ಗಾಯಕಿ ಸುಧಾ ಬಸವರಾಜ್ಗೆ ‘ಕರುನಾಡ ಕನ್ನಡಕಣ್ಮಣಿ’ ರಾಜ್ಯ ಪ್ರಶಸ್ತಿ ಪ್ರದಾನ | Singer Sudha Basavaraj from Hosanagara taluk receives the Karunada Kannadakanmani State Award from Davanagere Kalakunch Cultural Organization for her contribution to music.
ರಿಪ್ಪನ್ಪೇಟೆ: ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ವತಿಯಿಂದ 71ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಪ್ರದಾನ ಮಾಡಲಾಗುವ ಪ್ರತಿಷ್ಠಿತ ‘ಕರುನಾಡ ಕನ್ನಡಕಣ್ಮಣಿ’ ರಾಜ್ಯ ಪ್ರಶಸ್ತಿಗೆ ಹೊಸನಗರ ತಾಲ್ಲೂಕಿನ ಗ್ರಾಮೀಣ ಪ್ರತಿಭಾವಂತ ಗಾಯಕಿ ಸುಧಾ ಬಸವರಾಜ್ ಭಾಜನರಾಗಿದ್ದಾರೆ.
ಗ್ರಾಮೀಣ ಭಾಗದಲ್ಲಿ ಎಲೆಮರೆಯ ಕಾಯಿಯಂತೆ ಗುರುತಿಸಿಕೊಂಡಿರುವ ಸುಧಾ ಬಸವರಾಜ್ ಅವರು ತಮ್ಮ ಸುಮಧುರ ಕಂಠದ ಮೂಲಕ ಜಾನಪದ ಗೀತೆಗಳು, ಚಲನಚಿತ್ರ ಗೀತೆಗಳು ಹಾಗೂ ಭಾವಗೀತೆಗಳನ್ನು ಹಾಡುತ್ತಾ ಸಂಗೀತಾಭಿಮಾನಿಗಳ ಮನಗೆದ್ದಿದ್ದಾರೆ.
ಸಣ್ಣ ಪ್ರಮಾಣದಲ್ಲಿ ಸಂಗೀತ ಕಲಾವಿದರ ತಂಡವನ್ನು ಕಟ್ಟಿಕೊಂಡಿರುವ ಇವರು, ಗಣೇಶೋತ್ಸವ ಸೇರಿದಂತೆ ವಿವಿಧ ಧಾರ್ಮಿಕ ಹಾಗೂ ಶುಭ ಸಮಾರಂಭಗಳಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾ ತಮ್ಮ ಸಂಗೀತ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿದ್ದುಕೊಂಡೇ ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಇವರ ಪ್ರತಿಭೆ ಮತ್ತು ಕಲಾಸೇವೆಯನ್ನು ಗುರುತಿಸಿದ ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯು 71ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ‘ಕರುನಾಡ ಕನ್ನಡಕಣ್ಮಣಿ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಮಲೆನಾಡಿನ ಗ್ರಾಮೀಣ ಪ್ರತಿಭೆಯೊಬ್ಬರಿಗೆ ರಾಜ್ಯಮಟ್ಟದ ಪ್ರಶಸ್ತಿ ದೊರೆತಿರುವುದು ಸ್ಥಳೀಯ ಸಂಗೀತ ಕಲಾವಿದರು ಹಾಗೂ ಕಲಾಭಿಮಾನಿಗಳಲ್ಲಿ ಸಂತಸ ಮತ್ತು ಮೆಚ್ಚುಗೆಗೆ ಪಾತ್ರವಾಗಿದೆ.
