಷಯ ತಿಳಿಯುತಿದ್ದಂತೆ ಸ್ಥಳಕ್ಕೆ ತೆರಳಿದ ಪಿಎಸ್ಐ ಪ್ರವೀಣ್ ಎಸ್ ಪಿ ನೇತ್ರತ್ವದ ತಂಡವು ಐದು ಜಾನುವಾರುಗಳು ಹಾಗೂ ಮೂವರು ಆರೋಪಿಗಳನ್ನು ಮತ್ತು ಗೂಡ್ಸ್ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಕಾರ್ಯಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಉಮೇಶ್ ಕೆ ಎಚ್, ಸಂತೋಷ್,ಪರಮೇಶ್ವರಪ್ಪ, ಶಿವಕುಮಾರ್ ಪಾಲ್ಗೊಂಡಿದ್ದರು.
 
                         
                         
                         
                         
                         
                         
                         
                         
                         
                        


