w
Headlines
Home » ರಿಪ್ಪನ್‌ಪೇಟೆಗೆ ಹೆಮ್ಮೆಯ ಕ್ಷಣ: ರಾಜ್ಯ ಕಬ್ಬಡಿ ತಂಡದಲ್ಲಿ ಇಬ್ಬರು ಪ್ರತಿಭೆಗಳು | ಕರ್ನಾಟಕ ತಂಡದ ನಾಯಕನಾಗಿ ಗಗನ್ ಗೌಡ ಆಯ್ಕೆ

ರಿಪ್ಪನ್‌ಪೇಟೆಗೆ ಹೆಮ್ಮೆಯ ಕ್ಷಣ: ರಾಜ್ಯ ಕಬ್ಬಡಿ ತಂಡದಲ್ಲಿ ಇಬ್ಬರು ಪ್ರತಿಭೆಗಳು | ಕರ್ನಾಟಕ ತಂಡದ ನಾಯಕನಾಗಿ ಗಗನ್ ಗೌಡ ಆಯ್ಕೆ

GridArt 20260223

Historic moment for Shivamogga as Ripponpete’s Gagan Gowda is selected as captain of the Karnataka State Kabaddi Team for the National Championship 2026. A proud achievement for the district.

ಶಿವಮೊಗ್ಗ ಜಿಲ್ಲೆಯ ಕ್ರೀಡಾ ಇತಿಹಾಸಕ್ಕೆ ಸುವರ್ಣಾಕ್ಷರಗಳಲ್ಲಿ ಸೇರಿಸುವಂತಹ ಮಹತ್ವದ ಸಾಧನೆ ಇದಾಗಿದೆ. ಹೊಸನಗರ ತಾಲೂಕಿನ ರಿಪ್ಪನ್‌ಪೇಟೆಯ ಇಬ್ಬರು ಪ್ರತಿಭಾನ್ವಿತ ಕ್ರೀಡಾಪಟುಗಳು ಕರ್ನಾಟಕ ರಾಜ್ಯ ಕಬ್ಬಡಿ ತಂಡದಲ್ಲಿ ಸ್ಥಾನ ಪಡೆದುಕೊಂಡಿದ್ದು, ಅದರಲ್ಲೂ ಶಿವಮೊಗ್ಗ ಜಿಲ್ಲೆಯ ಇತಿಹಾಸದಲ್ಲೇ ಮೊದಲ ಬಾರಿಗೆ ಕರ್ನಾಟಕ ತಂಡದ ನಾಯಕರಾಗಿ ಗಗನ್ ಗೌಡ ಆಯ್ಕೆಯಾಗಿರುವುದು ಜಿಲ್ಲೆಯ ಜನತೆಗೆ ಅಪಾರ ಹೆಮ್ಮೆಯನ್ನು ತಂದಿದೆ.

ಮೂಲತಃ ಹಾಲುಗುಡ್ಡೆ ಗ್ರಾಮದ ರಾಜು ಹೆಚ್.ಎಸ್. ಮತ್ತು ಪೂರ್ಣಿಮಾ ದಂಪತಿಗಳ ಪುತ್ರರಾದ ಗಗನ್ ಗೌಡ ಕಠಿಣ ಅಭ್ಯಾಸದ ಮೂಲಕ ಕಬ್ಬಡಿಯಲ್ಲಿ ಪಳಗಿದವರು. ಬಾಲ್ಯದಿಂದಲೇ ಶಿಸ್ತು, ಪರಿಶ್ರಮ ಮತ್ತು ಗೆಲುವಿನ ಹಠವನ್ನು ಮೈಗೂಡಿಸಿಕೊಂಡಿರುವ ಗಗನ್ ಗೌಡ ಅವರು ಶಾಲಾ, ಕಾಲೇಜು ಹಾಗೂ ರಾಜ್ಯ ಮಟ್ಟದ ಅನೇಕ ಕ್ರೀಡಾಕೂಟಗಳಲ್ಲಿ ಪ್ರಶಸ್ತಿಗಳನ್ನು ಗೆದ್ದು ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿದ್ದಾರೆ. ಇಂದು ಅವರ ಅದೇ ನಿರಂತರ ಪರಿಶ್ರಮಕ್ಕೆ ರಾಜ್ಯಮಟ್ಟದ ಅತ್ಯುನ್ನತ ಗೌರವ ಲಭಿಸಿದೆ.

