ಆರ್ಪಿ ಡೀಲ್ ಹೆಸರಲ್ಲಿ ಮಹಾ ವಂಚನೆ! – ಲಕ್ಷ ಲಕ್ಷ ಪೀಕಿ ಕೊಲೆ ಬೆದರಿಕೆ ಹಾಕಿದ ಗ್ಯಾಂಗ್!
ರಿಪ್ಪನ್ಪೇಟೆಯ ಈ ಗ್ಯಾಂಗ್ ನ ಖತರ್ನಾಕ್ ಪ್ಲಾನ್ ಕೇಳಿದ್ರೆ ಶಾಕ್ ಆಗ್ತೀರಾ! | Three men booked for allegedly cheating Thirthahalli businessmen of over ₹22.63 lakh through antique business and RP Deal investment promises in Ripponpete.
ರಿಪ್ಪನ್ಪೇಟೆ : ಹಣ ಹೂಡಿಕೆ ಮಾಡಿದರೆ ಅಲ್ಪಾವಧಿಯಲ್ಲೇ ದ್ವಿಗುಣ ಲಾಭ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಂಚಿಸಿರುವ ಆರೋಪದ ಪ್ರಕರಣವೊಂದು ಮಲೆನಾಡಿನಲ್ಲಿ ಬೆಳಕಿಗೆ ಬಂದಿದೆ.
ಆರ್ಪಿ ಡೀಲ್’ (RP Deal) ಮತ್ತು ಪುರಾತನ ವಸ್ತುಗಳ (Antique Piece) ಮಾರಾಟದ ಹೆಸರಿನಲ್ಲಿ ಹಣ ತೊಡಗಿಸಿದರೆ ದ್ವಿಗುಣ (ಡಬಲ್) ಮಾಡಿಕೊಡುವುದಾಗಿ ನಂಬಿಸಿ, ತೀರ್ಥಹಳ್ಳಿಯ ಉದ್ಯಮಿಗಳಿಂದ ಲಕ್ಷಾಂತರ ರೂಪಾಯಿ ಪೀಕಿ ವಂಚಿಸಿರುವ ಆಘಾತಕಾರಿ ಪ್ರಕರಣ ಬೆಳಕಿಗೆ ಬಂದಿದೆ. ಹಣ ವಾಪಸ್ ಕೇಳಿದ್ದಕ್ಕೆ ಜೀವ ಬೆದರಿಕೆ ಹಾಕಿದ ಮೂವರು ಆರೋಪಿಗಳ ವಿರುದ್ಧ ಇದೀಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಿಪ್ಪನ್ಪೇಟೆಯ ನಾಗರಾಜ ಬಿನ್ ನಾರಾಯಣ ಮೇಸ್ತ್ರಿ (A1), ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಕೌರಿಕೊಪ್ಪದ ವಿಶ್ವನಾಥ ಬಿನ್ ದೇವು ಪೂಜಾರಿ (A2) ಹಾಗೂ ರಿಪ್ಪನ್ ಪೇಟೆ ಸಮೀಪ ಬಾಳೂರಿನ ನಾಗೇಂದ್ರ ಬಿನ್ ಲಿಂಗೋಜಿರಾವ್ (A3) ಎಂಬುವವರೇ ಈ ವಂಚನೆ ಜಾಲದ ಪ್ರಮುಖ ಆರೋಪಿಗಳಾಗಿದ್ದಾರೆ.
ವಂಚನೆಯ ಜಾಲ ಹೆಣೆದಿದ್ದು ಹೇಗೆ?
2018ರಲ್ಲಿ ತೀರ್ಥಹಳ್ಳಿಯ ಚಿನ್ನದ ವ್ಯಾಪಾರಿಗಳ ಪರಿಚಯ ಮಾಡಿಕೊಂಡಿದ್ದ ಪ್ರಮುಖ ಆರೋಪಿ ನಾಗರಾಜ, ತಾನು ಆ್ಯಂಟಿಕ್ ಪೀಸ್ (ಪುರಾತನ ವಸ್ತುಗಳ) ಮಾರಾಟದ ದೊಡ್ಡ ವ್ಯವಹಾರ ನಡೆಸುತ್ತಿರುವುದಾಗಿ ನಂಬಿಸಿದ್ದ. ಈ ವ್ಯವಹಾರದಲ್ಲಿ ಹಣ ಹೂಡಿಕೆ ಮಾಡಿದರೆ ಅತಿ ಕಡಿಮೆ ಸಮಯದಲ್ಲಿ ಹಣ ಡಬಲ್ ಆಗುತ್ತದೆ ಎಂದು ಭಾರೀ ಆಮಿಷವೊಡ್ಡಿದ್ದ. ಆರೋಪಿಯ ಬಣ್ಣದ ಮಾತುಗಳನ್ನು ನಂಬಿದ ವ್ಯಾಪಾರಿಗಳು, ಮೊದಲ ಬಾರಿಗೆ 2018ರಲ್ಲಿ ರಿಪ್ಪನ್ಪೇಟೆಯಲ್ಲಿರುವ ನಾಗರಾಜನ ಮನೆಗೆ ತೆರಳಿ 50,000 ರೂಪಾಯಿ ನಗದು ನೀಡಿದ್ದರು.
ಅಲ್ಲಿಂದ ಶುರುವಾದ ಈ ಹಣ ಸುಲಿಗೆಯಾಟ ವರ್ಷಗಳ ಕಾಲ ನಿರಂತರವಾಗಿ ಮುಂದುವರಿದಿದೆ. ಇನ್ನೇನು ದೊಡ್ಡ ಮಟ್ಟದ ಹಣ ಬರಲಿದೆ, ವ್ಯವಹಾರ ಅಂತಿಮ ಹಂತದಲ್ಲಿದೆ ಎಂದು ನಂಬಿಸುತ್ತಲೇ ಹೋದ ಆರೋಪಿಗಳು, ಹಂತ ಹಂತವಾಗಿ ಭಾರೀ ಮೊತ್ತದ ಹಣವನ್ನು ಕಬಳಿಸಿದ್ದಾರೆ.
