ಇಂದಿರಾ ಕ್ಯಾಂಟೀನ್ ಬಗ್ಗೆ ಅಪಪ್ರಚಾರ ಸಲ್ಲದು; ಬಡವರ ಅನ್ನದ ವಿಚಾರದಲ್ಲಿ ರಾಜಕೀಯ ಬೇಡ: ಹೊದಲ ಶಿವು | Hodala Shivu responds to criticism of the newly inaugurated Indira Canteen in Thirthahalli, urging political leaders to avoid politicizing welfare schemes for the poor.
ತೀರ್ಥಹಳ್ಳಿ: ಪಟ್ಟಣದಲ್ಲಿ ನೂತನವಾಗಿ ಉದ್ಘಾಟನೆಗೊಂಡಿರುವ ಇಂದಿರಾ ಕ್ಯಾಂಟೀನ್‌ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ, ಈ ಜನಪರ ಯೋಜನೆಯ ಕುರಿತು ಬಿಜೆಪಿ ಪಕ್ಷದ ಕೆಲವು ನಾಯಕರು ಆಧಾರರಹಿತ ಆರೋಪ ಹಾಗೂ ಟೀಕೆಗಳನ್ನು ಮಾಡುತ್ತಿರುವುದು ಸರಿಯಲ್ಲ ಎಂದು ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪ್ರಚಾರ ಸಮಿತಿಯ ಕಾರ್ಯಾಧ್ಯಕ್ಷ ಹೊದಲ ಶಿವು ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಸಿಗುತ್ತಿಲ್ಲ, ಕ್ಯಾಂಟೀನ್ ಖಾಲಿಯಾಗಿದೆ, ಉದ್ಘಾಟನೆಯಾದ ಮರುದಿನವೇ ಬಾಗಿಲು ಮುಚ್ಚಲಾಗಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ಅವರು, ಇಂತಹ ಹೇಳಿಕೆಗಳನ್ನು ನೀಡುವ ಮೊದಲು ವಾಸ್ತವಾಂಶಗಳನ್ನು ಪರಿಶೀಲಿಸಬೇಕು ಎಂದು ತಿಳಿಸಿದರು.
ಇಂದಿರಾ ಕ್ಯಾಂಟೀನ್ ಕೇವಲ ಆಹಾರ ವಿತರಣಾ ಕೇಂದ್ರವಲ್ಲ. ದಿನವಿಡೀ ದುಡಿಯುವ ಕೂಲಿ ಕಾರ್ಮಿಕರು, ದಿನಗೂಲಿ ನೌಕರರು, ವಿದ್ಯಾರ್ಥಿಗಳು, ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ದರದಲ್ಲಿ ಆಹಾರ ಒದಗಿಸುವ ಉದ್ದೇಶ ಹೊಂದಿರುವ ಜನಪರ ಯೋಜನೆಯಾಗಿದೆ. ಬಡ ಕುಟುಂಬಗಳ ಪಾಲಿಗೆ ಕಡಿಮೆ ದರದ ಊಟವೂ ಆರ್ಥಿಕವಾಗಿ ದೊಡ್ಡ ನೆರವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಯೋಜನೆಯ ನಿರ್ವಹಣೆಯಲ್ಲಿ ಯಾವುದೇ ಲೋಪದೋಷಗಳಿದ್ದರೆ ಅವುಗಳನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದು ಸರಿಪಡಿಸಲು ಸಹಕರಿಸಬೇಕು. ಗುಣಮಟ್ಟದ ಆಹಾರ, ನಿರಂತರ ಸೇವೆ ಹಾಗೂ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಸಲಹೆ ನೀಡುವುದು ಸೂಕ್ತ. ಅದನ್ನು ಬಿಟ್ಟು ಬಡವರ ಅನುಕೂಲಕ್ಕಾಗಿ ಆರಂಭಿಸಿರುವ ಯೋಜನೆಯ ಬಗ್ಗೆ ಸುಳ್ಳು ಮಾಹಿತಿ ಹರಡುವುದು ಸಾರ್ವಜನಿಕರಲ್ಲಿ ಗೊಂದಲ ಮೂಡಿಸುವ ಪ್ರಯತ್ನವಾಗಬಾರದು ಎಂದರು.
ಬಿಜೆಪಿ ನಾಯಕರನ್ನು ಪ್ರಶ್ನಿಸಿದ ಹೊದಲ ಶಿವು, ಬಡವರಿಗೆ ಕಡಿಮೆ ದರದಲ್ಲಿ ಊಟ ಸಿಗುವುದರಿಂದ ನಿಮಗೆ ಏನು ತೊಂದರೆ? ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ಬೆಂಬಲಿಸುವುದು ವಿರೋಧ ಪಕ್ಷಗಳ ಜವಾಬ್ದಾರಿಯೂ ಅಲ್ಲವೇ ಎಂದು ಪ್ರಶ್ನಿಸಿದರು.
ರಾಜಕೀಯ ಟೀಕೆಗಳು ಪ್ರಜಾಪ್ರಭುತ್ವದ ಸಹಜ ಪ್ರಕ್ರಿಯೆ. ಆದರೆ ಬಡವರ ಹಸಿವು ಮತ್ತು ಬದುಕಿನ ವಿಚಾರದಲ್ಲಿ ರಾಜಕೀಯ ಮಾಡಬಾರದು. ಜನರ ಅನುಕೂಲಕ್ಕಾಗಿ ರೂಪಿಸಿರುವ ಇಂತಹ ಯೋಜನೆಗಳು ಯಶಸ್ವಿಯಾಗಿ ಮುಂದುವರಿಯಲು ಎಲ್ಲರೂ ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ರಾಜಕೀಯಕ್ಕಿಂತ ಜನರ ಹಿತ ದೊಡ್ಡದು, ಟೀಕೆಗಿಂತ ಸೇವೆ ದೊಡ್ಡದು, ಎಲ್ಲಕ್ಕಿಂತ ಮಾನವೀಯತೆ ದೊಡ್ಡದು ಎಂದು ಹೊದಲ ಶಿವು ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
