ಜಿಪಂ ಮೀಸಲಾತಿ ಕರಡು ಪಟ್ಟಿಗೆ ‘ಅದೃಶ್ಯ’ ಕತ್ತರಿ? ಹೊಸನಗರದ ನಾಲ್ಕು ಜಿಪಂ ಕ್ಷೇತ್ರಗಳ ರಾಜಕೀಯ ಚಿತ್ರಣವೇ ಉಲ್ಟಾ! | ಹೊಸ ಲೆಕ್ಕಾಚಾರವೇನು ..!? ಈ ಸುದ್ದಿ ನೋಡಿ
Rumors of sudden changes in the Zilla Panchayat reservation draft list have stirred Hosanagara politics. Check the constituency-wise analysis of Ripponpet, Huncha, Nagara, Kasaba, and Maruthipura.
ಶಿವಮೊಗ್ಗ / ಹೊಸನಗರ (ವಿಶೇಷ ವರದಿ):
ಜಿಲ್ಲಾ ಪಂಚಾಯತ್ ಮತ್ತು ತಾಲೂಕು ಪಂಚಾಯತ್ ಚುನಾವಣೆಯ ಕಾವು ಏರುತ್ತಿರುವ ಬೆನ್ನಲ್ಲೇ, ರಾಜಕೀಯ ಪಡಸಾಲೆಯಲ್ಲಿ ಈಗ ಭಾರಿ ಸಂಚಲನವೊಂದು ಸೃಷ್ಟಿಯಾಗಿದೆ. ಚುನಾವಣಾ ಆಯೋಗ ಪ್ರಕಟಿಸಿದ್ದ ಮೀಸಲಾತಿ ಕರಡು ಪಟ್ಟಿಯನ್ನೇ ಅಂತಿಮವೆಂದು ನಂಬಿ, ಈಗಾಗಲೇ ಕ್ಷೇತ್ರಗಳಲ್ಲಿ ಪ್ರಚಾರ ಹಾಗೂ ತಯಾರಿ ಆರಂಭಿಸಿದ್ದ ಆಕಾಂಕ್ಷಿಗಳ ನಿದ್ದೆಗೆಡುವಂತಹ ಸುದ್ದಿಯೊಂದು ಹೊರಬಿದ್ದಿದೆ.
ಕರಡು ಪಟ್ಟಿಗೆ ಆಕ್ಷೇಪಣೆ ಸಲ್ಲಿಸಲು ನೀಡಲಾಗಿದ್ದ ಕಾಲಾವಕಾಶವನ್ನೇ ಅಸ್ತ್ರವಾಗಿಸಿಕೊಂಡು, ತೆರೆಮರೆಯಲ್ಲಿ ‘ರಾಜಕೀಯ ಪ್ರಭಾವ’ ಮತ್ತು ‘ಕಾಂಚಾಣದ ಬಲ’ ಪ್ರಯೋಗಿಸಿ ಮೀಸಲಾತಿ ಪಟ್ಟಿಯನ್ನೇ ಬದಲಾಯಿಸಲಾಗಿದೆ ಎಂಬ ಗಂಭೀರ ಗುಸುಗುಸು ಶುರುವಾಗಿದೆ. ಬಲ್ಲ ಮೂಲಗಳ ಪ್ರಕಾರ, ಹೊಸನಗರ ತಾಲೂಕಿನ ಒಂದು ಕ್ಷೇತ್ರವನ್ನು ಹೊರತುಪಡಿಸಿ, ಉಳಿದೆಲ್ಲಾ ಜಿಪಂ ಕ್ಷೇತ್ರಗಳ ಮೀಸಲಾತಿ ಸ್ಥಾನಪಲ್ಲಟಗೊಂಡಿದೆ ಎನ್ನಲಾಗುತ್ತಿದೆ. ಒಂದು ವೇಳೆ ಈ ಸುದ್ದಿ ನಿಜವೇ ಆದಲ್ಲಿ, ರಾಜಕೀಯ ಪಂಡಿತರ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗುವುದರಲ್ಲಿ ಅನುಮಾನವೇ ಇಲ್ಲ.
ಹೊಸನಗರ ತಾಲೂಕಿನ ಐದು ಜಿಪಂ ಕ್ಷೇತ್ರಗಳಲ್ಲಿ ಸಂಭವಿಸಬಹುದಾದ ಈ ‘ಮೀಸಲಾತಿ ಬದಲಾವಣೆ’ಯಿಂದ ಯಾರಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ನೋಡಿ ಸಂಪೂರ್ಣ ಗ್ರೌಂಡ್ ರಿಪೋರ್ಟ್:
1. ರಿಪ್ಪನ್ಪೇಟೆ ಕ್ಷೇತ್ರ: ‘ಮೀಸಲು’ ಬದಲಾದರೆ ಘಟಾನುಘಟಿಗಳ ಅಖಾಡ!
