“ಬಡವರೇನು ಪ್ರಾಣಿಗಳಾ? ಪುಕ್ಕಟೆ ಕೊಟ್ಟರೂ ಗುಣಮಟ್ಟದ ಆಹಾರ ಕೊಡಿ!” – ಕಲ್ಲು, ಮಣ್ಣು ಮಿಶ್ರಿತ ರಾಗಿ ವಿತರಣೆಗೆ ರಿಪ್ಪನ್ಪೇಟೆಯಲ್ಲಿ ಜನಾಕ್ರೋಶ! | Public outrage erupts in Ripponpet and Hosanagara as fair price shops distribute poor-quality, stone-mixed ragi. Beneficiaries demand immediate action from the food department.
ರಿಪ್ಪನ್ಪೇಟೆ : “ಉಚಿತವಾಗಿ ಕೊಡುತ್ತೇವೆ ಎಂಬ ಕಾರಣಕ್ಕೆ ಬಡವರ ಹೊಟ್ಟೆಗೆ ಮಣ್ಣು ಹಾಕುತ್ತೀರಾ? ಬಡವರೇನು ಪ್ರಾಣಿಗಳಾ?” ಹೀಗೆಂದು ರಿಪ್ಪನ್ಪೇಟೆಯ ನ್ಯಾಯಬೆಲೆ ಅಂಗಡಿ ಮುಂಭಾಗ ಪಡಿತರ ಫಲಾನುಭವಿಗಳು ಸರ್ಕಾರ ಹಾಗೂ ಆಹಾರ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹೊಸನಗರ ತಾಲೂಕಿನಾದ್ಯಂತ ಹಾಗೂ ಶಿವಮೊಗ್ಗದ ಗ್ರಾಮೀಣ ಭಾಗಗಳಲ್ಲಿ ಪಡಿತರ ಚೀಟಿದಾರರಿಗೆ ವಿತರಿಸಲಾಗುತ್ತಿರುವ ರಾಗಿಯು ಮನುಷ್ಯರು ತಿನ್ನಲು ಯೋಗ್ಯವಲ್ಲದ ಸ್ಥಿತಿಯಲ್ಲಿದ್ದು, ಆಹಾರ ಇಲಾಖೆಯ ಬೇಜವಾಬ್ದಾರಿತನದ ವಿರುದ್ಧ ಜನರು ಹಿಡಿಶಾಪ ಹಾಕುತ್ತಿದ್ದಾರೆ.
ಹೊಸನಗರ ತಾಲೂಕಿನಲ್ಲಿ ಒಟ್ಟು 46 ನ್ಯಾಯಬೆಲೆ ಅಂಗಡಿಗಳಿದ್ದು, ಸುಮಾರು 26 ಸಾವಿರಕ್ಕೂ ಅಧಿಕ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳು ಈ ಪಡಿತರ ವ್ಯವಸ್ಥೆಯನ್ನೇ ನಂಬಿ ಬದುಕುತ್ತಿವೆ. ಈ ಹಿಂದೆ ಸರ್ಕಾರದ ನಿಯಮದಂತೆ ಪ್ರತಿ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿಯನ್ನು ನೀಡಲಾಗುತ್ತಿತ್ತು. ಜನರು ಯಾವುದೇ ತಕರಾರಿಲ್ಲದೆ ಅದನ್ನು ಬಳಸುತ್ತಿದ್ದರು.
ಆದರೆ, ಆಹಾರ ಇಲಾಖೆಯ ಇತ್ತೀಚಿನ ಸುತ್ತೋಲೆಯಂತೆ ಪಡಿತರ ಹಂಚಿಕೆಯಲ್ಲಿ ದಿಢೀರ್ ಬದಲಾವಣೆ ತರಲಾಗಿದ್ದು, ಅಕ್ಕಿಯ ಪ್ರಮಾಣವನ್ನು 7 ಕೆ.ಜಿಗೆ ಇಳಿಸಿ, ಜೊತೆಗೆ 3 ಕೆ.ಜಿ ರಾಗಿಯನ್ನು ನೀಡಲಾಗುತ್ತಿದೆ. ಪೌಷ್ಟಿಕಾಂಶದ ದೃಷ್ಟಿಯಿಂದ ರಾಗಿ ನೀಡುವುದಕ್ಕೆ ಸಾರ್ವಜನಿಕರ ಯಾವುದೇ ವಿರೋಧವಿಲ್ಲ. ಆದರೆ, ನ್ಯಾಯಬೆಲೆ ಅಂಗಡಿಗಳಲ್ಲಿ ನೀಡುತ್ತಿರುವ ರಾಗಿಯ ಚೀಲವನ್ನು ತೆರೆದರೆ ಸಾಕು, ಅದರಲ್ಲಿ ರಾಗಿಗಿಂತ ಹೆಚ್ಚಾಗಿ ಕಲ್ಲು, ಕಸ, ಧೂಳು ಹಾಗೂ ಮಣ್ಣಿನ ಹೆಂಟೆಗಳೇ ರಾಚುತ್ತಿವೆ!
