ರಿಪ್ಪನ್ಪೇಟೆ : ಖ್ಯಾತ ವೈದ್ಯ ದಿ. ಡಾ. ಜಟ್ಟನಾಯ್ಕ್ ರವರ ಪತ್ನಿ ಹಾಲಮ್ಮ ಜಟ್ಟನಾಯ್ಕ್ ನಿಧನ; ಗಣ್ಯರ ಸಂತಾಪ | Halamma Jattanaik (89), wife of renowned late government doctor Dr. Jattanaik, passed away in Shivamogga. Final rites will be held in Gavaturu. Political leaders including MLA Belur Gopalakrishna and Haratalu Halappa expressed condolences.
ರಿಪ್ಪನ್ಪೇಟೆ: ಪಟ್ಟಣದ ಶಿವಮೊಗ್ಗ ರಸ್ತೆ ನಿವಾಸಿ, ದಿವಂಗತ ಡಾ. ಜಟ್ಟನಾಯ್ಕ್ ರವರ ಧರ್ಮಪತ್ನಿ ಹಾಲಮ್ಮ ಜಟ್ಟನಾಯ್ಕ್ (89) ಅವರು ಗುರುವಾರ ಮಧ್ಯಾಹ್ನ ನಿಧನರಾಗಿದ್ದಾರೆ.
ಬುಧವಾರ ರಾತ್ರಿ ತೀವ್ರ ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಂದು ಮಧ್ಯಾಹ್ನ ಕೊನೆಯುಸಿರೆಳೆದಿದ್ದಾರೆ.
ರಿಪ್ಪನ್ಪೇಟೆ, ನಗರ, ಕೋಡೂರು, ಅರಳಸುರುಳಿ ಸೇರಿದಂತೆ ಹಲವು ಭಾಗಗಳಲ್ಲಿ ಸರ್ಕಾರಿ ವೈದ್ಯರಾಗಿ ಸೇವೆ ಸಲ್ಲಿಸಿ ಅಪಾರ ಜನಮನ್ನಣೆ ಗಳಿಸಿದ್ದ ದಿ. ಡಾ. ಜಟ್ಟನಾಯ್ಕ್ ಅವರ ಪ್ರಾಮಾಣಿಕ ಸೇವೆಗೆ ಹಾಲಮ್ಮ ಅವರು ಬೆನ್ನೆಲುಬಾಗಿ ನಿಂತಿದ್ದರು. ತಮ್ಮ ಸರಳ ಹಾಗೂ ಸಜ್ಜನಿಕೆಯ ಸ್ವಭಾವದಿಂದ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು.
ಮೃತರು ಶಿವಮೊಗ್ಗ ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿ ಶಶಿಕುಮಾರ್ ವೈ.ಜೆ., ರೈಲ್ವೆ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಭಾಸ್ಕರ್ ವೈ.ಜೆ., ಹಿಂದೂ ಮಹಾಸಭಾ ಮಾಜಿ ಅಧ್ಯಕ್ಷ ವೈ.ಜೆ. ಕೃಷ್ಣ ಸೇರಿದಂತೆ ನಾಲ್ವರು ಪುತ್ರರು, ಮೂವರು ಪುತ್ರಿಯರು, ಮೊಮ್ಮಕ್ಕಳು ಹಾಗೂ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ.
ಮೃತರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ರಿಪ್ಪನ್ಪೇಟೆಯ ಶಿವಮೊಗ್ಗ ರಸ್ತೆಯ ಪೊಲೀಸ್ ಠಾಣೆಯ ಮುಂಭಾಗದಲ್ಲಿರುವ ಅವರ ಸ್ವಗೃಹದಲ್ಲಿ ವ್ಯವಸ್ಥೆ ಮಾಡಲಾಗಿದೆ. ಅಂತ್ಯಕ್ರಿಯೆಯನ್ನು ಶುಕ್ರವಾರ ಬೆಳಿಗ್ಗೆ ಗವಟೂರಿನ ಅವರ ಜಮೀನಿನಲ್ಲಿ ನೆರವೇರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗಣ್ಯರ ಸಂತಾಪ:
ಹಾಲಮ್ಮ ಜಟ್ಟನಾಯ್ಕ್ ಅವರ ನಿಧನಕ್ಕೆ ಶಾಸಕ ಬೇಳೂರು ಗೋಪಾಲಕೃಷ್ಣ, ಮಾಜಿ ಸಚಿವ ಹರತಾಳು ಹಾಲಪ್ಪ, ಜಿ.ಪಂ. ಮಾಜಿ ಸದಸ್ಯರಾದ ಕಲಗೋಡು ರತ್ನಾಕರ್, ಬಿ.ಪಿ. ರಾಮಚಂದ್ರ, ಮುಖಂಡರಾದ ಎಂ.ಎಂ. ಪರಮೇಶ್, ಆರ್.ಎ. ಚಾಬುಸಾಬ್, ಎಂ.ಬಿ. ಮಂಜುನಾಥ್, ಸುರೇಶ್ ಸಿಂಗ್, ಜಿ.ಆರ್. ಗೋಪಾಲಕೃಷ್ಣ, ಆಸೀಫ್ ಭಾಷಾ, ನಿರೂಪ್ ಕುಮಾರ್, ಶೀಲಾ ಆರ್.ಡಿ. ಸೇರಿದಂತೆ ಹಲವು ಗಣ್ಯರು ಹಾಗೂ ಪೋಸ್ಟ್ ಮ್ಯಾನ್ ನ್ಯೂಸ್ ಬಳಗ ತೀವ್ರ ಸಂತಾಪ ಸೂಚಿಸಿದೆ.