ಹಳೆಯ ಕರಡು ಪಟ್ಟಿಯಲ್ಲಿ ರಿಪ್ಪನ್ಪೇಟೆ ಕ್ಷೇತ್ರಕ್ಕೆ ‘ಪರಿಶಿಷ್ಟ ಜಾತಿ (SC)’ ಮೀಸಲಾತಿ ನಿಗದಿಯಾಗಿತ್ತು. ಇದರಿಂದಾಗಿ ಕಾಂಗ್ರೆಸ್ನಿಂದ ಎಸ್.ಆರ್. ಕನ್ವೆನ್ಷನ್ ಹಾಲ್ ಮಾಲೀಕ ಆರ್. ರವಿಚಂದ್ರ, ಬಗರ್ ಹುಕುಂ ಸಮಿತಿ ಸದಸ್ಯೆ ಸಾಕಮ್ಮ ಹಾಗೂ ಬಿಜೆಪಿಯಿಂದ ನಾಗರತ್ನಮ್ಮ, ರಾಘವೇಂದ್ರ ಚಿಪ್ಲಿ ಸೇರಿದಂತೆ ಹಲವರು ಅಖಾಡಕ್ಕಿಳಿಯಲು ಸಜ್ಜಾಗಿದ್ದರು.
ಆದರೆ, ಈಗ ಇಲ್ಲಿನ ಮೀಸಲಾತಿ ಬದಲಾಗಿ ‘ಸಾಮಾನ್ಯ’ ವರ್ಗಕ್ಕೆ ಮೀಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇದೇನಾದರೂ ನಿಜವಾದಲ್ಲಿ ಹಳೆಯ ಆಕಾಂಕ್ಷಿಗಳಿಗೆ ನಿರಾಸೆಯಾಗಲಿದ್ದು, ಕಾಂಗ್ರೆಸ್ನಿಂದ ಜಿಪಂ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ್ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಇತ್ತ ಬಿಜೆಪಿಯಿಂದ ವೀರೇಶ್ ಆಲುವಳ್ಳಿ, ಎನ್. ಸತೀಶ್ ಮುಂತಾದವರ ಹೆಸರುಗಳು ಮುನ್ನೆಲೆಗೆ ಬರಲಿದ್ದು, ಕ್ಷೇತ್ರದ ಚಿತ್ರಣವೇ ಬದಲಾಗಲಿದೆ.
2. ಹುಂಚ ಕ್ಷೇತ್ರ: ಪುರುಷರ ಪೈಪೋಟಿಗೆ ಬ್ರೇಕ್, ಮಹಿಳೆಯರಿಗೆ ಮಣೆ?
ಈ ಹಿಂದಿನ ಕರಡು ಪಟ್ಟಿಯಂತೆ ಹುಂಚ ಕ್ಷೇತ್ರಕ್ಕೆ ‘ಬಿಸಿಎಂ (ಎ)’ ಮೀಸಲಾತಿ ಪ್ರಕಟವಾಗಿತ್ತು. ಇದರಿಂದ ಕಾಂಗ್ರೆಸ್ನಿಂದ ಬಿ.ಪಿ. ರಾಮಚಂದ್ರ ಹಾಗೂ ಬಿಜೆಪಿಯಿಂದ ಸುರೇಶ್ ಸ್ವಾಮಿರಾವ್ ನಡುವೆ ನೇರ ಹಣಾಹಣಿ ನಡೆಯಲಿದೆ ಎಂಬ ಲೆಕ್ಕಾಚಾರವಿತ್ತು.