ಆರೋಪಿಗಳ ಮಾತಿಗೆ ಮರುಳಾದ ವ್ಯಾಪಾರಿಗಳು 2020ರಿಂದ 2026ರವರೆಗೆ ನಿರಂತರವಾಗಿ ಫೋನ್ ಪೇ (PhonePe) ಹಾಗೂ ಬ್ಯಾಂಕ್ ಖಾತೆಗಳ ಮೂಲಕ ಹಣ ರವಾನಿಸಿದ್ದಾರೆ. 2020ರಲ್ಲಿ ಸಾವಿರಾರು ರೂಪಾಯಿಗಳಿಂದ ಶುರುವಾದ ಆನ್ಲೈನ್ ವರ್ಗಾವಣೆ, 2021ರಲ್ಲಿ 48,800 ರೂ., ನಂತರ 71,000 ರೂ., 2023ರಲ್ಲಿ ಬರೋಬ್ಬರಿ 7,24,100 ರೂ., 2024ರಲ್ಲಿ 1,07,200 ರೂ., 2025ರಲ್ಲಿ 46,000 ರೂ. ಹಾಗೂ 2026ರಲ್ಲಿ 1,28,000 ರೂಪಾಯಿಗಳನ್ನು ಫೋನ್ ಪೇ ಮೂಲಕವೇ ನಾಗರಾಜನ ಮೊಬೈಲ್ ಸಂಖ್ಯೆಗೆ ಕಳುಹಿಸಿದ್ದಾರೆ.
ಇಷ್ಟೇ ಅಲ್ಲದೆ, ನಾಗರಾಜನ ಹುಂಚ ಶಾಖೆಯ ಕರ್ನಾಟಕ ಬ್ಯಾಂಕ್ ಖಾತೆಗೆ ಒಟ್ಟು 10,83,700 ರೂಪಾಯಿಗಳನ್ನು ಜಮಾ ಮಾಡಲಾಗಿದೆ. ಫೋನ್ ಪೇ, ಬ್ಯಾಂಕ್ ಖಾತೆ ಹಾಗೂ ನಗದು ಸೇರಿ ಒಟ್ಟು 22,63,500 ರೂ. ಹಣವನ್ನು ಆರೋಪಿ ನಾಗರಾಜ ಪಡೆದುಕೊಂಡಿದ್ದಾನೆ. ಇದಲ್ಲದೆ ಸಹಚರರಾದ ವಿಶ್ವನಾಥ ಹಾಗೂ ನಾಗೇಂದ್ರ ಅವರಿಗೂ ಪ್ರತ್ಯೇಕವಾಗಿ ನಗದು ಹಣ ನೀಡಲಾಗಿದ್ದು, ಎರಡು ಬಾರಿ ಭಾರೀ ಮೊತ್ತದ ನಗದು ಹಣವನ್ನು ನಾಗರಾಜನ ಕೈಗೆ ನೀಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಹಣ ಕೇಳಿದ್ದಕ್ಕೆ ಕೊಲೆ ಬೆದರಿಕೆ!
ವರ್ಷಗಳು ಉರುಳಿದರೂ ಹಣ ಡಬಲ್ ಆಗದಿರುವುದು ಮತ್ತು ಅಸಲು ಹಣವೂ ಕೈ ಸೇರದಿರುವುದರಿಂದ ಅನುಮಾನಗೊಂಡ ವ್ಯಾಪಾರಿಗಳು, ತಮ್ಮ ಹಣವನ್ನು ವಾಪಸ್ ನೀಡುವಂತೆ ಆರೋಪಿಗಳನ್ನು ಒತ್ತಾಯಿಸಿದ್ದಾರೆ. ಈ ವೇಳೆ ನಿಜರೂಪ ತೋರಿಸಿದ ಆರೋಪಿ ನಾಗರಾಜ, “ಸ್ವಲ್ಪ ಸಮಯ ಕೊಡಿ, ಯಾವುದೇ ಕಾರಣಕ್ಕೂ ಪೊಲೀಸ್ ಕಂಪ್ಲೇಂಟ್ ಕೊಡಬೇಡಿ. ಒಂದು ವೇಳೆ ದೂರು ನೀಡಿದರೆ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ, ಮುಂದೆ ನೋಡಿಕೊಳ್ಳುತ್ತೇನೆ” ಎಂದು ಜೀವ ಬೆದರಿಕೆ ಹಾಕಿದ್ದಾನೆ.
2018ರಿಂದ ಇಲ್ಲಿಯವರೆಗೆ ಆ್ಯಂಟಿಕ್ ವ್ಯವಹಾರದ ಹೆಸರಿನಲ್ಲಿ ನಂಬಿಕೆ ದ್ರೋಹ ಎಸಗಿ, ಹಣ ವಾಪಸ್ ನೀಡದೆ ವಂಚಿಸಿರುವ ನಾಗರಾಜ, ವಿಶ್ವನಾಥ ಹಾಗೂ ನಾಗೇಂದ್ರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ದೂರಿನ ಮೇರೆಗೆ ಪೊಲೀಸರು ಪ್ರಥಮ ವರ್ತಮಾನ ವರದಿ (FIR) ದಾಖಲಿಸಿಕೊಂಡಿದ್ದು, ತನಿಖೆ ಚುರುಕುಗೊಳಿಸಿದ್ದಾರೆ.
