ಇಂಥ ಉಗ್ರನ ತಂದೆ ಮನ್ಸೂರ್ ಮಹಮದ್ ಅವರು ೨೬ ವರ್ಷ ಕಾಲ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರು. ಒಂದು ಸಜ್ಜನ ಕುಟುಂಬವನ್ನು ಮುನ್ನಡೆಸುತ್ತಿದ್ದರು.
ಮಗ ಉಗ್ರ ಚಟುವಟಿಕೆಗಳಲ್ಲಿ ತೊಡಗಿರುವ ಬಗ್ಗೆ ಮನ್ಸೂರ್ ಅಹಮದ್ ತಮ್ಮ ನೋವನ್ನು ಕೆಲವು ತಿಂಗಳುಗಳ ಹಿಂದೆ ಮಾದ್ಯಮಗಳೊಂದಿಗೆ ಹೀಗೆ ಹಂಚಿಕೊಂಡಿದ್ದರು.
ತನ್ನ ಹಿರಿಯ ಮಗ ಈ ರೀತಿಯಾಗಿ ಉಗ್ರ ಸಂಘಟನೆಯ ಜತೆ ಸಂಬಂಧ ಹೊಂದಿರುವುದು ಅವರಿಗೆ ತುಂಬ ನೋವುಂಟು ಮಾಡಿದೆ. ಇಂಥ ಘಟನೆಗಳು ಮನೆಯವರಿಗೆ ನೀಡುವ ನೋವು, ಅವರು ಅನುಭವಿಸುವ ಯಾತನೆ ಈ ಮಕ್ಕಳಿಗೆ ಅರ್ಥವಾಗುವುದೇ ಇಲ್ಲ ಎಂದು ಹೇಳಿಕೊಂಡಿದ್ದಾರೆ.
ʻʻಅವನು ನನ್ನ ದೊಡ್ಡ ಮಗ. ಅವನಿಗೆ ೨೮ ವರ್ಷ. ನನ್ನ ಮತ್ತೊಬ್ಬ ಮಗ ಹೋಟೆಲ್ ಮ್ಯಾನೇಜ್ಮೆಂಟ್ ಮಾಡುತ್ತಿದ್ದಾನೆ. ಮಗಳು ಪಿಯುಸಿ. ಯತೀನ್ ಬಿಇ. ಮಾಡುತ್ತೇನೆ ಎಂದು ಬೆಂಗಳೂರಿಗೆ ಹೋಗಿದ್ದ. ಆದರೆ ವಿದ್ಯಾಭ್ಯಾಸ ಡಿಸ್ ಕಂಟಿನ್ಯೂ ಮಾಡಿದ್ದಾನೆ. ಎಂಜಿನಿಯರಿಂಗ್ ಅರ್ಧಕ್ಕೆ ಬಿಟ್ಟು ಖಾಸಗಿ ಕಂಪನಿಯೊಂದರಲ್ಲಿ ಕೆಲಸಕ್ಕೆ ಸೇರಿದ್ದ. ೨೦೨೦ರಲ್ಲಿ ಅವನು ಇರುವ ಜಾಗದಲ್ಲಿ ಏನೋ ಸಮಸ್ಯೆ ಆಯಿತು ಅಂತ ಗೊತ್ತಾಯಿತು. ಮತೀನ್ 2020 ರಿಂದ ಇಲ್ಲಿಯವರೆಗೂ ಎಲ್ಲಿದ್ದಾನೆಂದು ಗೊತ್ತಿಲ್ಲ. ಆವತ್ತಿನಿಂದ ನಮಗೆ ಯಾವುದೇ ಸಂಪರ್ಕದಲ್ಲಿ ಇಲ್ಲʼʼ ಎಂದು ಹೇಳಿದರು ಮನ್ಸೂರ್ ಅಹಮದ್.
ʻʻನಾನು ೨೬ ವರ್ಷ ಭಾರತೀಯ ಸೇನೆಯಲ್ಲಿ ಕೆಲಸ ಮಾಡಿದ್ದೇನೆ. ನನ್ನ ಮಗ ಹೀಗೆ ಆಗಿದ್ದಾನೆ ಅಂತ ಯೋಚನೆ ಮಾಡುವುದಕ್ಕೂ ಸಾಧ್ಯವಾಗುತ್ತಿಲ್ಲ. ಅವನು ನಮ್ಮ ಮನೆಯ ಹಿರಿಮಗ. ನನ್ನ ಈ ವಯಸ್ಸಿನಲ್ಲಿ ಮನೆಗೆ ಆಧಾರವಾಗಿರಬೇಕಾಗಿದ್ದವನು. ಅವನಿಗೆ ಈ ಉಗ್ರರ ನಂಟು ಎಲ್ಲಿಂದ ಬಂತೋ ಗೊತ್ತಿಲ್ಲʼʼ ಎಂದು ಮನ್ಸೂರ್ ಅಹಮದ್ ಹೇಳಿದರು.
