ಇಸ್ತ್ರಿ ಮಾಡುವಾಗ ವಿದ್ಯುತ್ ಶಾಕ್: 14 ವರ್ಷದ ವಿದ್ಯಾರ್ಥಿ ಸಾವು | A 14-year-old student, Umar Farooq, died after suffering an electric shock while ironing clothes at home in the Wadi-e-Huda area of Shivamogga.
ಶಿವಮೊಗ್ಗ | ನಗರದ ವಾದಿ-ಏ-ಹುದಾ ಪ್ರದೇಶದಲ್ಲಿ ಬಟ್ಟೆಗೆ ಇಸ್ತ್ರಿ ಮಾಡುವ ಸಂದರ್ಭದಲ್ಲಿ ಸಂಭವಿಸಿದ ವಿದ್ಯುತ್ ಅವಘಡದಲ್ಲಿ 14 ವರ್ಷದ ಶಾಲಾ ವಿದ್ಯಾರ್ಥಿಯೊಬ್ಬ ಮೃತಪಟ್ಟಿದ್ದಾನೆ. ಮೃತನನ್ನು ಉಮರ್ ಫಾರುಕ್ (14) ಎಂದು ಗುರುತಿಸಲಾಗಿದ್ದು, ಈತ 9ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಮನೆಯಲ್ಲಿಯೇ ಬಟ್ಟೆಗೆ ಇಸ್ತ್ರಿ ಮಾಡುತ್ತಿದ್ದ ಸಂದರ್ಭದಲ್ಲಿ ಉಮರ್ ಫಾರುಕ್ಗೆ ಆಕಸ್ಮಿಕವಾಗಿ ವಿದ್ಯುತ್ ಶಾಕ್ ಹೊಡೆದಿದೆ ಎನ್ನಲಾಗಿದೆ. ವಿದ್ಯುತ್ ಪ್ರವಹಿಸಿದ ಪರಿಣಾಮ ಬಾಲಕ ಅಸ್ವಸ್ಥಗೊಂಡಿದ್ದಾನೆ.
ಘಟನೆ ಗಮನಕ್ಕೆ ಬರುತ್ತಿದ್ದಂತೆ ಕುಟುಂಬದವರು ಬಾಲಕನನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ಉಮರ್ ಫಾರುಕ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಚಿಕ್ಕ ವಯಸ್ಸಿನಲ್ಲಿಯೇ ವಿದ್ಯಾರ್ಥಿ ಮೃತಪಟ್ಟಿರುವುದು ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ. ಮನೆಯಲ್ಲಿಯೇ ಸಂಭವಿಸಿದ ಈ ದುರಂತದಿಂದ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಘಟನೆಯ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ.