ಆದರೆ, ಹೊಸ ಬೆಳವಣಿಗೆಯಲ್ಲಿ ಈ ಕ್ಷೇತ್ರ ‘ಸಾಮಾನ್ಯ ಮಹಿಳೆ’ಗೆ ಮೀಸಲಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಒಂದು ವೇಳೆ ಮೀಸಲಾತಿ ಬದಲಾದರೆ ಇಬ್ಬರೂ ಪ್ರಬಲ ಪುರುಷ ನಾಯಕರು ಹಿಂದೆ ಸರಿಯಬೇಕಾಗುತ್ತದೆ. ಆಗ ಕಾಂಗ್ರೆಸ್ನಿಂದ ಶ್ವೇತಾ ಬಂಡಿ ಹಾಗೂ ಬಿಜೆಪಿಯಿಂದ ಸುರೇಶ್ ಸ್ವಾಮಿರಾವ್ ಅವರ ಪತ್ನಿ ಕಣಕ್ಕಿಳಿಯುವ ಸಾಧ್ಯತೆಯಿದ್ದು, ಮಹಿಳಾ ಅಭ್ಯರ್ಥಿಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ಏರ್ಪಡಲಿದೆ.
3. ನಗರ ಕ್ಷೇತ್ರ: ಸಾಮಾನ್ಯ ವರ್ಗದ ಆಕಾಂಕ್ಷಿಗಳಿಗೆ ಶಾಕ್?
ಹಳೆಯ ಕರಡು ಪಟ್ಟಿಯಲ್ಲಿ ನಗರ ಕ್ಷೇತ್ರಕ್ಕೆ ‘ಸಾಮಾನ್ಯ’ ಮೀಸಲಾತಿ ನಿಗದಿಯಾಗಿದ್ದರಿಂದ ಆಕಾಂಕ್ಷಿಗಳ ಪಟ್ಟಿ ದೊಡ್ಡದಿತ್ತು. ಕಾಂಗ್ರೆಸ್ನಿಂದ ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಹಾಗೂ ಬಿಜೆಪಿಯಿಂದ ಹಾಲಗದ್ದೆ ಉಮೇಶ್, ರಮಾಕಾಂತ್, ಯಡೂರು ಮಂಜುನಾಥ್, ನಿತಿನ್ ನಗರ ಸೇರಿದಂತೆ ಹಲವರು ಟಿಕೆಟ್ಗಾಗಿ ತೀವ್ರ ಪೈಪೋಟಿ ನಡೆಸಿದ್ದರು.
ಆದರೆ, ಈಗ ಈ ಕ್ಷೇತ್ರ ‘ಬಿಸಿಎಂ (ಎ)’ ವರ್ಗಕ್ಕೆ ಬದಲಾಗಲಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೀಗಾದಲ್ಲಿ ಬಿಜೆಪಿಯಲ್ಲಿದ್ದ ಸಾಮಾನ್ಯ ವರ್ಗದ ಆಕಾಂಕ್ಷಿಗಳ ಕನಸು ಭಗ್ನವಾಗಲಿದೆ. ಆಗ ಹುಂಚ ಕ್ಷೇತ್ರ ಕೈತಪ್ಪುವ ಭೀತಿಯಲ್ಲಿರುವ ಬಿಜೆಪಿಯ ಸುರೇಶ್ ಸ್ವಾಮಿರಾವ್ ನಗರ ಕ್ಷೇತ್ರದತ್ತ ಮುಖ ಮಾಡುವ ಸಾಧ್ಯತೆ ಇದ್ದು, ಕಾಂಗ್ರೆಸ್ನಿಂದ ಸುಬ್ರಹ್ಮಣ್ಯ ಮಾಸ್ತಿಕಟ್ಟೆ ಅವರಿಗೆ ಅವಕಾಶ ಸಿಗುವ ಲೆಕ್ಕಾಚಾರವಿದೆ.
೪. ಕಸಬಾ ಕ್ಷೇತ್ರ: ಎರಡೂ ಪಕ್ಷಗಳಿಗೆ ಅಭ್ಯರ್ಥಿಗಳ ಹುಡುಕಾಟದ ತಲೆನೋವು!
ಹಳೆಯ ಪಟ್ಟಿಯಂತೆ ಕಸಬಾ ಕ್ಷೇತ್ರ ‘ಸಾಮಾನ್ಯ ಮಹಿಳೆ’ಗೆ ಮೀಸಲಾಗಿತ್ತು. ಇಲ್ಲಿ ಕಾಂಗ್ರೆಸ್ನಿಂದ ಶ್ವೇತಾ ಬಂಡಿ, ಸುಮಾ ಸುಬ್ರಹ್ಮಣ್ಯ, ನಾಗವೇಣಿ ಸಣ್ಣಕ್ಕಿ ಮಂಜು ಹೆಸರುಗಳು ಮುಂಚೂಣಿಯಲ್ಲಿದ್ದರೆ, ಬಿಜೆಪಿಯಲ್ಲಿ ಸೂಕ್ತ ಅಭ್ಯರ್ಥಿಯ ಕೊರತೆ ಎದ್ದು ಕಾಣುತ್ತಿತ್ತು.
