ಬೃಹತ್ ಲಾರಿಯ ಚಕ್ರಕ್ಕೆ ಸಿಲುಕಿ ಮಹಿಳೆಯೊಬ್ಬರು ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನಲ್ಲಿ ಸಂಭವಿಸಿದೆ. ನಿನ್ನೆ ಬೆಳಗ್ಗೆ ಸಾಗರ ಪೇಟೆಯ ಐಬಿ ವೃತ್ತದ ಸಮೀಪ ಈ ಘಟನೆ ಸಂಭವಿಸಿದ್ದು, ಘಟನೆಯಲ್ಲಿ ಬೆಳಲಮಕ್ಕಿ ನಿವಾಸಿಯೊಬ್ಬರು ಸಾವನ್ನಪ್ಪಿದ್ದಾರೆ.
ನಗರದ ಷಾಹಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಿದ್ದ ಬೆಳಲಮಕ್ಕಿಯ 34ವರ್ಷದ ಪದ್ಮಾ ಅವರನ್ನು ಬೈಕ್‌ನಲ್ಲಿ ಅವರ ಮೈದುನ ರಘು ಕರೆದೊಯ್ಯುತ್ತಿದ್ದಾಗ ಬೃಹತ್ ಲಾರಿ ಹಿಮ್ಮುಖವಾಗಿ ಚಲಿಸಿದಾಗ ಬೈಕ್ ಉರುಳಿದೆ. ಈ ಸಂದರ್ಭದಲ್ಲಿ ಲಾರಿಯ ಚಕ್ರ ಪದ್ಮಾ ಅವರ ಮೇಲೆ ಹರಿದು ತೀವ್ರವಾಗಿ ಗಾಯಗೊಂಡಿದ್ದರು.
ತಕ್ಷಣ ಅವರನ್ನು ನಗರದ ಉಪವಿಭಾಗೀಯ ಆಸ್ಪತ್ರೆಗೆ ಸೇರಿಸುವ ಮುನ್ನವೇ ಅವರು ಕೊನೆಯುಸಿರೆಳೆದಿದ್ದರು.
ರಘು ಅವರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಚಾಲಕನ ವಿರುದ್ಧ ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.