ಅಭಿಮಾನಿಗಳ ಹೃದಯದಲ್ಲಿ ಪುನೀತ್ ರಾಜ್ಕುಮಾರ್ ಎಂದೆಂದಿಗೂ ಶಾಶ್ವತ – ದೇವರಾಜ್ ಕೆರೆಹಳ್ಳಿ | Devraj Kerehalli says Puneeth Rajkumar will remain immortal in the hearts of his fans forever. A heartfelt tribute to the beloved Kannada actor.
ರಿಪ್ಪನ್ಪೇಟೆ : “ತಮ್ಮ ಅಭಿನಯ, ಸರಳತೆ ಮತ್ತು ಹೃದಯ ಶ್ರೀಮಂತಿಕೆಯ ಮೂಲಕ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಇಂದಿಗೂ ಕೋಟ್ಯಾಂತರ ಅಭಿಮಾನಿಗಳ ಹೃದಯದಲ್ಲಿ ಜೀವಂತವಾಗಿದ್ದಾರೆ” ಎಂದು ಕಸ್ತೂರಿ ಕನ್ನಡ ಸಂಘದ ಅಧ್ಯಕ್ಷ ದೇವರಾಜ್ ಕೆರೆಹಳ್ಳಿ ಹೇಳಿದರು.
ಪಟ್ಟಣದ ವಿನಾಯಕ ಸರ್ಕಲ್ನಲ್ಲಿ ಕಸ್ತೂರಿ ಕನ್ನಡ ಸಂಘ ಹಾಗೂ ಪುನೀತ್ ಅಭಿಮಾನಿ ಬಳಗದ ವತಿಯಿಂದ ಮಂಗಳವಾರ ನಡೆದ 5ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಅಪ್ಪು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು.
ಅವರು ಮುಂದುವರೆದು, “ಪುನೀತ್ ರಾಜ್ಕುಮಾರ್ ಸದ್ದಿಲ್ಲದೆ ಜನಪರ ಕೆಲಸಗಳನ್ನು ಮಾಡುತ್ತಿದ್ದರು. ಆ ಸೇವಾಭಾವವೇ ಅವರನ್ನು ಇಂದಿಗೂ ಜನಮನಗಳಲ್ಲಿ ಶಾಶ್ವತಗೊಳಿಸಿದೆ. ಅವರ ಪ್ರೀತಿಗೆ ಮೌಲ್ಯ ಕಟ್ಟಲು ಸಾಧ್ಯವಿಲ್ಲ. ಅವರ ಜೀವನ ಸ್ಮರಣೀಯ ಪಾಠ. ಪುನೀತ್ ಅವರ ಮಾನವೀಯ ಮೌಲ್ಯಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು” ಎಂದು ಹೇಳಿದರು.
ರಿಪ್ಪನ್ ಪೇಟೆ ಪಿಎಸ್ ಐ ರಾಜುರೆಡ್ಡಿ ಮಾತನಾಡಿ ಬಾಲ್ಯದಲ್ಲಿಯೇ ಸಿನಿಮಾ ಜಗತ್ತಿಗೆ ಕಾಲಿಟ್ಟ ಅಪ್ಪು ಪ್ರೇಕ್ಷಕರಿಗೆ ಮನರಂಜನಾ ಸಿನಿಮಾದ ಔತಣ ನೀಡಿದರು. ನಾಲ್ಕನೇ ವರ್ಷದ ಸ್ಮರಣೆಯ ಸಂದರ್ಭದಲ್ಲಿ, ಅವರ ಸಮಾಜಮುಖಿ ಸಂದೇಶ ನೀಡುವ ಚಲನಚಿತ್ರಗಳು ಕೇವಲ ಮನರಂಜನೆಯನ್ನು ಮಾತ್ರವಲ್ಲದೆ ಪ್ರಮುಖ ಸಾಮಾಜಿಕ ಸಂದೇಶಗಳನ್ನ ನೀಡುವಂತಹ ಸಿನಿಮಾಗಳನ್ನ ಮಾಡಿ ನಮ್ಮೆಲ್ಲರಿಗೆ ಪ್ರೇರಣೆ ನೀಡಿದ್ದಾರೆ.ಅಪ್ಪು ಕೇವಲ ಸಿನೆಮಾಗಳಿಗೆ ಮಾತ್ರ ಸೀಮಿತವಾಗಿರದೆ ಸಿನೆಮಾಗಳಲ್ಲಿ ತೋರಿಸಿದ ರೀತಿಯಲ್ಲೇ ನಿಜ ಜೀವನದಲ್ಲಿ ಅನೇಕ ಸಮಾಜಮುಖಿ ಸೇವೆಗಳನ್ನು ಮಾಡಿ ಜನರಿಗೆ ಸ್ಪೂರ್ತಿ ನೀಡಿದ್ದಾರೆ ಎಂದರು.
ಕಸ್ತೂರಿ ಕನ್ನಡ ಸಂಘದ ಸಂಸ್ಥಾಪಕ ಅಧ್ಯಕ್ಷ ಅರ್ ಎ ಚಾಬುಸಾಬ್ ಮಾತನಾಡಿ ಪುನೀತ್ ರಾಜ್ಕುಮಾರ್ ನಟರಾಗಿ ಮಾತ್ರವಲ್ಲದೆ; ಮುಗ್ಧ ನಗು, ವಿನಯವಂತಿಕೆ ಮತ್ತು ಅಭಿನಯದಿಂದ ಕರುನಾಡಿನ ಮನೆಮನೆಯ ಕಣ್ಮಣಿಯಾಗಿ ಬೆಳೆದಿದ್ದಾರೆ. ತಮ್ಮ ಕೊಡುಗೆ ಗುಣ ಮತ್ತು ಸಾಮಾಜಿಕ ಕಳಕಳಿಯಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುನೀತ್ ಅಭಿಮಾನಿ ಬಳಗದ ಅಧ್ಯಕ್ಷೆ ಶೀಲಾ ಆರ್.ಡಿ, ಸಂಘದ ಪ್ರಮುಖರಾದ ಎನ್ ವರ್ತೇಶ್ , ಜಿ ಎಸ್ ವರದರಾಜ್ , ಬಂಡಿ ನೇಮಣ್ಣ, ಆಸೀಫ್ ಭಾಷಾ, ನಿರೂಪ್ ಕುಮಾರ್, ತ ಮ ನರಸಿಂಹ , ಸಾಜೀದಾ ಹನೀಫ಼್ , ಪ್ರಕಾಶ್ ಪಾಲೇಕರ್, ಶಂಶುದ್ದೀನ್ ಆರ್.ಎಸ್, ವಿಜಯ್ ಮಳವಳ್ಳಿ, ನಿರಂಜನ್ ಕನ್ನಡಿಗ, ರಾಘು ಇಂಜಿನಿಯರ್ , ಅರುಣ್ ಮಲ್ಲಾಪುರ , ಮೈದೀನ್ ಆರ್ ಹೆಚ್ ಹಾಗೂ ಇನ್ನಿತರರು ಹಾಜರಿದ್ದರು.
