ಕಡವೆ ಬೇಟೆ ಮಾಡಿ ಮಾಂಸ ಕತ್ತರಿಸುತ್ತಿದ್ದಾಗಲೇ ದಾಳಿ! ಮೂವರ ಬಂಧನ | 70 ಕೆ.ಜಿ. ಮಾಂಸ , ಬಂದೂಕು ಜಪ್ತಿ
Forest department officials arrested three accused for illegal deer hunting in M.C. Halli range of Bhadravati and seized 70 kg deer meat, a country-made gun, vehicle and hunting weapons.
ಭದ್ರಾವತಿ: ಲಕ್ಕವಳ್ಳಿ ವಲಯದ ಎಂ.ಸಿ.ಹಳ್ಳಿ ಶಾಖಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆ ಬೇಟೆಯಾಡಿ, ಮಾಂಸವನ್ನು ಕತ್ತರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಸುಮಾರು 70 ಕೆ.ಜಿ. ಕಡವೆ ಮಾಂಸವನ್ನು, ತಲೆ ಹಾಗೂ ಕಾಲುಗಳ ಸಮೇತ ವಶಪಡಿಸಿಕೊಳ್ಳಲಾಗಿದೆ. ಜೊತೆಗೆ ಒಂದು ನಾಡ ಬಂದೂಕು, ಒಂದು ದ್ವಿಚಕ್ರ ವಾಹನ, ಬೇಟೆಗೆ ಬಳಸಿದ್ದ ಕತ್ತಿ, ಚಾಕು, ಚೂರಿ ಹಾಗೂ ಹೆಡ್‌ಲ್ಯಾಂಪ್ ಸೇರಿದಂತೆ ವಿವಿಧ ವಸ್ತುಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಈ ಸಂಬಂಧ ಅರಣ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದ್ದು, ಬಂಧಿತ ಮೂವರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಲಕ್ಕವಳ್ಳಿ ವಲಯದ ವಲಯ ಅರಣ್ಯಾಧಿಕಾರಿ ಇಂದು ಜಿ.ಎಸ್., ಎಂ.ಸಿ.ಹಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಚನ್ನೇಗೌಡ ಜಿ.ಟಿ., ಲಕ್ಕವಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮನೋಜ್ ಕೆ.ಎಸ್., ಎಂ.ಸಿ.ಹಳ್ಳಿ ಗಸ್ತಿನ ಗಸ್ತು ಅರಣ್ಯ ಪಾಲಕ ಸಂತೋಷ್ ಎಂ.ಬಿ., ಲಕ್ಕವಳ್ಳಿ ಗಸ್ತಿನ ಗಸ್ತು ಅರಣ್ಯ ಪಾಲಕರಾದ ಬಾಲರಾಜ್, ಪುನೀತ್, ವಿಶ್ವನಾಥ್, ಅರಣ್ಯ ವೀಕ್ಷಕಿ ಕುಮಾರಿ ಶೋಭಾ ಸೇರಿದಂತೆ ಲಕ್ಕವಳ್ಳಿ ವಲಯದ ಸಿಬ್ಬಂದಿ ಭಾಗವಹಿಸಿದ್ದರು.
ಕಾರ್ಯಾಚರಣೆಗೆ ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್, ಐಎಫ್‌ಎಸ್, ಹಾಗೂ ತರೀಕೆರೆ ಉಪ ವಿಭಾಗದ ಅಧಿಕಾರಿಗಳ ಮಾರ್ಗದರ್ಶನವಿತ್ತು.