ʻʻಯಾರು ಬ್ರೇನ್ ವಾಷ್ ಮಾಡುತ್ತಾರೆ ಅಂತ ಗೊತ್ತಿಲ್ಲ. ಈಗ ಮೊಬೈಲ್ನಲ್ಲಿ ಯಾರ್ಯಾರು ಸಂಪರ್ಕಕ್ಕೆ ಸಿಗುತ್ತಾರೋ ಅವರೇನು ಹೇಳುತ್ತಾರೋ ಗೊತ್ತಿಲ್ಲ. ನಾವು ಅವನನ್ನು ಕಳೆದುಕೊಂಡಿದ್ದೇವೆ. ನೆಮ್ಮದಿಯನ್ನು ಕಳೆದುಕೊಂಡಿದ್ದೇವೆ. ನಮ್ಮ ನೋವು ನಮಗೆ ಮತ್ತು ದೇವರಿಗೆ ಮಾತ್ರ ಗೊತ್ತುʼʼ ಎಂದು ನೋವಿನಿಂದ ಹೇಳಿಕೊಂಡರು ಮನ್ಸೂರ್.
ವಿದ್ಯಾವಂತ ಯುವಕರೇ ಹೀಗೇಕಾಗುತ್ತಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಅವರೆಲ್ಲ ವಿದ್ಯಾವಂತರಾಗಿ ಮನೆಗೆ ಆಧಾರವಾಗಬೇಕು. ಅದರೆ, ಅವರೇ ಭಾಗವಾಗುತ್ತಿರುವುದು ನಮಗೆ ದಿಕ್ಕು ತೋಚದಂತಾಗಿದೆ ಎಂದರು. ಈಗ ಉಗ್ರ ಜಾಲದಲ್ಲಿದ್ದಾರೆಂದು ಗುರುತಿಸಲಾಗಿರುವ ಶಾರಿಕ್, ಯಾಸಿನ್, ಮಾಝ್ ಎಲ್ಲ ಸ್ನೇಹಿತರಾ ಎಂಬ ಪ್ರಶ್ನೆಗೆ, ಒಂದೇ ಊರಿನ ಮಕ್ಕಳು, ಸ್ನೇಹಿತರು ಹೌದೋ ಅಲ್ವೋ ಗೊತ್ತಿಲ್ಲ ಎಂದರು ಮನ್ಸೂರು.
ಬೆಳೆದು ಆಸರೆಯಾಗಿರಬೇಕಾಗಿದ್ದ ಮಕ್ಕಳು ಈ ರೀತಿ ದಿಕ್ಕು ತಪ್ಪಿ ಉಗ್ರರಾಗುತ್ತಿರುವುದು ಈ ಮಾಜಿ ಸೈನಿಕನ ಮನಸ್ಸಲ್ಲಿ ಗಾಢವಾದ ನೋವು ಉಂಟು ಮಾಡಿದ್ದು ಮಾತಿನ ಮಧ್ಯೆ ಎದ್ದು ಕಾಣುತ್ತಿತ್ತು.
 
                         
                         
                         
                         
                         
                         
                         
                         
                         
                        