ಇದೇ ವೇಳೆ, ಖೇಲೋ ಇಂಡಿಯಾ ಕಬ್ಬಡಿ ಪಂದ್ಯಾವಳಿಯಲ್ಲಿ ಚಿನ್ನದ ಪದಕವನ್ನು ಗೆದ್ದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿರುವ ಪ್ರಜ್ವಲ್ ಶ್ರೀಧರ್ ಅವರಿಗೂ ಕರ್ನಾಟಕ ತಂಡದಲ್ಲಿ ಸ್ಥಾನ ದೊರೆತಿರುವುದು ರಿಪ್ಪನ್‌ಪೇಟೆ ಮತ್ತು ಶಿವಮೊಗ್ಗ ಜಿಲ್ಲೆಗೆ ಮತ್ತೊಂದು ಹೆಮ್ಮೆಯ ವಿಷಯವಾಗಿದೆ. ಯುವ ವಯಸ್ಸಿನಲ್ಲೇ ರಾಷ್ಟ್ರಮಟ್ಟದಲ್ಲಿ ಮಿಂಚಿರುವ ಪ್ರಜ್ವಲ್ ಶ್ರೀಧರ್, ಮುಂದಿನ ದಿನಗಳಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಇನ್ನೂ ದೊಡ್ಡ ಸಾಧನೆ ಮಾಡುವ ಭರವಸೆಯನ್ನು ಮೂಡಿಸಿದ್ದಾರೆ.

ಫೆಬ್ರವರಿ 24 ರಿಂದ 27ರವರೆಗೆ ವಡೋದರಾದಲ್ಲಿ ನಡೆಯಲಿರುವ 72ನೇ ಹಿರಿಯರ ರಾಷ್ಟ್ರೀಯ ಕಬಡ್ಡಿ ಚಾಂಪಿಯನ್‌ಶಿಪ್ – 2026 ಗಾಗಿ ಕರ್ನಾಟಕ ತಂಡ ಸಜ್ಜಾಗಿದ್ದು, ಈ ತಂಡದಲ್ಲಿ ಗಗನ್ ಗೌಡ (ನಾಯಕ), ಪ್ರಜ್ವಲ್ ಶ್ರೀಧರ್ ಸೇರಿದಂತೆ ರತನ್, ವಿಜಯ್ ರಂಗಪ್ಪ ಮತ್ತು ಅಭಿಷೇಕ್ ಕೆ.ಎಸ್. ಮುಂತಾದ ಪ್ರಮುಖ ಆಟಗಾರರು ಸ್ಥಾನ ಪಡೆದಿದ್ದಾರೆ. ಅನುಭವ ಮತ್ತು ಯುವಶಕ್ತಿಯ ಸಮನ್ವಯ ಹೊಂದಿರುವ ಈ ತಂಡದಿಂದ ರಾಜ್ಯಕ್ಕೆ ಮತ್ತೊಂದು ರಾಷ್ಟ್ರೀಯ ಸಾಧನೆಯ ನಿರೀಕ್ಷೆ ವ್ಯಕ್ತವಾಗಿದೆ.

ಈ ಮಹತ್ವದ ಸಾಧನೆಗೆ ಕರ್ನಾಟಕ ರಾಜ್ಯ ಕಬ್ಬಡಿ ಅಸೋಸಿಯೇಷನ್ ಅಧ್ಯಕ್ಷರಾದ ಚೆಲುವರಾಜ್ ಅವರ ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ. ಜೊತೆಗೆ, ಭಾರತ ತಂಡದ ಹಾಗೂ ಬೆಂಗಳೂರು ಬುಲ್ಸ್ ತಂಡದ ತರಬೇತುದಾರರು ಹಾಗೂ ಅರ್ಜುನ ಪ್ರಶಸ್ತಿ ಪುರಸ್ಕೃತರಾದ ಬಿಸಿ ರಮೇಶ್ ಅವರ ಪ್ರೋತ್ಸಾಹ ಮತ್ತು ಅನುಭವವೂ ಆಟಗಾರರಿಗೆ ಬಲ ನೀಡಿದೆ. ಭಾರತ ಕಬಡ್ಡಿ ಅಸೋಸಿಯೇಷನ್ ಡೈರೆಕ್ಟರ್ ಹಾಗೂ ಅರ್ಜುನ ಪ್ರಶಸ್ತಿ ವಿಜೇತ ಬಿಸಿ ಸುರೇಶ್ ಅವರ ಮಾರ್ಗದರ್ಶನವೂ ಈ ಯಶಸ್ಸಿನ ಹಿಂದೆ ಇದೆ.

