PUC RESULT | ರಾಜ್ಯಕ್ಕೆ ಎರಡನೇ ರ್‍ಯಾಂಕ್ ಪಡೆದ ಅನ್ವಿತಾ ರವರಿಗೆ ಪೋಸ್ಟ್ ಮ್ಯಾನ್ ಸುದ್ದಿಸಂಸ್ಥೆಯಿಂದ ಸನ್ಮಾನ – IAS ಗುರಿ ಹೊಂದಿರುವ ಗ್ರಾಮೀಣ ಪ್ರತಿಭೆಯ ಮನದಾಳದ ಮಾತು
ರಿಪ್ಪನ್ ಪೇಟೆ : ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ರ್‍ಯಾಂಕ್ ಪಡೆದ ಗ್ರಾಮೀಣ ಪ್ರತಿಭೆ ಡಿ ಎನ್ ಅನ್ವಿತಾ ರವರಿಗೆ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಶಿವಮೊಗ್ಗದ ವಿಕಾಸ ಪಿಯುಸಿ ಕಾಂಪೊಸಿಟ್ ಪಿಯು ಕಾಲೇಜಿನ ವಾಣಿಜ್ಯ ವಿಭಾಗದ ಡಿ.ಎನ್. ಅನ್ವಿತಾ 600ಕ್ಕೆ 596 ಅಂಕಗಳನ್ನು ಗಳಿಸಿ, ರಾಜ್ಯಕ್ಕೆ ಎರಡನೆ ರ್‍ಯಾಂಕ್ ಪಡೆದಿದ್ದಾರೆ. 
ಬಡ ರೈತ ಕುಟುಂಬದಲ್ಲಿ ಜನಿಸಿದ ಅನ್ವಿತಾ.ಡಿ.ಎ.  ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕು ಮಲ್ಲೇಸರ ಗ್ರಾಮದವರು. ತಂದೆ ನಾಗರಾಜ ಅವರು ಕೃಷಿಕರು. ತಾಯಿ ಅನುಸೂಯ. ಮಗಳು ರಾಜ್ಯಕ್ಕೆ ಎರಡನೇ ರ್‍ಯಾಂಕ್ ಪಡೆದ ವಿಚಾರ ತಿಳಿದು ಖುಷಿಯಾಗಿದ್ದಾರೆ.
ಸಾಧನೆಗೆ ಅಸಾಧ್ಯವಾದುದು ಯಾವುದು ಇಲ್ಲ ಆದರೆ ಸಾಧಿಸುವ ಛಲ ಮನುಷ್ಯನಿಗೆ ಇರಬೇಕು ತಾನು ಹಿಡಿದ ಕಾರ್ಯದಲ್ಲಿ ದೃಢವಾದ ನಂಬಿಕೆ  ಅಚಲವಾದ ಮನಸ್ಸು,ನಿರಂತರ ಪರಿಶ್ರಮದಿಂದ ಗುರಿ ಮುಟ್ಟಬಹುದು ಎಂಬುದಕ್ಕೆ ಗ್ರಾಮೀಣ ಭಾಗದ ಪ್ರತಿಭೆ ಅನ್ವಿತಾ ಅತ್ಯುತ್ತಮ ಉದಾಹರಣೆಯಾಗಿದ್ದಾಳೆ.
ನೊಣಬೂರಿನ ಸರಕಾರಿ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಪಡೆದ ಇವಳು ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ 625 ಅಂಕಗಳಿಗೆ 607 ಅಂಕಗಳನ್ನು ಪಡೆದುಕೊಂಡಿದ್ದಳು.
ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯಿಂದ ಸನ್ಮಾನ ಸ್ವೀಕರಿಸಿ ನಂತರ ಮಾತನಾಡಿ ಕಾಲೇಜಿನ ಉಪನ್ಯಾಸಕರು ಹಾಗೂ ಶಿವಮೊಗ್ಗದ ತೇಜಸ್ ಟ್ರಸ್ಟಿನ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ನನ್ನ ಶೈಕ್ಷಣಿಕ ಚಟುವಟಿಕೆಗಳಿಗೆ ಬೆಂಬಲವಾಗಿದ್ದರು.ತರಗತಿಗಳಲ್ಲಿ ಯಾವುದೆ ಸಂದೇಹಗಳಿದ್ದರೂ ಕೇಳಿದಾಗಲೆ ಉಪನ್ಯಾಸಕ ವೃಂದದವರು ಅದನ್ನು ಬಗೆಹರಿಸುತ್ತಿದ್ದರು.
ಆಯಾ ದಿನದ ಪಾಠಗಳನ್ನು ಅಂದೇ ವರ್ಕ್ ಮಾಡುತ್ತಿದ್ದೆ. ಊರಿನಿಂದ ಓಡಾಡುವುದು ಕಷ್ಟ. ಹಾಗಾಗಿ ವಿಕಾಸ ಕಾಲೇಜಿನ ಹಾಸ್ಟೆಲ್‌ನಲ್ಲಿದ್ದೆ. ಅಲ್ಲಿಯೂ ಓದುವ ವಾತಾವರಣ ಇದೆ. ಹಾಗಾಗಿ ಓದಲು ತುಂಬಾ ಅನುಕೂಲವಾಯಿತು. ಹೆಚ್ಚು ಅಂಕ ಪಡೆದ ವಿಚಾರ ತಿಳಿದು ಅಪ್ಪ, ಅಮ್ಮ ತುಂಬಾ ಖುಷಿಯಾಗಿದ್ದಾರೆ. ಮುಂದೆ ವಾಣಿಜ್ಯ ವಿಭಾಗದಲ್ಲಿ ಪದವಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಗಳಿಸಿ, ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳಬೇಕು ಎಂಬ ಯೋಚನೆ ಇದೆ ಎಂದು ತಿಳಿಸಿದರು.
ಪದವಿ ಪರೀಕ್ಷೆ ಹಾಗೂ ಯುಪಿಎಸ್ಸಿ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದು ಉನ್ನತ ಉದ್ಯೋಗವನ್ನು ಅಲಂಕರಿಸಿ ಸಮಾಜದ ಮುಖ್ಯ ವಾಹಿನಿಗೆ  ಬಂದು  ಜನ ಸಾಮಾನ್ಯ ರಿಗೆ ಒಳಿತು ಮಾಡಲಿ ಎಂಬುವುದೇ ಪೋಸ್ಟ್ ಮ್ಯಾನ್ ಸುದ್ದಿ ಸಂಸ್ಥೆಯ ಆಶಯ….
ಈ ಸಂಧರ್ಭದಲ್ಲಿ ಹಿರಿಯ ಪತ್ರಕರ್ತರುಗಳಾದ ಕೆ ಎಂ ಬಸವರಾಜ್ ,ಸೆಬಾಸ್ಟಿಯನ್ ಮ್ಯಾಥ್ಯೂಸ್ ಮತ್ತು ಪೋಸ್ಟ್ ಮ್ಯಾನ್ ನ್ಯೂಸ್ ಸಂಪಾದಕ ರಫ಼ಿ ರಿಪ್ಪನ್‌ಪೇಟೆ , ಆರ್ ಡಿ ಶೀಲಾ ಮತ್ತು ರಾಘವೇಂದ್ರ ಇದ್ದರು..
 
                         
                         
                         
                         
                         
                         
                         
                         
                         
                        
