ಮಗುವಿಗೆ ಹಾಲುಣಿಸಲು ಎದೆಹಾಲು ಕಡಿಮೆಯಾಗಿದೆ ಎಂದು ಮನನೊಂದು ತನ್ನ ಪುಟ್ಟ ಕಂದಮ್ಮನೊಂದಿಗೆ ಕೆರೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರೋ ಹೃದಯ ವಿದ್ರಾವಕ ಘಟನೆ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆಯಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಕುಪ್ಪಗಡ್ಡೆಯ ಶಾಂತಾ(28) ಅವರನ್ನು ಸಮೀಪದ ಜಡ್ಡೆಹಳ್ಳಿ ಗ್ರಾಮಕ್ಕೆ ಮದುವೆ ಮಾಡಿಕೊಡಲಾಗಿತ್ತು. ಹೆರಿಗೆಯ ನಂತ್ರ ಆಕೆ ತವರು ಮನೆಯಾದಂತ ಕುಪ್ಪಗಡ್ಡೆಗೆ ಬಂದಿದ್ದರು.
ಹೆರಿಗೆಯ ಬಳಿಕ ಶಾಂತಾಗೆ ಎದೆಹಾಲು ಬರುತ್ತಿರಲಿಲ್ಲ. ಬಂದರೂ ಒಂದೂವರೆ ತಿಂಗಳ ಮಗುವಿಗೆ ಸಾಕಾಗುವಷ್ಟು ಆಗುತ್ತಿರಲಿಲ್ಲ ಎನ್ನಲಾಗುತ್ತಿದೆ. ಈ ಕಾರಣದಿಂದ ಮಗು ಸೊರಗಿ ಹೋಗಿದೆ ಎಂಬುದಾಗಿ ಮನನೊಂದಿದ್ದಾರೆ.
ಮಗುವಿಗೆ ಎದೆಹಾಲು ಬರುತ್ತಿಲ್ಲ ಎನ್ನುವ ಕಾರಣಕ್ಕೆ ಮನನೊಂದು ಶನಿವಾರ ತಡರಾತ್ರಿ ಕುಪ್ಪಗಡ್ಡೆ ಸಮೀಪದ ತುಂಬೆಹೊಂಡಕ್ಕೆ ಶಾಂತಾ ಹಾಗೂ ಒಂದೂವರೆ ತಿಂಗಳ ಮಗು ಸಹಿತ ಹಾರಿ ಆತ್ಮಹತ್ಯೆ ಮಾಡಿಕೊಂಡಿರೋ ಹೃದಯ ವಿದ್ರಾವಕ ಘಟನೆ ನಡೆದಿದೆ.
ಭಾನುವಾರದಂದು ಶಾಂತಾ ಹಾಗೂ ಮಗು ಕಾಣದೇ ಇದ್ದಾಗ ಕುಟುಂಬಸ್ಥರು ಹುಡುಕಾಡಿದ್ದಾರೆ. ಗ್ರಾಮದ ಸಮೀಪದ ತುಂಬೆಹೊಂಡದಲ್ಲಿ ಒಂದೂವರೆ ತಿಂಗಳ ಪುಟ್ಟ ಕಂದಮ್ಮ ಮಂಗಳಗೌರಿ ತೇಲುತ್ತಿದ್ದು ಕಂಡು ಬಂದಿದೆ.
ಆ ಬಳಿಕ ಅಗ್ನಿಶಾಮ ಸಿಬ್ಬಂದಿಗೆ ಮಾಹಿತಿ ನೀಡಿ, ತಾಯಿ, ಮಗಳ ಶವವನ್ನು ಹೊರತೆಗೆಯಲಾಗಿದೆ.
ಈ ಸಂಬಂಧ ಆನವಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.