“ನಾವು ಕೂಲಿ ನಾಲಿ ಮಾಡಿ ಬದುಕುವವರು. ಸರ್ಕಾರ ನೀಡುವ ಪಡಿತರ ನಮಗೆ ಆಸರೆಯಾಗಬೇಕು ಹೊರತು, ನಮ್ಮ ಪ್ರಾಣಕ್ಕೆ ಕುತ್ತು ತರಬಾರದು. ಈ ಕಲ್ಲು-ಮಣ್ಣು ಮಿಶ್ರಿತ ರಾಗಿಯನ್ನು ಸ್ವಚ್ಛ ಮಾಡುವುದರಲ್ಲಿಯೇ ಅರ್ಧ ದಿನ ಕಳೆಯುತ್ತದೆ, ತೊಳೆದರೆ ಬರೀ ಕಪ್ಪು ಮಣ್ಣು ತಳ ಸೇರುತ್ತದೆ. ಇಂತಹ ಕಳಪೆ ರಾಗಿಯನ್ನು ಪ್ರಾಣಿಗಳಿಗೂ ಹಾಕಲು ಸಾಧ್ಯವಿಲ್ಲ. ಅಧಿಕಾರಿಗಳು ತಮ್ಮ ಮನೆಯಲ್ಲೂ ಇಂತಹದ್ದೇ ರಾಗಿ ತಿನ್ನುತ್ತಾರೆಯೇ?” ಎಂದು ಮಹಿಳಾ ಫಲಾನುಭವಿಗಳು ನ್ಯಾಯಬೆಲೆ ಅಂಗಡಿಗಳ ಮುಂದೆ ಕಿಡಿಕಾರಿದ್ದಾರೆ.
ಸರ್ಕಾರದ ನಿಯಮಾವಳಿಗಳ ಪ್ರಕಾರ ಪಡಿತರ ಚೀಟಿದಾರರಿಗೆ ಪರಿಶುದ್ಧ ಹಾಗೂ ಗುಣಮಟ್ಟದ ಆಹಾರ ಧಾನ್ಯಗಳನ್ನು ವಿತರಿಸಬೇಕು. ಆದರೆ ಗೋದಾಮುಗಳಿಂದಲೇ ಇಂತಹ ಕಳಪೆ ದಾಸ್ತಾನು ಪೂರೈಕೆಯಾಗುತ್ತಿದ್ದರೂ, ಆಹಾರ ಇಲಾಖೆಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.
ಕೂಡಲೇ ಸಂಬಂಧಪಟ್ಟ ಇಲಾಖೆಯ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು, ಕಳಪೆ ರಾಗಿ ವಿತರಣೆಯನ್ನು ಸ್ಥಗಿತಗೊಳಿಸಬೇಕು. ಬಡವರಿಗೆ ಯೋಗ್ಯವಾದ ಗುಣಮಟ್ಟದ ರಾಗಿ ಅಥವಾ ಪೂರ್ಣ ಪ್ರಮಾಣದ ಅಕ್ಕಿಯನ್ನೇ ವಿತರಿಸಬೇಕು. ಒಂದು ವೇಳೆ ನಿಮ್ಮ ಮನೆಗೂ ಇಂತಹ ಕಳಪೆ ರಾಗಿ ಬಂದಿದ್ದರೆ ತಕ್ಷಣವೇ ನ್ಯಾಯಬೆಲೆ ಅಂಗಡಿಗೆ ಹಿಂತಿರುಗಿಸಿ ಧ್ವನಿ ಎತ್ತಬೇಕಿದೆ.
ಸರ್ಕಾರ ಬಡವರ ತಾಳ್ಮೆಯನ್ನು ಪರೀಕ್ಷಿಸುವುದನ್ನು ನಿಲ್ಲಿಸದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು ಕಚೇರಿ ಮುಂಭಾಗ ಉಗ್ರ ಹೋರಾಟ ನಡೆಸುವುದಾಗಿ ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.
