ಕಾಪು ಬೀಚ್‌ನಲ್ಲಿ ಸಮುದ್ರದ ಅಲೆಗಳ ಸೆಳೆತಕ್ಕೆ ಸಿಲುಕಿದ್ದ ಹೊಸನಗರದ ಯುವಕನ ಶವ ಪತ್ತೆ! | A 20-year-old youth from Hosanagara taluk was found dead after being swept away by strong sea waves at Kaup Beach in Udupi. Search continues for a missing 15-year-old boy.
ಉಡುಪಿ: ಕಾಪು ಬೀಚ್‌ನಲ್ಲಿ ಸಮುದ್ರದ ಬಲವಾದ ಅಲೆಗಳ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದ ಇಬ್ಬರ ಪೈಕಿ ಹೊಸನಗರ ಮೂಲದ ಯುವಕನ ಮೃತದೇಹ ಸೋಮವಾರ ಬೆಳಗ್ಗೆ ಪತ್ತೆಯಾಗಿದೆ. ಮತ್ತೋರ್ವ 15 ವರ್ಷದ ಬಾಲಕನಿಗಾಗಿ ಕರಾವಳಿ ಕಾವಲು ಪಡೆ ಹಾಗೂ ಜೀವ ರಕ್ಷಕ ದಳದ ಸಿಬ್ಬಂದಿ ಶೋಧ ಕಾರ್ಯ ಮುಂದುವರಿಸಿದ್ದಾರೆ.
ಮೃತ ಯುವಕನನ್ನು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಮಾವಿನಕೊಪ್ಪ ಗ್ರಾಮದ ಅಲ್ತಾಫ್ ಅವರ ಪುತ್ರ ಸಮೀರ್ (20) ಎಂದು ಗುರುತಿಸಲಾಗಿದೆ. ನಾಪತ್ತೆಯಾಗಿರುವ ಬಾಲಕನನ್ನು ದಾವಣಗೆರೆಯ ಅಹಮ್ಮದಿ ನಗರದ ಝಿಯಾವುಲ್ಲಾ ಅವರ ಪುತ್ರ ಮಲ್ಲಿಕ್ ರಿಹಾನ್ (15) ಎಂದು ಗುರುತಿಸಲಾಗಿದೆ.
ದಾವಣಗೆರೆಯಿಂದ 12 ಮಂದಿಯ ತಂಡವೊಂದು ಪ್ರವಾಸಕ್ಕಾಗಿ ಕಾಪು ಬೀಚ್‌ಗೆ ಆಗಮಿಸಿತ್ತು. ಈ ತಂಡದ ಐವರು ಯುವಕರು ಸಮುದ್ರದಲ್ಲಿ ಈಜಲು ನೀರಿಗಿಳಿದಿದ್ದರು. ಈ ವೇಳೆ ಸಮುದ್ರದಲ್ಲಿ ಏಕಾಏಕಿ ಎದ್ದ ಬಲವಾದ ಅಲೆಗಳ ಹೊಡೆತಕ್ಕೆ ಸಿಲುಕಿ ಮೂವರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರು.
ಘಟನೆಯನ್ನು ಗಮನಿಸಿದ ಬೀಚ್‌ನ ಜೀವ ರಕ್ಷಕ ದಳದ ಸಿಬ್ಬಂದಿ ತಕ್ಷಣ ಕಾರ್ಯಾಚರಣೆ ನಡೆಸಿ ಮೂವರಲ್ಲಿ ಓರ್ವನನ್ನು ಸುರಕ್ಷಿತವಾಗಿ ರಕ್ಷಿಸಿದ್ದರು. ಆದರೆ ಉಳಿದ ಇಬ್ಬರು ಸಮುದ್ರದಲ್ಲಿ ನಾಪತ್ತೆಯಾಗಿದ್ದರು.
ನಾಪತ್ತೆಯಾದವರಿಗಾಗಿ ಭಾನುವಾರದಿಂದಲೇ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಇದೀಗ ಸೋಮವಾರ ಬೆಳಗ್ಗೆ ಸಮೀರ್ ಅವರ ಮೃತದೇಹ ಪತ್ತೆಯಾಗಿದ್ದು, ಮತ್ತೋರ್ವ ಬಾಲಕನಿಗಾಗಿ ಶೋಧ ಕಾರ್ಯ ಮುಂದುವರಿದಿದೆ.