ಪ್ರಸ್ತುತ ಕೇಳಿಬರುತ್ತಿರುವ ಮಾಹಿತಿಯಂತೆ, ಈ ಕ್ಷೇತ್ರವು ‘ಎಸ್ಸಿ ಸಾಮಾನ್ಯ’ ವರ್ಗಕ್ಕೆ ಬದಲಾಗಲಿದೆ ಎನ್ನಲಾಗುತ್ತಿದೆ.
ಒಂದು ವೇಳೆ ಈ ಬದಲಾವಣೆಯಾದರೆ, ಕಾಂಗ್ರೆಸ್ನಲ್ಲಿದ್ದ ಮಹಿಳಾ ಆಕಾಂಕ್ಷಿಗಳಿಗೆ ಬಾಗಿಲು ಮುಚ್ಚಿದಂತಾಗುತ್ತದೆ. ಅಷ್ಟೇ ಅಲ್ಲದೆ, ಈ ಹೊಸ ಮೀಸಲಾತಿಗೆ ತಕ್ಕಂತೆ ಪ್ರಬಲ ಅಭ್ಯರ್ಥಿಗಳನ್ನು ಹುಡುಕುವ ಹೊಸ ಸವಾಲು ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳಿಗೂ ಎದುರಾಗಲಿದೆ.
೫. ಮಾರುತಿಪುರ ಕ್ಷೇತ್ರ: ಬದಲಾವಣೆಯ ಗಾಳಿಯಲ್ಲೂ ಯಥಾಸ್ಥಿತಿ!
ತಾಲೂಕಿನ ಇತರ ನಾಲ್ಕು ಕ್ಷೇತ್ರಗಳಲ್ಲಿ ಮೀಸಲಾತಿ ಬದಲಾವಣೆಯ ಭೀತಿ ಎದುರಾಗಿದ್ದರೂ, ಮಾರುತಿಪುರ ಕ್ಷೇತ್ರ ಮಾತ್ರ ತನ್ನ ಹಳೆಯ ‘ಬಿಸಿಎಂ (ಬಿ)’ ಮೀಸಲಾತಿಯನ್ನು ಉಳಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಹೀಗಾಗಿ ಇಲ್ಲಿನ ರಾಜಕೀಯ ಲೆಕ್ಕಾಚಾರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಾಂಗ್ರೆಸ್ನಿಂದ ಬಿ.ಜಿ. ಚಂದ್ರಮೌಳಿ, ಬಿಜೆಪಿಯಿಂದ ವೀರೇಶ್ ಆಲುವಳ್ಳಿ, ಮಲ್ಲಿಕಾರ್ಜುನ ಹಕ್ರೆ, ಅಭಿಲಾಷ್ ಚಿಕ್ಕಮಣತಿ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ವಾಟಗೋಡು ಸುರೇಶ್ ಅವರ ಹೆಸರುಗಳು ಎಂದಿನಂತೆ ಚಾಲ್ತಿಯಲ್ಲಿವೆ.
ಹೊಸನಗರ ತಾಲೂಕು ಮಾತ್ರವಲ್ಲದೆ, ಜಿಲ್ಲೆಯ ಇತರ ಹಲವು ಕ್ಷೇತ್ರಗಳ ಮೀಸಲಾತಿ ಕೆಟಗರಿಯಲ್ಲೂ ಇದೇ ರೀತಿಯ ಬದಲಾವಣೆಗಳಾಗಿವೆ ಎಂಬ ಮಾಹಿತಿ ಬಲ್ಲ ಮೂಲಗಳಿಂದ ತಿಳಿದುಬಂದಿದೆ. ಆಕ್ಷೇಪಣೆಗಳ ಹೆಸರಿನಲ್ಲಿ ನಡೆದಿದೆ ಎನ್ನಲಾದ ಈ ‘ಮೀಸಲಾತಿ ಬದಲಾವಣೆ’ ಕೇವಲ ರಾಜಕೀಯ ವದಂತಿಯಾಗಿ ಉಳಿಯುತ್ತದೆಯೇ ಅಥವಾ ಅಂತಿಮ ಪಟ್ಟಿಯಲ್ಲಿ ಅಧಿಕೃತವಾಗಿ ಪ್ರಕಟಗೊಂಡು ಘಟಾನುಘಟಿ ನಾಯಕರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
– ರಫಿ ರಿಪ್ಪನ್ ಪೇಟೆ
