ಶಿವಮೊಗ್ಗ: ಜಿಲ್ಲೆಯ ಮೂರು ಕಡೆಗಳಲ್ಲಿ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ 9.15 ಕೋಟಿ ರೂ. ದಾಖಲೆ ಇಲ್ಲದ ಹಣ ಪತ್ತೆಯಾಗಿದೆ.
ಶಿವಮೊಗ್ಗದ ಸಾಗರ, ಸೊರಬ ಮತ್ತು ಶಿಕಾರಿಪುರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ಬೃಹತ್ ಮೊತ್ತದ ಹಣ ಪತ್ತೆಯಾಗಿದೆ. ಎಟಿಎಂಗೆ ಹಣ ತುಂಬುವ ವಾಹನಗಳಲ್ಲಿ ಈ ಹಣವನ್ನು ಅನಧಿಕೃತವಾಗಿ ತುಂಬಿಕೊಂಡು ಹೋಗಲಾಗುತ್ತಿತ್ತು. ಇದು ಯಾರ ಹಣ, ಎಲ್ಲಿಗೆ ಸಾಗಿಸಲಾಗುತ್ತಿತ್ತು? ಚುನಾವಣೆಗೂ ಇದಕ್ಕೂ ಏನಾದರೂ ಸಂಬಂಧವಿದೆಯೇ ಎನ್ನುವ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
ಶಿವಮೊಗ್ಗ ಜಿಲ್ಲೆ ಸಾಗರ ವಿಧಾನಸಭಾ ಕ್ಷೇತ್ರದಲ್ಲಿ ಎಟಿಎಂಗೆ ಹಣ ಹಾಕುವ ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಅಧಿಕೃತ ಮೊತ್ತಕ್ಕಿಂತ 3.7 ಕೋಟಿ ರೂ. ಹೆಚ್ಚುವರಿ ಇರುವುದು ಪತ್ತೆಯಾಗಿದೆ. ಸಾಗರ ಗ್ರಾಮಾಂತರ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದಾರೆ. 3,07,50,000 ರೂ.ನಗದು ಹಣದ ಮೂಲವನ್ನು ಪತ್ತೆ ಹಚ್ಚಲಾಗುತ್ತಿದೆ.
ಶಿಕಾರಿಪುರ, ಸೊರಬ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲೂ ಇಂಥಹುದೇ ಘಟನೆ ನಡೆದಿದ್ದು, ದಾಖಲೆ ಇಲ್ಲದ 5.45 ಕೋಟಿ ರೂ. ನಗದನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಶಿರಾಳಕೊಪ್ಪ, ಆನವಟ್ಟಿ ಪೊಲೀಸರು ತಪಾಸಣೆ ನಡೆಸುತ್ತಿದ್ದಾಗ ಎಟಿಎಂಗೆ ಹಣ ಸಾಗಿಸುವ ವ್ಯಾನ್‌ನಲ್ಲಿ ದಾಖಲೆ ಇಲ್ಲದ ಹಣ ಸಿಕ್ಕಿದೆ.