SORABA : ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ದೇವಸ್ಥಾನದಲ್ಲಿ ನಡೆದ ಕಳ್ಳತನ ಯತ್ನ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ದೇವಸ್ಥಾನದ ಆಡಳಿತ ಮಂಡಳಿ ಅಧ್ಯಕ್ಷರ ಹೆಸರಿಗೆ ಕಳಂಕ ತರುವ ಉದ್ದೇಶದಿಂದ ಆರೋಪಿಗಳು ಕೃತ್ಯ ಎಸಗಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಆ.3ರಂದು ಚಂದ್ರಗುತ್ತಿ ಶ್ರೀ ರೇಣುಕಾಂಬ ದೇವಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಲಾಗಿತ್ತು. ಹುಂಡಿ ಒಡೆಯುವ ಪ್ರಯತ್ನವಾಗಿತ್ತು. ದೇವರ ಬೆಳ್ಳಿಯ ಮುಖವಾಡವನ್ನು ಕಳಚಲಾಗಿತ್ತು. ಇದು ಭಕ್ತರ ಆಕ್ರೋಶಕ್ಕೆ ಕಾರಣವಾಗಿತ್ತು. ಈ ಹಿನ್ನೆಲೆ ಆರೋಪಿಗಲ ಪತ್ತೆಗೆ ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್ ಅವರು ವಿಶೇಷ ತಂಡ ರಚಿಸಿದ್ದರು. ತನಿಖೆ ನಡೆಸಿದ ತಂಡ, ಬನವಾಸಿ ಬಸ್ ನಿಲ್ದಾಣದ ಬಳಿ ಮೂವರು ಆರೋಪಿಗಳನ್ನು ಬಂಧಿಸಿದೆ. ಚಂದ್ರಗುತ್ತಿ ಗ್ರಾಮದ ಭೋವಿ ಕಾಲೋನಿಯ ಪ್ರವೀಣ್ (33), ದೇವರಾಜ (50), ಭೀಮಪ್ಪ (35) ಬಂಧಿತರು.
ಚಂದ್ರಗುತ್ತಿಯ ಭೋವಿ ಕಾಲೋನಿಯ ದೇವರಾಜ, ದೇವಸ್ಥಾನದ ಕಮಿಟಿಗೆ ಸೇರಲು ಅರ್ಜಿ ಸಲ್ಲಿಸಿದ್ದ. ಅದು ತಿರಸ್ಕೃತಗೊಂಡಿತ್ತು. ದೇವಸ್ಥಾನ ಕಮಿಟಿಯ ಅಧ್ಯಕ್ಷರೆ ಇದಕ್ಕೆ ಕಾರಣ ಎಂದು ಆರೋಪಿಗಳು ಭಾವಿಸಿದ್ದರು. ಹಾಗಾಗಿ ದೇವಸ್ಥಾನದಲ್ಲಿ ಕಳ್ಳತನಕ್ಕೆ ಯತ್ನಿಸಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವಂತೆ ಮಾಡಿದರೆ ಅಧ್ಯಕ್ಷರ ಹೆಸರಿಗೆ ಕಳಂಕ ಬರಲಿದೆ. ಅವರನ್ನು ಕಮಿಟಿಯಿಂದ ತೆಗೆಸಬಹುದು ಎಂದು ಭಾವಿಸಿ ಕಳ್ಳತನಕ್ಕೆ ಯತ್ನಿಸಿದ್ದಾಗಿ ಆರೋಪಿಗಳು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾರೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ, ಶಿಕಾರಿಪುರ ಉಪ ವಿಭಾಗದ ಡಿವೈಎಸ್‌ಪಿ ಶಿವಾನಂದ ಮದರಖಂಡಿ, ಸೊರಬ ಠಾಣೆ ಇನ್ಸ್‌ಪೆಕ್ಟರ್ ರಾಜಶೇಖರ್ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಸೊರಬ ಠಾಣೆ ಸಬ್ ಇನ್ಸ್‌ಪೆಕ್ಟರ್‌ಗಳಾದ ನಾಗರಾಜ್ ಮತ್ತು ಮಾಳಪ್ಪ ವೈ.ಚಿಪ್ಪಲಕಟ್ಟಿ, ಸಿಬ್ಬಂದಿ ಪಿ.ಸಿ.ರಾಘವೇಂದ್ರ, ವಿನಯ್, ಸಂದೀಪ್ ಅವರಿದ್ದ ತಂಡ ಆರೋಪಿಗಳನ್ನು ಬಂಧಿಸಿದೆ.