ಅದರ ಜೊತೆಗೆ, ಶಿವಮೊಗ್ಗ ಜಿಲ್ಲಾ ಕಬಡ್ಡಿ ಅಸೋಸಿಯೇಷನ್ನ ಅಧ್ಯಕ್ಷರಾದ ಬಿಸಿ ಚಂದ್ರಶೇಖರ್, ಕಾರ್ಯದರ್ಶಿ ಚೇತನ್ , ವಿನಯ್ ಕುಮಾರ್ ಹಾಗೂ ಸಂಘದ ಎಲ್ಲಾ ಸದಸ್ಯರ ನಿರಂತರ ಸಹಕಾರ, ಶ್ರಮ ಮತ್ತು ಬೆಂಬಲದಿಂದಲೇ ಜಿಲ್ಲೆಯ ಇಬ್ಬರು ಪ್ರತಿಭಾನ್ವಿತ ಕ್ರೀಡಾಪಟುಗಳು ರಾಜ್ಯ ತಂಡಕ್ಕೆ ಆಯ್ಕೆಯಾಗಲು ಸಾಧ್ಯವಾಗಿದೆ ಎಂಬುದು ಕ್ರೀಡಾ ವಲಯದ ಅಭಿಪ್ರಾಯವಾಗಿದೆ.

ಗ್ರಾಮೀಣ ಪ್ರದೇಶದಿಂದ ಬಂದ ಯುವಕನೊಬ್ಬ ರಾಜ್ಯ ತಂಡದ ನಾಯಕನಾಗಿ ಆಯ್ಕೆಯಾಗಿರುವುದು ಅನೇಕ ಯುವ ಕ್ರೀಡಾಪಟುಗಳಿಗೆ ಪ್ರೇರಣೆಯಾಗಿದೆ. “ಸಾಧನೆಗೆ ಸ್ಥಳ, ಸೌಲಭ್ಯಕ್ಕಿಂತ ಪರಿಶ್ರಮ ಮುಖ್ಯ” ಎಂಬುದನ್ನು ಗಗನ್ ಗೌಡ ಅವರ ಸಾಧನೆ ಮತ್ತೆ ಸಾಬೀತುಪಡಿಸಿದೆ. ರಿಪ್ಪನ್‌ಪೇಟೆ ಇಡೀ ಶಿವಮೊಗ್ಗ ಜಿಲ್ಲೆ ಇಂದು ಕ್ರೀಡಾ ಸಂಭ್ರಮದಲ್ಲಿದ್ದು, ಈ ಇಬ್ಬರು ಆಟಗಾರರು ರಾಷ್ಟ್ರಮಟ್ಟದಲ್ಲೂ ಕರ್ನಾಟಕದ ಕೀರ್ತಿಯನ್ನು ಇನ್ನಷ್ಟು ಎತ್ತರಕ್ಕೆ ಕೊಂಡೊಯ್ಯಲಿ ಎಂಬ ಶುಭಾಶಯಗಳು ಎಲ್ಲೆಡೆಯಿಂದ ವ್ಯಕ್ತವಾಗುತ್ತಿವೆ.

ಒಟ್ಟಾರೆಯಾಗಿ ನಮ್ಮೂರಿನ ಪ್ರತಿಭೆಗಳು ರಾಜ್ಯ ಹಾಗೂ ರಾಷ್ಟಮಟ್ಟದಲ್ಲಿ ಮಿಂಚುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ ಅವರು ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಉತ್ತುಂಗಕ್ಕೇರಲಿ ಎನ್ನುವುದೇ ಪೋಸ್ಟ್ ಮ್ಯಾನ್ ನ್ಯೂಸ್ ಬಳಗದ ಆಶಯ….

– ರಫ಼ಿ ರಿಪ್ಪನ್ ಪೇಟೆ

  1. You cannot copy content of this page⚠️ Legal Warning: This article is protected under copyright law. Any unauthorized copying, screenshotting, reproduction, or publication on websites, social media, YouTube, or other platforms without permission may result in legal action. © POSTMAN NEWS Kannada.